ಕಾರವಾರ: ನಗರದ ಅಜ್ವಿ ಸಭಾಂಗಣದಲ್ಲಿ ರವಿವಾರ ಬೆಳಗ್ಗೆ ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್‌ನಲ್ಲಿ ಬಾಲಕ ಮಹಮ್ಮದ್ ಸಾಖೀಬ್ 25 ನಿಮಿಷಗಳ ಕಾಲ 180 ಡಿಗ್ರಿಯಲ್ಲಿ ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡಿ ವಿಶ್ವ ದಾಖಲೆ ಬರೆದ.
ವಿಶ್ವದಲ್ಲಿ ಈತನಕ ಸತತ 16 ನಿಮಿಷಗಳ ಕಾಲ ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡಿದ ದಾಖಲೆಯಿದೆ. ಈ ದಾಖಲೆಯನ್ನು ಕೈಗಾದ ಬಾಲಕ ಸಾಖೀಬ್ ಮುರಿದು ಹೊಸ ದಾಖಲೆ ಬರೆದನು. 25 ನಿಮಿಷ ಕಾಲ ಸತತ 1000 ಸುತ್ತು ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡಿದ್ದು ವಿಶ್ವದಾಖಲೆ ಸೇರಲಿದೆ ಎಂದು ಏಷಿಯಾ ಬುಕ್ ಆಫ್ ರೆಕಾರ್ಡ್‌ನ ಮ್ಯಾನೇಜರ್ ಹರೀಶ್ ಬೆಂಗಳೂರು ಮಾಧ್ಯಮಗಳಿಗೆ ವಿವರಿಸಿದರು.
ಬಾಲಕ ಸಾಖೀಬ್ ಈಗ ತಾನೆ 4 ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಇಷ್ಟು ಚಿಕ್ಕವಯಸ್ಸಿನ ಬಾಲಕನ ಸಾಧನೆ ಸ್ಕೇಟಿಂಗ್ ಇತಿಹಾಸದಲ್ಲಿ ಇಂದು (ಏ.28) ದಾಖಲಾಯಿತು. ಇದು ಕರ್ನಾಟಕ ಮತ್ತು ಭಾರತಕ್ಕೆ ವಿಶ್ವಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ ಎಂದು ಅವರು ಬಣ್ಣಿಸಿದರು.
ಸ್ವಲ್ಪವೂ ದಣಿಯದ ಬಾಲಕ: 25 ನಿಮಿಷ ಸತತವಾಗಿ ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡಿದರೂ ಬಾಲಕ ಸಾಖೀಬ್‌ನಲ್ಲಿ ದಣಿವು ಕಾಣಿಸಲಿಲ್ಲ. ಆತ ಅತ್ಯಂತ ಸಂತೋಷದಿಂದ ತನ್ನ ಸಾಧನೆಯ ಕ್ಷಣ ಅನುಭವಿಸಿದೆ. ಪುಟ್ಟ ಬಾಲಕನ ಕಣ್ಣಲ್ಲಿ ಹೊಳಪು ಮತ್ತು ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಬಾಲಕ ಸಾಖೀಬ್ ಕೈಗಾ ಟೌನ್‌ಶಿಪ್ ನಿವಾಸಿಯಾಗಿದ್ದು ಯುಕೆಜಿ ಓದುತ್ತಿದ್ದಾನೆ.
Advertisement
ಏಷಿಯಾ ಬುಕ್ ಆಫ್ ರೆಕಾರ್ಡ್‌ನ ಮ್ಯಾನೇಜರ್ ಸೇರಿದಂತೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನ ಅಧಿಕಾರಿಗಳು, ನ್ಯಾಶನಲ್ ಬುಕ್ ಆಫ್ ರೆಕಾರ್ಡ್‌ನ ಅಧಿಕಾರಿ, ರೆಕಾರ್ಡ್ ಹೋಲ್ಡರ್ ರಿಪಬ್ಲಿಕ್ ಅಧಿಕಾರಿ, ಕೃಗಾ ಅಣುಸ್ಥಾವರದ ಸ್ಥಳ ನಿರ್ದೇಶಕ ದೇಶಪಾಂಡೆ ಅವರ ಸಮ್ಮುಖದಲ್ಲಿ ಸತತವಾಗಿ ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡುವ ಮೂಲಕ ನೆರೆದಿದ್ದ ಜನ ಹುಬ್ಬೇರಿಸುವಂತೆ ಮಾಡಿದ.
