ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ನಿಖರ ಸಂಖ್ಯೆಯನ್ನು ಜಿಲ್ಲಾಡಳಿತ ಮುಚ್ಚಿಟ್ಟಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲವೇ? ನಿಮಗೆ ತಾಯಿ ಹೃದಯವೇ ಇಲ್ಲವೇ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಮಾಜಿ ಸಚಿವ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಯಲ್ಲಿ ಮಾತಾನಾಡಿದ ಅವರು, ಸಾವಿನ ಸಂಖ್ಯೆಯನ್ನು ನೋಡಿ ನನಗೆ ಆಘಾತವಾಗಿದೆ, ಮೈಸೂರು ನಗರ ವ್ಯಾಪ್ತಿಯಲ್ಲಿ ಮೇ 1 ರಿಂದ ಮೇ 29ರವರೆಗೆ 969 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕ ಕೊಟ್ಟಿದೆ. 731 ಸಾವುಗಳ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದು ಆರೋಪಿಸಿ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿದರು.
ಮೇ ಒಂದೇ ತಿಂಗಳಲ್ಲಿ 3 ಸಾವಿರ ಜನ ಮೈಸೂರು ಜಿಲ್ಲೆಯಲ್ಲಿ ಜನ ಸತ್ತಿದ್ದಾರೆ. ಮೋಸದ ಅಂಕಿ ಅಂಶಗಳಿಂದ ಇಡೀ ಸರ್ಕಾರ ಹಾಗೂ ವ್ಯವಸ್ಥೆಯನ್ನೇ ವಂಚಿಸಿದ್ದಾರೆ. ಸತ್ತವರಿಗೂ ದ್ರೋಹ ಮಾಡಿದ್ದಾರೆ. ಸರ್ಕಾರ, ಸಿಎಂ, ಮುಖ್ಯ ಕಾರ್ಯದರ್ಶಿಗೂ ಜಿಲ್ಲಾಡಳಿತದಿಂದ ಯಾಕೆ ತಪ್ಪು ಮಾಹಿತಿ ನೀಡಿದ್ದೀರಿ? ಸಮರ್ಪಕ ಮಾಹಿತಿ ನೀಡಿದ್ದರೆ ಇನ್ನಷ್ಟು ಮುಂಜಾಗ್ರತೆ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿತ್ತೋ ಏನೋ ಎಂದು ಕಿಡಿಕಾರಿದರು.
ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಹೇಗೆ ಕೆಲಸ ಮಾಡಿದ್ದರು ಎನ್ನುವ ಕಾರಣಕ್ಕೆ ಇವರು ಮೈಸೂರಿಗೆ ಸೂಕ್ತವಲ್ಲ ಎಂದಯ ನಾವು ಹೇಳಿದ್ದು, ಆರಂಭದಲ್ಲಿ ಮೈಸೂರು ಸಂಸದರು ಇವರನ್ನು ಸಮರ್ಥನೆ ಮಾಡುತ್ತಿದ್ದರು. ಈಗ ಜ್ಞಾನೋದಯವಾಗಿ ಅವರು ಧ್ವನಿ ಎತ್ತಿದ್ದಾರೆ ಎಂದು ಡಿಸಿ ವಿರುದ್ಧ ಕಿಡಿಕಾರಿದರು.
ಸತ್ತವರ ಮಾಹಿತಿ ಮರೆಮಾಚಿದ್ದರ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ಮಾಹಿತಿ ಕೊಡುವೆ. ಸಿಎಂ ಹಾಗೂ ರಾಜ್ಯಪಾಲರು ಇಬ್ಬರಿಗೂ ಕಳುಹಿಸುತ್ತೇನೆ. ಸಾವಿನ ಸಂಖ್ಯೆ ಹೆಚ್ಚಿದ್ದರೂ ಸಾವು ಇಳಿಮುಖ ಆಗಿದೆ. ಕೋವಿಡ್ ನಿಯಂತ್ರಣವಾಗುತ್ತಿದೆ ಎಂದು ಪೋಸ್ ಕೊಡುತ್ತಿದ್ದಾರೆ. ನಿಮ್ಮ ಈ ಅಪರಾಧಕ್ಕೆ ಏನು ಶಿಕ್ಷೆ ಕೊಡಬೇಕು ಎಂದರು.
ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸಾವು ಇಳಿಸಿದ್ದೇನೆ. ಸಾಧನೆ ಮಾಡಿದ್ದೇನೆ ಅಂತಾ ಪೋಸು ಕೊಡಲು ಈ ರೀತಿ ಮಾಡಿದ್ದಾರೆ ಎಂದು ಸಾ.ರಾ.ಮಹೇಶ್ ಟೀಕೆ ಮಾಡಿದರು.
ಸರ್ಕಾರ ಈಗಲಾದರೂ ಕಣ್ಣು ತೆರೆಯಲಿ. ಸಿಎಸ್, ರಾಜ್ಯಪಾಲರು ಇದನ್ನು ತನಿಖೆ ಮಾಡಿಸಬೇಕು. ಒಂದು ಸಾವಾದರೂ ಅದು ಸಾವೇ. ಜಿಲ್ಲೆಯಲ್ಲಿ ಅದೆಷ್ಟು ಜನ ಸಾವನ್ನಪ್ಪಿದ್ದಾರೋ ಗೊತ್ತಿಲ್ಲ. ಅದರ ಮಾಹಿತಿ ಕೂಡಾ ಕಲೆ ಹಾಕುತ್ತೇನೆ. ವೈದ್ಯರು ಸುಳ್ಳಾ? ಅಥವಾ ಅಂತ್ಯಕ್ರಿಯೆ ಮಾಡಿದ್ದು ಸುಳ್ಳಾ? ಜನರು ಭಯ ಬೀಳುತ್ತಾರೆ ಅಂತಾ ಮಾಧ್ಯಮಗಳಿಗೆ ಕಡಿಮೆ ಕೊಡಬಹುದೇನೋ. ಆದರೆ ಇವರು ಸರ್ಕಾರಕ್ಕೆ ಕಡಿಮೆ ಲೆಕ್ಕ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಶಾಸಕ ಸಾ.ರಾ ಮಹೇಶ್ ಹೇಳಿದರು.