Advertisement

ಏ.26 ರಂದು ಸಪ್ತಪದಿ ಸಾಮೂಹಿಕ ವಿವಾಹ

03:42 PM Feb 27, 2020 | Suhan S |

ಹಾವೇರಿ: ಮುಜರಾಯಿ ಇಲಾಖೆಯಿಂದ ಏ. 26 ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜನೆಮಾಡಿ ಯಶಸ್ವಿಗೊಳಿಸಲು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಹಾಗೂ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಷ್ಠಿತ ಜ್ಯೋತಿಷಿಗಳು ಈ ವರ್ಷದಲ್ಲಿ ಮದುವೆ ಮಾಡಿಕೊಳ್ಳಲು ಅತ್ಯಂತ ಪ್ರಶಸ್ತವಾದ ಅಕ್ಷಯ ತೃತೀಯ ವೃಷಭ ಹಾಗೂ ಅಭಿಜಿನ್‌ ಲಗ್ನ ಇರುವುದರಿಂದ ಈ ಶುಭಮೂಹರ್ತವನ್ನು ನಿಗಪಡಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಎ ವರ್ಗದ ಒಂದುನೂರು ದೇವಾಲಯಗಳಲ್ಲಿ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಎ ದರ್ಜೆಯ ದೇವಾಲಯಗಳು ಇಲ್ಲದಿದ್ದರೂ | ಒಂದು ದೇವಾಲಯ ವಿವಾದದಲ್ಲಿದೆ. ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಶಾಸಕರನ್ನು ಸಂಪರ್ಕಿಸಿ ಸ್ಥಳ ನಿಗಪಡಿಸಿ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಎರಡು ಹಂತಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ಸರ್ಕಾರ ಏಪ್ರಿಲ್‌ 26 ಹಾಗೂ ಮೇ 24 ರಂದು ನಿಗಪಡಿಸಿದೆ. ರಾಜ್ಯದ ಎಲ್ಲೆಡೆ ನಿಗತ ದಿನಾಂಕದಂದು ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಏಪ್ರಿಲ್‌ 26 ರಂದು ಕದರಮಂಡಲಗಿ ದೇವಾಲಯದಲ್ಲಿ ವಿವಾಹ ಕಾರ್ಯಕ್ರಮ ನಡೆಸಲು ನಿಶ್ಚಯಿಸಲಾಗಿದೆ. ಈ ಕುರಿತಂತೆ ಅರ್ಜಿ ಆಹ್ವಾನ ಹಾಗೂ ಕಾರ್ಯಕ್ರಮದ ಸಿದ್ಧತೆ ಕುರಿತಂತೆ ಅಧಿಕಾರಿಗಳು ಕ್ರಮವಹಿಸಲು ಸೂಚನೆ ನೀಡಿದರು.

ಸಪ್ತಪದಿ ಕಾರ್ಯಕ್ರಮಕ್ಕೆ ಕರಪತ್ರಗಳು, ಬ್ಯಾನರ್‌ ಗಳು, ಜಾಹೀರಾತುಗಳು, ಸಪ್ತಪದಿ ರಥ(ವಾಹನದ ಮೂಲಕ) ಹಾಗೂ ಧ್ವನಿವರ್ಧಕಗಳ ಮೂಲಕ ತಾಲೂಕು ಕಚೇರಿಗಳಲ್ಲಿ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌, ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗಳು, ಸಾರ್ವಜನಿಕ ಸಮಾರಂಭ, ಉತ್ಸವ, ಜಾತ್ರೆಗಳಲ್ಲಿ ಪ್ರಚುರಪಡಿಸಬೇಕು. ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

