ಬೆಂಗಳೂರು: ಜರಗನಹಳ್ಳಿ ವಾರ್ಡ್ ವ್ಯಾಪ್ತಿಯ ಸಾರಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಮುಗಿಸುವಂತೆ ಮೇಯರ್ ಗಂಗಾಂಬಿಕ ಮಲ್ಲಿಕಾರ್ಜುನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ಸಾರಕ್ಕಿಕೆರೆ ಅಭಿವೃದ್ಧಿ ಕೆಲಸಗಳ ಪರಿಶೀನೆ ನಡೆಸಿದ ಮೇಯರ್, ಸಾರಕ್ಕಿ ಕೆರೆ ಸುತ್ತಲು ಜಲಮಂಡಳಿ ಸ್ಯಾನಿಟರಿ ಪೈಪ್ ಲೈನ್ ಅಳವಡಿಸದೆ ಇರುವುದರ ಬಗ್ಗೆ ತರಾಟೆ ತೆಗೆದುಕೊಂಡರು.
“ನೀವು ಮಾಡಬೇಕಾದ ಕೆಲಸವನ್ನು ಬಿಬಿಎಂಪಿ ಮಾಡುತ್ತಿದೆ. ಪ್ರತಿಬಾರಿಯೂ ನಿಮಗೆ ಎಚ್ಚರಿಕೆ ನೀಡಬೇಕೆ? ಎಂದು ಜಲಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರು. ತ್ಯಾಜ್ಯ ನೀರು ನೇರವಾಗಿ ಕೆರೆಗೆ ಸೇರುತ್ತಿದೆ. ಬಿಬಿಎಂಪಿ ಕೋಟ್ಯಾಂತರ ರೂ. ವ್ಯಯಿಸಿ ಕಾಮಗಾರಿ ನಡೆಸುತ್ತಿದೆ. ಆದರೆ, ನೀವು ತ್ಯಾಜ್ಯ ನೀರನ್ನು ಕೆರೆಗೆ ಹರಿಯಲು ಬಿಡುತ್ತಿದ್ದಿರ ಎಂದು ಜಲ ಮಂಡಳಿಯ ಅಧಿಕಾರಿಗಳ ಮೇಲೆ ಗರಂ ಆದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಲಮಂಡಳಿ ಅಧಿಕಾರಿಗಳು ಇನ್ನು 15 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. 15 ದಿನಗಳಲ್ಲಿ ಸ್ಯಾನಿಟರಿ ಪೈಪ್‌ಲೈನ್ ಅಳವಡಿಸದೆ ಇದ್ದರೆ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಎಚ್ಚರಿಕೆ ನೀಡಿದರು.
ಕೆರೆ ಭಾಗದಲ್ಲಿ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿದ್ದು, ಅದನ್ನು ಕೂಡಲೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, “ಕೆರೆಯನ್ನು 2016ರಲ್ಲಿ ಬಿಡಿಎಯಿಂದ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಕೆರೆ ಅಭಿವೃದ್ಧಿಗೆ 2016-17ರಲ್ಲಿ ರಾಜ್ಯ ಸರ್ಕಾರದ ನಗರೋತ್ಥಾನ ಅನುದಾನದಡಿ 6 ಕೋಟಿ ರೂ., 2017-18ರಲ್ಲಿ ಜಿಒಕೆ ಅನು ದಾನದಡಿ 5.75 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಳೆದ ವರ್ಷ ಬಿಬಿಎಂಪಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತು.
ಈಗಾಗಲೇ ಕೆರೆ ಸುತ್ತಲೂ ತಡೆಗೋಡೆ ನಿರ್ಮಿಸುವ ಹಾಗೂ ಎರಡು ಮುಖ್ಯ ದ್ವಾರಗಳ ನಿರ್ಮಾಣ ಕಾರ್ಯ ಮುಗಿದಿದೆ. ಮಳೆ ನೀರು ಕೆರೆಗೆ ಸರಾಗವಾಗಿ ಸೇರಲು ಒಂಬತ್ತು ಕಡೆಸಿಮೆಂಟ್ ಕೊಳವೆಗಳನ್ನು ಅಳವಡಿಸಲಾಗಿದೆ. 3.2 ಕಿ.ಮೀ ಉದ್ದದ ವಾಯುವಿಹಾರ ಪಥ ನಿರ್ಮಾಣದ ಕೆಲಸ ಮತ್ತು ಎರಡು ಕಡೆ ಕೋಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
14.49 ಕೋಟಿಯಲ್ಲಿ ಎಸ್‌ಟಿಪಿ ಅಳವಡಿಕೆ: ಜರಗನಹಳ್ಳಿ ಮತ್ತು ಆರ್‌ಬಿಐ ಬಡಾವಣೆಗಳಿಂದ ಕೆರೆಗೆ ಸೇರುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಜಲಮಂಡಳಿ ವತಿಯಿಂದ ಎಂಟು ಎಕರೆ ಪ್ರದೇಶದಲ್ಲಿ 14.49 ಕೋಟಿ ರೂ. ವ್ಯಯಿಸಿ 50 ಲಕ್ಷ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ನಿರ್ಮಾಣ ಮಾಡಲಾಗುತ್ತಿದೆ. ಎಸ್‌ಟಿಪಿಯಿಂದ ಸಂಸ್ಕರಿಸುವ ನೀರನ್ನು ವಾಯುವಿಹಾರದ ಪಕ್ಕದಲ್ಲಿ ಕೊಳವೆಗಳನ್ನು ಅಳವಡಿಸಿ ಕೆರೆಗೆ ಬಿಡಲಾಗುವುದು ಎಂದು ಜಲಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದರು.