Advertisement

ಸಪ್ತಪದಿ ಬಡವರಿಗೆ ಅನುಕೂಲ

11:58 AM Mar 09, 2020 | Suhan S |

ಧಾರವಾಡ: ಅದ್ಧೂರಿ ಮದುವೆ ತಡೆ, ದುಂದು ವೆಚ್ಚಕ್ಕೆ ಕಡಿವಾಣ ಹಾಗೂ ಸರಳ ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ “ಸಪ್ತಪದಿ’ ಬಡಜನರಿಗೆ ಅನುಕೂಲವಾಗಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ನಗರದ ಡಾ|ಮಲ್ಲಿಕಾರ್ಜುನ ಮನಸೂರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ “ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು  ಸರಳ ಸಾಮೂಹಿಕ ವಿವಾಹವಾಗುವ ವಧುವಿಗೆ ಧಾರೆ ಸೀರೆಗೆಂದು 10 ಸಾವಿರ ರೂ., 8ಗ್ರಾಂ. ಚಿನ್ನದ ಮಾಂಗಲ್ಯ ಮತ್ತು ವರನಿಗೆ 5 ಸಾವಿರ ರೂ. ಸೇರಿದಂತೆ ಒಂದು ಜೋಡಿ ವಧು-ವರನಿಗೆ ಒಟ್ಟು 55 ಸಾವಿರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ವಿವಾಹಕ್ಕೆ ಬರುವ ವಧು-ವರರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಂಬಂಧಿಸಿದ ದೇವಾಲಯದ ನಿಧಿಯಿಂದ ಮಾಡಲಾಗುತ್ತದೆ ಎಂದರು.

ಧಾರವಾಡದ ಸೋಮೇಶ್ವರ ದೇವಾಲಯ, ಹುಬ್ಬಳ್ಳಿಯ ಸಿದ್ಧಾರೂಢ ಮಠ, ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮಾರುತಿ ದೇವಸ್ಥಾನ, ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ ಹಾಗೂ ಕಲಘಟಗಿಯ ಗ್ರಾಮದೇವತೆ ದೇವಸ್ಥಾನದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳು ನಡೆಯಲಿವೆ. ಸಪ್ತಪದಿ ಸರಳ ಸಾಮೂಹಿಕ ವಿವಾಹಗಳು ಏ.26ರ ಅಕ್ಷಯ ತೃತೀಯ ಮೂಹೂರ್ತದಲ್ಲಿ ಮತ್ತು ಮೇ 24ರಂದು ಎರಡು ಹಂತದಲ್ಲಿ ನಡೆಯಲಿವೆ. ಮೊದಲ ಹಂತದ ಏ.26 ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹವಾಗ ಬಯಸುವವರು ಸಂಬಂಧಿಸಿದ ತಾಲೂಕಿನ ತಹಶೀಲ್ದಾರ್‌ ಕಚೇರಿಗಳಲ್ಲಿ ಮಾ.27 ರೊಳಗೆ ಅರ್ಜಿ ಸಲ್ಲಿಸಿ ತಮ್ಮ ಹೆಸರು ನೊಂದಾಯಿಸಬೇಕು ಎಂದು ತಿಳಿಸಿದರು.

ರಾಜ್ಯದ ವಿಧಾನಸಭೆಯ ಹಾಗೂ ವಿಧಾನ ಪರಿಷತ್‌ ಶಾಸಕರು, ಲೋಕಸಭಾ ಸದಸ್ಯರು ಭಾಗವಹಿಸಲು ಇಲಾಖೆಯಿಂದ ಕೋರಲಾಗಿದೆ. ಅನೇಕ ಧರ್ಮಗುರುಗಳು, ಮಠಾಧೀಶರು ಸಪ್ತಪದಿ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಏ.26ರಂದು ನಡೆಯುವ ಸರಳ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಈ ಯೋಜನೆ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಸುಬ್ರಹ್ಮಣ್ಯ ಕ್ಷೇತ್ರದಿಂದ 100 ಕೋಟಿ ರೂ., ಮೂಕಾಂಬಿಕೆ ಕ್ಷೇತ್ರದಿಂದ 80 ಕೋಟಿ ರೂ. ವಾರ್ಷಿಕ ಆದಾಯವಿದೆ. ಹೀಗೆ ಧಾರ್ಮಿಕ ದತ್ತಿ ಇಲಾಖೆಗೊಳಪಡುವ 100ಕ್ಕೂ ಅಧಿ ಕ ಧಾರ್ಮಿಕ ಮಠಗಳಿಗೆ ವಾರ್ಷಿಕ ಕೋಟಿ-ಕೋಟಿ ಹಣ ಸಂಗ್ರಹಗೊಳ್ಳುತ್ತಿದೆ. ಈ ಹಣವನ್ನು ಸಮಾಜದ ಸತ್ಕಾರ್ಯಗಳಿಗೆ ಸದ್ವಿನಿಯೋಗಿಸಲು ಸಪ್ತಪದಿ ಸರಳ ಸಾಮೂಹಿಕ ವಿವಾಹ ಏರ್ಪಡಿಸಿದೆ ಎಂದರು.

