Advertisement

Sarapady: ನೇತ್ರಾವತಿಯಿದ್ದೂ ನೀರಿಗೆ ಬರ; ಎಎಂಆರ್‌ ನಿಂದ ಹೊರಬಿಟ್ಟ ನೀರು

04:03 PM Apr 14, 2023 | Team Udayavani |

ಪುಂಜಾಲಕಟ್ಟೆ: ಜಿಲ್ಲೆಯ ಜನರ ಜೀವನದಿ ನೇತ್ರಾವತಿ ಸರಪಾಡಿಯಲ್ಲಿ ಬರಿದಾಗಿದೆ. ಇದರಿಂದಾಗಿ ಸುತ್ತ ಮುತ್ತಲ 9 ಗ್ರಾಮಗಳ ಜನರಿಗೆ ನೀರಿನ ಅಭಾವ ಕಂಡು ಬಂದಿದೆ. ಜನ ಕುಡಿಯುವ ನೀರಿಗೆ ತತ್ವಾರ ಪಡುವ ಸ್ಥಿತಿ ನಿರ್ಮಾಣಗೊಂಡಿದೆ.

Advertisement

ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ ಸರಪಾಡಿಯಲ್ಲಿ ಅನುಷ್ಠಾನ ಗೊಂಡಿದ್ದರೂ, ಮಂಗಳೂರು ಮಹಾ ನಗರದ ಜನತೆಗೆ ನೀರೊದಗಿಸಲು ಶಂಭೂರು ಎಎಂಆರ್‌ ಅಣೆಕಟ್ಟಿನ ನೀರನ್ನು ಹರಿಯಬಿಟ್ಟ ಪರಿಣಾಮ ಸರಪಾಡಿ ಪರಿಸರದಲ್ಲಿ ನೇತ್ರಾವತಿ ಬರಿದಾಗಿದೆ.

ಮಂಗಳೂರಿಗೆ ಕುಡಿಯುವ ನೀರು ಪೂರೈಸಲು ತುಂಬೆಯಲ್ಲಿ ಕಟ್ಟಿರುವ ಅಣೆಕಟ್ಟಿನಿಂದಾಗಿ ಸರಪಾಡಿ ಸುತ್ತಮುತ್ತಲ ಮೇಲ್ಭಾಗದ ಪ್ರದೇಶಗಳಿಗೆ ನೀರಿನ ಕೊರತೆಯಾಗಿದೆ. ಅಂತರ್ಜಲವೂ ಬತ್ತಿ ಹೋಗಿ ಕೊಳವೆ ಬಾವಿಯಲ್ಲಿ ಯೂ ನೀರು ಬತ್ತಿದೆ. ಮಳೆಗಾಲದಲ್ಲಿ ಅಣೆಕಟ್ಟಿನಿಂದಾಗಿ ಮುಳುಗಡೆಯಾಗುವ ಪೆರ್ಲ- ಬೀಯಪಾದೆ ಪ್ರದೇಶ ಬೇಸಗೆಯಲ್ಲಿ ಬರಡಾಗಿದೆ. ಜನರು ಕುಡಿಯಲು ಹಾಗೂ ಕೃಷಿ ಉಳಿಸಲು ಖಾಸಗಿಯಾಗಿ ನದಿಗೆ ಪಂಪ್‌ ಅಳವಡಿಸಿ ಒಂದೂವರೆ ಕಿ.ಮೀ. ದೂರದವರೆಗೆ ಪೈಪ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಿ ಕೊಂಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಜನತೆಗೆ ಇನ್ನು ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ತುಂಬೆ ಡ್ಯಾಂನಲ್ಲಿ 6 ಮೀಟರ್‌ ನೀರಿನ ಮಟ್ಟ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಎಂಆರ್‌ ಡ್ಯಾಂನಿಂದ ಎಲ್ಲ ಗೇಟ್‌ ತೆರೆದು ನೀರು ಬಿಡಲಾಗಿದೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 97 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಿಂದ ಸರಪಾಡಿ, ಮಣಿನಾಲ್ಕೂರು, ಉಳಿ, ಬಡಗಕಜೆಕಾರು, ಕಾವಳಮೂಡೂರು, ಕಾವಳಪಡೂರು, ಇರ್ವತ್ತೂರು, ಪಿಲಾತಬೆಟ್ಟು, ನಾವೂರು ಪಂಚಾಯತ್‌ಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಇದರಿಂದ ಈ ಭಾಗದ ಜನತೆಯ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಶಂಭೂರು ಎಎಂಆರ್‌ ಡ್ಯಾಂನಲ್ಲಿ ನೀರು ನಿಂತರೆ ಸಾಕಷ್ಟು ನೀರು ದೊರೆಯುತ್ತದೆ. ಆದರೆ ಇದೀಗ ಸರಪಾಡಿ ಜ್ಯಾಕ್‌ವೆಲ್‌ನಲ್ಲಿ ನೀರಿಲ್ಲದೆ ನೀರು ಸರಬರಾಜು ಸ್ಥಗಿತಗೊಂಡಿದ್ದು, ಜನರು ಸಂಕಷ್ಟಕ್ಕೊಳಗಾಗಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಈ ವ್ಯವಸ್ಥೆಯನ್ನೇ ನಂಬಿದ ಜನ ತೆಗೆ ಕೆಲವು ಕಡೆ ಪಂಚಾಯತ್‌ ಸದಸ್ಯರು ಟ್ಯಾಂಕರ್‌ ಮೂಲಕ ನೀರನ್ನು ವಿತರಣೆ ಮಾಡುತ್ತಿರುವುದು ಕಂಡು ಬಂದಿದೆ.