Advertisement

ತಾಲೂಕು ಕಚೇರಿ ಹಾಗೂ ತಹಶೀಲ್ದಾರ್‌ ಕಚೇರಿಯಲ್ಲಿ ಸಾಮೂಹಿಕ ವಿವಾಹಕ್ಕೆ ಆಫ್‌ಲೈನ್‌ ಹಾಗೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾರ್ಚ್‌ 27 ರ ಒಳಗೆ ವಧುವರರು ನೋಂದಣಿ ಮಾಡಿಸಿಕೊಳ್ಳಬೇಕು. ವಿವಾಹವಾಗುವ ಜೋಡಿಗಳಿಗೆ 40,000 ರೂ. ಮೊತ್ತದ 8 ಗ್ರಾಂ ತೂಕದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು, ವರನಿಗೆ ಶಲ್ಯ, ಪಂಜೆ ಹಾಗೂ ವಧುವಿಗೆ ರೇಷ್ಮೆ ಸೀರೆಯನ್ನು ಕೊಡಲಾಗುವುದು. ಈ ಮದುವೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ನೋಡದೆ ತಮ್ಮ ಮನೆಯ ಮದುವೆ ಎಂಬ ಭಾವನೆಯಿಂದ ತೊಡಗಿಸಿಕೊಂಡು ಎಲ್ಲ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಏರ್ಪಡಿಸುವಂತೆ ತಿಳಿಸಿದರು.

ಸಾಮೂಹಿಕ ವಿವಾಹ ಕುರಿತಂತೆ ಎಲ್ಲ ಶಾಸಕರು ಚರ್ಚಿಸಿ ಜಿಲ್ಲಾಡಳಿತದ ವತಿಯಿಂದಲೇ 916 ಕೆಡಿಎಂ ಗುಣಮಟ್ಟದ ಬಂಗಾರದ ತಾಳಿಯನ್ನು ಖರೀದಿಸಿ ನೀಡಲು ನಿರ್ಧರಿಸಿದರು. ಸ್ಥಳೀಯ ಸಂಪ್ರದಾಯ ಕ್ಕನುಗುಣವಾಗಿ ತಾಳಿಯ ಮಾದರಿಗಳನ್ನು ಖರೀದಿಸಲು ತೀರ್ಮಾನಿಸಲಾಯಿತು. ರೇಷ್ಮೆ ಸೀರೆ, ಪಂಚೆ ಖರೀದಿಗೆ ವಿವಾಹತ ಜೋಡಿಗಳಿಗೆ ನಿಗತ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಯಿತು. ಸಾಮೂಹಿಕ ವಿವಾಹ ಸಂದರ್ಭದಲ್ಲಿ ಶ್ಯಾಮಿಯಾನ್‌, ಊಟೋಪಚಾರ, ಆತಿಥ್ಯದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನಿರ್ಧರಿಸಲಾಯಿತು. ಪ್ರತಿ ಹತ್ತು ಜೋಡಿಗಳಿಗೆ ಒಬ್ಬ ನೋಡಲ್‌ ಅಧಿಕಾರಿ ನೀಯೋಜನೆ ಮಾಡುವುದು, ದಾನಿಗಳು, ಧಾರ್ಮಿಕ ಸಂಸ್ಥೆಗಳು, ಸಂಘ-ಸಂಸ್ಥೆಗಳಿಂದ ನೆರವು ಪಡೆಯಲು ಸಭೆಯಲ್ಲಿ ಚರ್ಚಿಸಲಾಯಿತು.

ಸರಳ ವಿವಾಹವನ್ನು ಆಯೋಜಿಸಿ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸಪ್ತಪದಿ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಬೇಕು. ಇದೇ ಸಂದರ್ಭದಲ್ಲಿ ಸ್ವಾಮೀಜಿಗಳನ್ನು ಆಹ್ವಾನಿಸಿ ಆಶೀರ್ವಚನವನ್ನು ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಪಂ ಸದಸ್ಯ ಸಿದ್ಧರಾಜ ಕಲಕೋಟಿ , ವಿರುಪಾಕ್ಷಪ್ಪ ಕಡ್ಲಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಂತೋಷ ಕೊಪ್ಪದ, ಮುಜರಾಯಿ ವಿಭಾಗದ ಶಿರಸ್ತೇದಾರ ಅಮೃತ ಪಾಟೀಲ ಹಾಗೂ ಇತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next