Related Articles
Advertisement
ಬಾಲಕ ಹಲವು ತಿಂಗಳಿಂದ ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್‌ನಲ್ಲಿ ತುಂಬಾ ಆಸಕ್ತಿ ತೋರುತ್ತಿದ್ದು, ಆ ವಿಭಾಗದಲ್ಲಿ ತರಬೇತಿ ನೀಡಲಾಗಿತ್ತು. ಮಗನ ಉತ್ಸಾಹಕ್ಕೆ ತಂದೆ ಮಹಮ್ಮದ್ ರಫೀಕ್ ಸಾತ್ ನೀಡಿದ್ದಾರೆ. ದಿನವೂ 2 ರಿಂದ 3 ತಾಸು ಪ್ರಾಕ್ಟೀಸ್ ಮಾಡುತ್ತಿದ್ದ. ನೇರ ಲಿಂಬೋ ಸ್ಕೇಟಿಂಗ್‌ನಲ್ಲಿ 16 ಮಕ್ಕಳ ಗುಂಪು ತಂಡದಲ್ಲಿ ವಿಶ್ವ ಮಟ್ಟದ ದಾಖಲೆಯನ್ನು ಕಳೆದ ವರ್ಷ ಮಾಡಿದ್ದ. ಲಿಂಬೋ ಸ್ಕೇಟಿಂಗ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕ ಹಾಗೂ ರಾಜ್ಯ ಮಟ್ಟದಲ್ಲಿ ಈಗಾಗಲೇ ಸಾಧನೆ ಮಾಡಿದ್ದ. ಹಾಗಾಗಿ ಆತನಿಗೆ ಲಿಂಬೋ ಸ್ಪಿನ್ನಿಂಗ್‌ನಲ್ಲಿ ತರಬೇತಿ ನೀಡಲಾಗಿತ್ತು ಎಂದು ತರಬೇತುದಾರ ದಿಲೀಪ್ ಹಣಬರ್ ಹೇಳಿದರು. ಕೈಗಾ ರೋಲರ್ ಸ್ಕೇಟಿಂಗ್ ಆಕಾಡೆಮಿ ಮೂಲಕ ಸಾಖೀಬ್ ಆಸಕ್ತಿ ನೋಡಿ ಪ್ರೋತ್ಸಾಹಿಸಲಾಯಿತು. ಚಿಕ್ಕ ವಯಸ್ಸಿನಲ್ಲೇ ವಿಶ್ವ ದಾಖಲೆ ಮಾಡಿದ್ದು ನಮಗೆ ಸಂತೋಷ ತಂದಿದೆ ಎಂದು ಸಾಖೀಬ್ ತಂದೆ ಮಹಮ್ಮದ್ ರಫೀಕ್ ನುಡಿದರು. ರಫೀಕ್ ಅವರು ಕೈಗಾ ಅಣುಸ್ಥಾವರ ಶಾಲೆಯಲ್ಲಿ ನೌಕರಿ ಮಾಡುತ್ತಿದ್ದು, ಶಿರಸಿ ಮೂಲದವರಾಗಿದ್ದಾರೆ. ಇವರ ಪತ್ನಿ ಶಬರೀನ್, ಸಂಬಂಧಿಕರು, ಕೈಗಾ ಸ್ಕೇಟಿಂಗ್ ಅಕಾಡೆಮಿ ಸದಸ್ಯರು, ಸ್ಕೇಟಿಂಗ್ ಸ್ಕೂಲ್ ವಿದ್ಯಾರ್ಥಿಗಳು ಹಾಜರಿದ್ದರು. ಅಲ್ಲದೇ ಆತನ ಸ್ಪಿನ್ನಿಂಗ್ ಸ್ಕೇಟಿಂಗ್ ನೋಡಿ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.
ಸಾಖೀಬ್ ಮೂರು ವರ್ಷದ ಹಿಂದೆ ಸ್ಕೇಟಿಂಗ್ ತರಬೇತಿ ಶಾಲೆಗೆ ಸೇರಿಕೊಂಡ. ಆತನ ಆಸಕ್ತಿ ಗಮನಿಸಿ ಕಳೆದ ಒಂದು ವರ್ಷದಿಂದ ಸತತವಾಗಿ ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್ ವಿಭಾಗದಲ್ಲಿ ತರಬೇತಿ ನೀಡಲಾಯಿತು. ಪ್ರತಿದಿನ 2 ತಾಸು ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡುತ್ತಿದ್ದ. ಯಾವ ಒತ್ತಡವೂ ಇಲ್ಲದೇ ಅತ್ಯಂತ ನಿರುಮ್ಮಳ ಮನಸ್ಸಿಂದ 25 ನಿಮಿಷ ಸತತವಾಗಿ ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡಿದ್ದು ಖುಷಿ ನೀಡಿದೆ. ಅದು ವಿಶ್ವದಾಖಲೆ ಆಗುತ್ತಿರುವುದು ನಮಗೆ ತೀವ್ರ ಸಂಭ್ರಮ ತಂದಿದೆ.
-ಶಬರೀನ್ ಮೊಹಮ್ಮದ್ ರಫೀಕ್,ಸಾಖೀಬ್ ತಾಯಿ