Advertisement

ಕ್ರಮ ಸರಿಯಲ್ಲ
ಶಂಭೂರು ಡ್ಯಾಂನಿಂದ ಜನರ ಕುಡಿಯುವ ನೀರಿಗೆ ಆಸರೆಯಾದ ನೇತ್ರಾವತಿ ನದಿ ನೀರನ್ನು ಹರಿಯಬಿಟ್ಟ ಕ್ರಮ ಸರಿಯಲ್ಲ, ಇದರಿಂದಾಗಿ ಗ್ರಾಮೀಣ ಪ್ರದೇಶದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ.

ಕಾವಳಪಡೂರು ಗ್ರಾಮದಲ್ಲಿಯೂ ಸಮಸ್ಯೆ
ಎಎಂಆರ್‌ ಡ್ಯಾಂನಿಂದ ನೀರು ಒಮ್ಮೆಲೇ ತುಂಬೆ ಡ್ಯಾಂಗೆ ಬಿಟ್ಟಿರುವುದರಿಂದ ಕಾವಳಪಡೂರು ಗ್ರಾಮದಲ್ಲಿಯೂ ನೀರಿನ ಸಮಸ್ಯೆಯಾಗಿದೆ. ಹೆಚ್ಚಿನ ಗ್ರಾಮಸ್ಥರು ನೀರಿಗಾಗಿ ಸಮಗ್ರ ಕುಡಿಯುವ ನೀರಿನ ಯೋಜನೆಯ ನೀರನ್ನೇ ನಂಬಿದ್ದರು. ಕೊಳವೆ ಬಾವಿಯಲ್ಲಿ ನೀರು ಕಡಿಮೆ ಇದೆ. ಅದಕ್ಕಾಗಿ ಖಾಸಗಿ ಯವರ ಕೊಳವೆ ಬಾವಿಯಿಂದ ನೀರನ್ನು ಪಿಕಪ್‌ ಮೂಲಕ ಗ್ರಾಮಸ್ಥರಿಗೆ ಸರಬರಾಜು ಮಾಡುತ್ತಿದ್ದೇವೆ. ಬೇಸಗೆ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿರುವ ಗ್ರಾಮಸ್ಥರಿಗೆ ಇದರಿಂದ ದೊಡ್ಡ ಸಮಸ್ಯೆಯಾಗಿದೆ ಎಂದು ಕಾವಳಪಡೂರು ಪಂಚಾಯತ್‌ ಸದಸ್ಯ ವೀರೇಂದ್ರ ಹೇಳಿದ್ದಾರೆ.

ನೀರು ಸರಬರಾಜು ಮಾಡಲಾಗುವುದು
ಎಎಂಆರ್‌ ಡ್ಯಾಮ್‌ನಿಂದ ನೀರನ್ನು ಹೊರಬಿಟ್ಟಿರುವುದರಿಂದ ಸರಪಾಡಿ ಪರಿಸರದಲ್ಲಿ ನೇತ್ರಾವತಿ ಬರಿದಾಗಿದೆ. ಈಗ ನದಿಯಲ್ಲಿ ದೊಡ್ಡ ಹೊಂಡಗಳಲ್ಲಿ ಮಾತ್ರ ನೀರು ಇದೆ. ಅದನ್ನು ಶುದ್ಧೀಕರಣ ಮಾಡಿ ಅದರಿಂದ ಪಂಪ್‌ ಮೂಲಕ ಮೇಲೆತ್ತಿ ನೀರು ಸರಬರಾಜು ಮಾಡಲಾಗುವುದು.
– ಜಿ. ಕೆ. ನಾಯಕ್‌, ಎಇಇ, ಗ್ರಾಮೀಣ
ಕುಡಿಯುವ ನೀರು ಮತ್ತು ನೈರ್ಮಲ್ಯ, ಬಂಟ್ವಾಲ ಉಪ ವಿಭಾಗ

 

Advertisement

Udayavani is now on Telegram. Click here to join our channel and stay updated with the latest news.

Next