Advertisement

ಮುಂದೂಡಲ್ಪಟ್ಟಿದ್ದ ಸಪ್ತಪದಿಗೆ ಕೂಡಿಬಂತು ಮುಹೂರ್ತ!

01:06 AM Oct 31, 2020 | mahesh |

ಪುತ್ತೂರು: ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿದ್ದ ಸಪ್ತಪದಿ ಯೋಜನೆಗೆ ಆರು ತಿಂಗಳ ಬಳಿಕ ಮುಹೂರ್ತ ಕೂಡಿ ಬಂದಿದ್ದು, ಕೆಲವು ಷರತ್ತುಗಳೊಂದಿಗೆ ಸಾಮೂಹಿಕ ವಿವಾಹ ಏರ್ಪಡಿಸಲು ರಾಜ್ಯ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿದೆ.

Advertisement

ಎ. 28ರಂದು ನಿಗದಿಯಾಗಿದ್ದ ಮೊದಲ ಹಂತದ ಸಾಮೂಹಿಕ ವಿವಾಹ ಕೋವಿಡ್‌ ಕಾರಣ ಮುಂದೂಡಲ್ಪಟ್ಟಿತ್ತು. ಈಗ ಸರಕಾರ ಆಗಮ ಪಂಡಿತರ ಸೂಚನೆಯನುಸಾರ ನವೆಂಬರ್‌ 19, 27, ಡಿಸೆಂಬರ್‌ 2, 7, ಮತ್ತು 10ರಂದು ದಿನ ನಿಗದಿ ಮಾಡಿದೆ. ದಿನಾಂಕವನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲು ಅನುಮತಿ ನೀಡಲಾಗಿದೆ.

ಐದು ಜೋಡಿಗಿಂತ ಕಡಿಮೆ ನೋಂದಣಿ ಆಗಿರುವ ದೇವಾಲಯಗಳಲ್ಲಿ ಒಂದೇ ದಿನದಲ್ಲಿ ವಿವಾಹ ನಡೆಸುವುದು, 12ರಿಂದ 23 ಜೋಡಿ ಇರುವಲ್ಲಿ 2 ಅಥವಾ 3 ದಿನ ಹಾಗೂ 60ಕ್ಕಿಂತ ಮೇಲ್ಪಟ್ಟಿದ್ದರೆ ವಿವಿಧ ದಿನಾಂಕವನ್ನು ನಿಗದಿಪಡಿಸಿ ಸರಳ ವಿವಾಹ ನೆರವೇರಿಸಬೇಕಿದೆ.

ನೋಂದಣಿಯಾಗಿ ಉಳಿದಿರುವ ಅರ್ಜಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಹೆಚ್ಚು ನೋಂದಣಿ ಇರುವ ದೇವಾಲಯಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ರೂಪಿಸಿದಲ್ಲಿ ಜನದಟ್ಟಣೆ ಉಂಟಾಗುವ ಕಾರಣ ಅಂತಹ ಜಿಲ್ಲೆಯ ಇತರ ದೇವಾಲಯಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಸೂಚನೆ ನೀಡಲಾಗಿದೆ. ವಿವಾಹದ ಸಂದರ್ಭ ತಂದೆ ತಾಯಿ ಅಥವಾ ವಾರಸುದಾರರು ಹಾಗೂ ಸಾಕ್ಷಿದಾರರು ಹಾಜರಿರಬೇಕು. ವಧು-ವರನ ವಿವಾಹದ ಬಗ್ಗೆ ಸಾರ್ವಜನಿಕ ದೂರು ಇದ್ದಲ್ಲಿ ಪುನರ್‌ ಪರಿಶೀಲನೆ ನಡೆಸಿ ಅವಕಾಶ ನೀಡುವ ಬಗ್ಗೆ ನಿರ್ಧರಿಸಬೇಕು ಎಂಬ ಸೂಚಿಸಲಾಗಿದೆ.

55 ಸಾವಿರ ರೂ.ಪ್ರೋತ್ಸಾಹ ಧನ
ಅವರವರ ಸಂಪ್ರದಾಯಕ್ಕೆ ತಕ್ಕಂತೆ ಆವಶ್ಯಕ ವಸ್ತು (ಪಂಚೆ, ಶರ್ಟ್‌, ಶಲ್ಯ, ಧಾರೆ ಸೀರೆ, ರವಿಕೆ ಕಣ, ಪೇಟ/ಟೋಪಿ ಬಾಸಿಂಗ, ಕಾಲುಂಗುರ ಇತ್ಯಾದಿ) ಗಳನ್ನು ವಧು-ವರರ ಕಡೆಯವರು ತರಬೇಕು. ದೇವಾಲಯದ ವತಿಯಿಂದ ಊಟೋಪಚಾರ ವ್ಯವಸ್ಥೆ ಇದೆ. ಪ್ರೋತ್ಸಾಹ ಧನವು ವರನಿಗೆೆ 5,000 ರೂ., ವಧುವಿಗೆ 10,000 ರೂ., ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ-40,000 ರೂ. ಮೌಲ್ಯ) ಸೇರಿದಂತೆ ಒಟ್ಟು 55,000 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಮೊತ್ತವನ್ನು ವಿವಾಹದ ಮೂರು ದಿನಗಳೊಳಗೆ ಅವರವರ ಬ್ಯಾಂಕ್‌ ಖಾತೆಗೆ ನೇರ ಜಮೆ ಮಾಡುವಂತೆ ಸೂಚಿಸಲಾಗಿದೆ.

Advertisement

ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯೊಂದಿಗೆ ಸಪ್ತಪದಿ ಯೋಜನೆಯ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಅದಕ್ಕಾಗಿ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವರು ರಾಜ್ಯ ಮುಜರಾಯಿ ಖಾತೆ

Advertisement

Udayavani is now on Telegram. Click here to join our channel and stay updated with the latest news.

Next