“ಕರ್ನಾಟಕದಲ್ಲಿ ಎಷ್ಟೊಂದು ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚರಣೆ ಇದೆ. ಒಂದೊಂದು ಆಚರಣೆಗೂ ಒಂದೊಂದು ಹಿನ್ನೆಲೆಯಿದೆ. ಅದರ ಬಗ್ಗೆ ತಿಳಿದು ಕೊಳ್ಳುತ್ತ ಹೋದಂತೆ, ಅದು ಜನ-ಜೀವನದಲ್ಲಿ ಎಷ್ಟೊಂದು ಆಳವಾಗಿ ಬೇರೂರಿದೆ ಅನ್ನೋದು ಗೊತ್ತಾಗುತ್ತದೆ. ಅದರಲ್ಲೂ ಕರಾವಳಿಯ ದೈವಾರಾಧನೆ, ಕೋಲ ಆಚರಣೆಗಳಂತೂ ನಿಜಕ್ಕೂ ವಂಡರ್ ಫುಲ್. ನಮ್ಮ ಜನರೇಶನ್‌ನ, ನನ್ನ ವಯಸ್ಸಿನ ಎಷ್ಟೋ ಜನರಿಗೆ ಅದರ ಬಗ್ಗೆ ಸ್ವಲ್ಪವೂ ನಾಲೆಡ್ಜ್ ಇಲ್ಲ. ಆದರೆ ಈ ವಿಷಯದಲ್ಲಿ ನಾನು ಅದೃಷ್ಟವಂತೆ. ಸ್ವಲ್ಪ ತಡವಾಗಿಯಾದರೂ, ನನಗೆ ಅವುಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು…’ ಇದು ನಟಿ ಸಪ್ತಮಿ ಗೌಡ ಮಾತು.
ಅಂದಹಾಗೆ, ಸಪ್ತಮಿ ಗೌಡ ಇಂಥದ್ದೊಂದು ಮಾತು ಹೇಳಿರುವುದಕ್ಕೆ ಕಾರಣ “ಕಾಂತಾರ’ ಸಿನಿಮಾ. ಇಂದು ತೆರೆ ಕಾಣುತ್ತಿರುವ “ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ, ಕರಾವಳಿಯ ಹುಡುಗಿಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದ ಸಪ್ತಮಿ ಗೌಡಗೆ “ಕಾಂತಾರ’ ಸಿನಿಮಾ ಕರಾವಳಿಯ ಆಚರಣೆ, ಸಂಸ್ಕೃತಿ ಎಲ್ಲವನ್ನೂ ಪರಿಚಯಿಸಿದೆಯಂತೆ.
ಈ ಬಗ್ಗೆ ಖುಷಿಯಿಂದ ಮಾತುಗಳನ್ನಾಡುವ ಸಪ್ತಮಿ ಗೌಡ, “ನಾನು ಹುಟ್ಟಿದಾಗಿನಿಂದ ಹೆಚ್ಚಿನ ಭಾಗ ಬೆಂಗಳೂರಿನಲ್ಲೇ ಕಳೆದಿದ್ದರಿಂದ, ಕರ್ನಾಟಕದ ಬೇರೆ ಬೇರೆ ಪರಿಸರ, ಅಲ್ಲಿನ ಸಂಸ್ಕೃತಿ, ಆಚರಣೆಗಳ ಬಗ್ಗೆ ಹೆಚ್ಚು ಗೊತ್ತಿರಲಿಲ. ಆದರೆ “ಕಾಂತಾರ’ ಸಿನಿಮಾಕ್ಕೆ ಆಯ್ಕೆಯಾದ ನಂತರ, ಸುಮಾರು ಏಳೆಂಟು ತಿಂಗಳು ಕರಾವಳಿ ಭಾಗದಲ್ಲೇ ಇರಬೇಕಾಯಿತು. ಈ ವೇಳೆ ಅಲ್ಲಿನ ಜನ-ಜೀವನ, ಆಚರಣೆಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು. ನಿಜವಾಗಿ ಹೇಳಬೇಕೆಂದರೆ, “ಕಾಂತಾರ’ ಕೇವಲ ನಟಿಯಾಗಿ ನನಗೆ ಅಭಿನಯಕ್ಕಷ್ಟೇ ಸೀಮಿತವಾಗಿರಲಿಲ್ಲ. ಅದರಾಚೆ ನನಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ತಿಳಿದು ಕೊಳ್ಳುವಂತೆ ಮಾಡಿತು. ಞಸಿನಿಮಾಕ್ಕಾಗಿ ಕುಂದಾಪುರ ಕನ್ನಡ ಭಾಷೆ ಕಲಿತಿದ್ದೇನೆ. ದೈವಾರಾಧನೆ, ಕೋಲ ವಿಶೇಷತೆಗಳ ಬಗ್ಗೆ ತಿಳಿದುಕೊಂಡೆ’ ಎನ್ನುತ್ತಾರೆ.
“ಸಿನಿಮಾ ಶುರುವಾದಾಗಿನಿಂದ ಇಲ್ಲಿಯವರೆಗೆ ಸುಮಾರು ಒಂದು ವರ್ಷದಿಂದ “ಕಾಂತಾರ’ ಸಿನಿಮಾದ ಜೊತೆಗಿದ್ದೇನೆ. ಒಮ್ಮೆ ಹಿಂತಿರುಗಿ ನೋಡಿದ್ರೆ, ಎಷ್ಟೊಂದು ವಿಷಯಗಳನ್ನು ಕಲಿತಿದ್ದೇನೆ ಅಂತ ಅನಿಸುತ್ತದೆ. ಸಿನಿಮಾದ ಶೂಟಿಂಗ್ ನಲ್ಲಿ ತುಂಬಾ ಒಳ್ಳೆಯ ಅನುಭವ ಸಿಕ್ಕಿದೆ. ಈ ಸಿನಿಮಾದಲ್ಲಿ ಗಿರಿಜಾ ಎಂಬ ಪಾತ್ರ ನನ್ನದು. ಎರಡು ಥರದ ಶೇಡ್ ಇರುವಂಥ ಪಾತ್ರ. ಕುಂದಾಪುರ ಭಾಗದ ಕರಾವಳಿ ಹುಡುಗಿಯೊಬ್ಬಳು ಹೇಗಿರುತ್ತಾಳೆ ಎನ್ನುವುದನ್ನು ನನ್ನ ಪಾತ್ರ ತೋರಿಸುತ್ತದೆ. ಹಿಂದಿನ “ಪಾಪ್‌ಕಾರ್ನ್ ಮಂಕಿ ಟೈಗರ್’ ಸಿನಿಮಾಕ್ಕಿಂತ ಸಂಪೂರ್ಣ ವಿಭಿನ್ನವಾದ ಮತ್ತೂಂದು ಪಾತ್ರ ಈ ಸಿನಿಮಾದಲ್ಲಿದೆ. ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ಭರವಸೆ ಇದೆ. ಸಿನಿಮಾ ಮತ್ತು ನನ್ನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ ಸಪ್ತಮಿ ಗೌಡ.
ಜಿ.ಎಸ್.ಕಾರ್ತಿಕ ಸುಧನ್