Advertisement

ಮಾರ್ಗಸೂಚಿಯ ಕರಪತ್ರ ಬಿಡುಗಡೆಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ವಿಶ್ವಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಕುಟುಂಬ ಕಲ್ಪನೆ ವಿನಾಶದತ್ತ ಸಾಗಿದೆ. ಏಕಾಂಗಿ ಜೀವನ, ಕೌಟುಂಬಿಕ ಬಿಕ್ಕಟ್ಟು ಹೆಚ್ಚಾಗಿ ಮಾನಸಿಕ ಅಶಾಂತಿ, ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದೆ. ಆದರೆ ಭಾರತದಲ್ಲಿ ಕುಟುಂಬ ವ್ಯವಸ್ಥೆ ಪವಿತ್ರವಾಗಿದ್ದು, ವಿವಾಹ ಸಂಸ್ಕಾರದ ಮೂಲಕ ಸತಿ-ಪತಿಯ ಪಾವಿತ್ರ್ಯ ಎತ್ತಿ ಹಿಡಿದಿದೆ. ಕುಟುಂಬ, ವಿವಾಹ, ಸಂಸ್ಕಾರಗಳಿಗೆ ಭಾರತದಲ್ಲಿ ಅತ್ಯಂತ ಗೌರವ, ಸಂಸ್ಕೃತಿ ಹಿನ್ನೆಲೆಯಿದೆ. ಸರ್ಕಾರ ಸಪ್ತಪದಿ ಸರಳ ಸಾಮೂಹಿಕ ವಿವಾಹ ಮೂಲಕ ಅದರ ಮಹತ್ವ ಹೆಚ್ಚಿಸುತ್ತಿದೆ. ಮತ್ತು ಬಡವರಿಗೆ, ಅಸಹಾಯಕರಿಗೆ ಹಾಗೂ ಆಸಕ್ತರಿಗೆ ಈ ಯೋಜನೆ ಮೂಲಕ ನೆರವಾಗುತ್ತಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಮಾಜಿ ಶಾಸಕಿ ಸೀಮಾ ಮಸೂತಿ, ಹುಡಾ ಅಧ್ಯಕ್ಷ ನಾಗೇಶ ಕಲಬುರಗಿ, ಜಿಪಂ ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ, ಜಿಪಂ ಸದಸ್ಯರಾದ ನಾಗನಗೌಡ ಪಾಟೀಲ, ಚನ್ನಬಸಪ್ಪ ಮಟ್ಟಿ, ತಾಪಂ ಅಧ್ಯಕ್ಷ ಈರಪ್ಪ ಏಣಗಿ, ಜಿಪಂ ಸಿಇಒ ಡಾ|ಬಿ.ಸಿ. ಸತೀಶ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ಸಪ್ತಪದಿ ಕುರಿತು ಡಾ|ಶಶಿಧರ್‌ ನರೇಂದ್ರ ವಿಶೇಷ ಉಪನ್ಯಾಸ ನೀಡಿದರು. ಡಿಸಿ ದೀಪಾ ಚೋಳನ್‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಉಪವಿಭಾಗಾಧಿಕಾರಿ ಮಹ್ಮದ ಜುಬೇರ ವಂದಿಸಿದರು. ಇದಕ್ಕೂ ಮುನ್ನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಡಿಸಿ ದೀಪಾ ಚೋಳನ್‌ ಸಪ್ತಪದಿ ರಥಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next