ಭಾಲ್ಕಿ: ಬಸವಾದಿ ಶರಣರ ಬದುಕು ಎಲ್ಲಿರಿಗೂ ಪ್ರೇರಣೆಯಾಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಗೋರಚಿಂಚೋಳಿ ಗ್ರಾಮದ ಶಿವಯೋಗಿ ಸಿದ್ದರಾಮೇಶ್ವರ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅನುಭಾವ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕು ಅತ್ಯಂತ ಪವಿತ್ರವಾದದ್ದು, ವ್ಯಕ್ತಿಯ ಅಂತರಂಗ, ಬಹಿರಂಗ ಸ್ವಚ್ಛತೆ ಆದಾಗ ಕಲ್ಯಾಣ ರಾಜ್ಯ ನಿರ್ಮಾಣ ಆಗಲು ಸಾಧ್ಯವಾಗುತ್ತದೆ. ಬಸವಾದಿ ಶರಣರ ಚಿಂತನೆಗಳು, ತತ್ವಗಳು ಮನುಕೂಲದ ಕಲ್ಯಾಣಕ್ಕೆ ಪೂರಕವಾಗಿವೆ. ಪ್ರತಿಯೊಬ್ಬರೂ ಶರಣರ ಚರಿತ್ರೆಯನ್ನು ಅಧ್ಯಯನ ಮಾಡಿ ತಮ್ಮ ಜೀವನ ಪಾವನವಾಗಿಸಿಕೊಳ್ಳಬೇಕು ಎಂದರು.
ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮಹಾತ್ಮರು ಬಂದಾಗ ಸಮಯ ಇಲ್ಲ ಅನ್ನಬಾರದು ಏಕೆಂದರೇ ಮಹಾತ್ಮರ ಆಗಮನವನ್ನು ಗುಡಿ ತೋರಣವ ಕಟ್ಟಿ ಸ್ವಾಗತಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆ ಆಗಿದೆ. ಹೀಗಾಗಿ ನಮ್ಮ ಮನೆ ಮಹಾಮನೆ, ಗ್ರಾಮ ಕಲ್ಯಾಣ ಗ್ರಾಮವಾಗಲು ಸಿದ್ದೇಶ್ವರ ಶ್ರೀಗಳ ನೀಡುವ ಉಪದೇಶ ಎಲ್ಲರೂ ಪಾಲಿಸಬೇಕು ಎಂದರು.
ಸಿದ್ದರಾಮೇಶ್ವರ ಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಈ ಸಂದರ್ಭದಲ್ಲಿ ಮಲಗುಂಡಿಯ ಬಸವಾನಂದ ಸ್ವಾಮೀಜಿ ಸೇರಿದಂತೆ ಹಲವರು ಇದ್ದರು.