ಮೈಸೂರು: ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ನೆಲ, ಭಾಷೆ, ಗಡಿಯ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದು, ಪ್ರಾದೇಶಿಕ ಪಕ್ಷದಿಂದ ಮಾತ್ರ ಪ್ರಾದೇಶಿಕತೆ ಉಳಿಸಲು ಸಾಧ್ಯ. ಹೀಗಾಗಿ ಜೆಡಿಎಸ್ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಸಾರಾ ಮಹೇಶ್ ತಿಳಿಸಿದರು.
ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜನತಾ ಜಲಧಾರೆ ಕಾರ್ಯಕ್ರಮದ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಗಟ್ಟಿಯಾಗಿದೆ ಎಂಬುದನ್ನು ಮತ್ತೂಮ್ಮೆ ನಿರೂಪಿಸಲು ಕಾರ್ಯಕರ್ತರು ಸಜ್ಜಾಗಬೇಕು. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಯಾಗಿದ್ದಾಗ ಹಲವಾರು ನೀರಾವರಿ ಯೋಜನೆ ಗಳನ್ನು ಜಾರಿಗೆ ತಂದಿದ್ದಾರೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಈಗ ಎಚ್.ಡಿ.ಕುಮಾರಸ್ವಾಮಿ ಜನತಾ ಜಲಧಾರೆ ಮೂಲಕ ನಾಡಿನ ಜನರಿಗೆ ವಸ್ತುಸ್ಥಿತಿ ತಿಳಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕಿಡಿಕಾರಿದರು.
ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಜೆಡಿಎಸ್ ಶಕ್ತಿ ಕುಂದಿ ಹೋಗಿದೆ ಎಂದಿದ್ದವರಿಗೆ ಕಾರ್ಯಕರ್ತರು ತಕ್ಕಪಾಠ ಕಲಿಸಿದ್ದಾರೆ. ನಾಯಕರು ಪಕ್ಷ ಬಿಟ್ಟು ಹೋದಾಕ್ಷಣ ಕಾರ್ಯಕರ್ತರು ಹೋಗಲ್ಲ. ಎಚ್.ಡಿ.ದೇವೇಗೌಡರ ಶಕ್ತಿಯಿಂದಾಗಿ ಜೆಡಿಎಸ್ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.
ನಗರಪಾಲಿಕೆ ಸದಸ್ಯರಾದ ಎಂ.ಎಸ್. ಶೋಭಾ, ಅಶ್ವಿನಿ ಅನಂತು, ಎಸ್‌ಬಿಎಂ ಮಂಜು, ಕೆ.ವಿ. ಶ್ರೀಧರ್, ರಮಣಿ, ಭಾಗ್ಯ ಶಿವಣ್ಣ, ಮೈಸೂರು ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಆರ್.ಲಿಂಗಪ್ಪ, ರಾಜೇಶ್ವರಿ ಸೋಮು, ಜಿಪಂ ಮಾಜಿ ಸದಸ್ಯ ರಾದ ಬೀರಿಹುಂಡಿ ಬಸವಣ್ಣ, ಸಿ.ಜೆ.ದ್ವಾರಕೀಶ್, ಸಾ.ರಾ.ನಂದೀಶ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಇದ್ದರು.
ಬೃಹತ್ ಬೈಕ್ ರ್ಯಾಲಿ ಜೆಡಿಎಸ್‌ನ ಪ್ರಮುಖ : ಕಾರ್ಯಕ್ರಮಗಳಲ್ಲಿ ಒಂದಾದ ಜನತಾ ಜಲಧಾರೆ ರಾಜ್ಯಾದ್ಯಂತ ನಡೆಯುತ್ತಿದ್ದು, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಆಯೋಜಿಸಿದ್ದ ಜನತಾ ಜಲಧಾರೆ ರ್ಯಾಲಿಗೆ ಇಲವಾಲ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಶಾಸಕ ಸಾ.ರಾ. ಮಹೇಶ್ ರ್ಯಾಲಿಗೆ ಚಾಲನೆ ನೀಡಿದರು. ಇಲವಾಲದಿಂದ ಹೊರಟ ರ್ಯಾಲಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ತಲುಪಿತು. ಬಳಿಕ ಸಾರ್ವಜನಿಕ ಸಭೆ ನಡೆಸಿ ಹಾರ್ಡಿಂಜ್ ವೃತದ ಮೂಲಕ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್ ತಲುಪಿತು.