Advertisement

ಸಪ್ತಪದಿ ಸಾಮೂಹಿಕ ವಿವಾಹ: ಸಿದ್ಧತೆಗೆ ಸೂಚನೆ

02:35 PM Feb 26, 2020 | Suhan S |

ಬೆಳಗಾವಿ: ರಾಜ್ಯದ ಎ ಶ್ರೇಣಿಯ ದೇವಸ್ಥಾನಗಳು ಮಾತ್ರವಲ್ಲದೇ ಸಂಪನ್ಮೂಲ ಕ್ರೋಡೀಕರಿಸಿ ಬಿ ಮತ್ತು ಸಿ ಶ್ರೇಣಿಯ ದೇವಸ್ಥಾನಗಳಲ್ಲಿಯೂ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬೆಳಗಾವಿಯಂತಹ ದೊಡ್ಡ ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾವಿರ ಜೋಡಿ ಸಾಮೂಹಿಕ ವಿವಾಹ ಆಯೋಜಿಸಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಏ. 26ರಂದು ನಡೆಯುವ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಮಾ. 27ರ ಒಳಗೆ ಹೆಸರು ನೋಂದಾಯಿಸಬಹುದು. ಮೇ 24ರಂದು ನಡೆಯುವ ವಿವಾಹಕ್ಕೆ ಒಂದು ತಿಂಗಳು ಮುಂಚೆಯೇ ನೋಂದಾಯಿಸಬಹುದು ಎಂದ ಅವರು, ಎ ಶ್ರೇಣಿಯ ನೂರು ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಆಯೋಜಿಸಲು ಸರ್ಕಾರ ನಿರ್ಧರಿಸಿತ್ತು. “ಎ’ ದರ್ಜೆಯ ದೇವಸ್ಥಾನಗಳಿಲ್ಲದ ಜಿಲ್ಲೆಗಳಲ್ಲಿ ‘ಬಿ’ ಶ್ರೇಣಿಯ ದೇವಸ್ಥಾನಗಳಲ್ಲಿ ವಿವಾಹ ಸುತ್ತೋಲೆ ಹೊರಡಿಸಲಾಗಿದೆ ಎಂದರು.

ಕೆಲ ಶಾಸಕರು ತಂತಮ್ಮ ಕ್ಷೇತ್ರದಲ್ಲಿ ಇರುವ ಪ್ರಮುಖ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ಸಾಮೂಹಿಕ ವಿವಾಹ ನಡೆಸಲು ಅನುಮತಿ ನೀಡಲು ಮನವಿ ಸಲ್ಲಿಸಿದ್ದಾರೆ. ಯಾವುದೇ ಪಕ್ಷದ ಶಾಸಕರಿರಲಿ ಅವರ ಮನವಿ ಮತ್ತು ದೇವಸ್ಥಾನಗಳಲ್ಲಿ ಲಭ್ಯವಿರುವ ಹಣಕಾಸಿನ ಲಭ್ಯತೆ ಆಧರಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದ ಅವರು, ನಂಬಿಕೆ ಮತ್ತು ಪರಂಪರೆ ಆಧರಿಸಿ “ಬಿ’ ಶ್ರೇಣಿಯ ಯಾವ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಬೇಕೆನ್ನುವ ಬಗ್ಗೆ ಅಧಿಕಾರಿಗಳು ನಿರ್ಧರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಅಚ್ಚುಕಟ್ಟಾಗಿ ಏರ್ಪಡಿಸಿ: ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದ ಪ್ರತಿ ಜೋಡಿಗೆ ಎಂಟು ಗ್ರಾಮ ಬಂಗಾರ, ವಧುವಿನ ಖಾತೆಗೆ ಹತ್ತು ಸಾವಿರ ಮತ್ತು ವರನಿಗೆ ಐದು ಸಾವಿರ ರೂ. ನೀಡುವುದು ಸೇರಿದಂತೆ ಒಂದು ಜೋಡಿಗೆ 55 ಸಾವಿರ ರೂ. ವೆಚ್ಚವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ. ವಿವಾಹಕ್ಕೆ ಆಗಮಿಸುವ ವಧು-ವರರ ಎಲ್ಲ ಕುಟುಂಬ ವರ್ಗದವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಜತೆಗೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಏರ್ಪಡಿಸಬೇಕು ಎಂದರು.

Advertisement

ನಾಡಿನ ಪ್ರಸಿದ್ಧ ಮಠದ ಮಂದಿರಗಳ ಗುರುಗಳು ವಿವಾಹ ಸಮಾರಂಭಕ್ಕೆ ಆಗಮಿಸುವುದಾಗಿ ಈಗಾಗಲೇ ತಿಳಿಸಿದ್ದಾರೆ. ಮಾ. 7ರಂದು ಸಪ್ತಪದಿ ಸಾಮೂಹಿಕ ವಿವಾಹ ನಡೆಸುವ ಕುರಿತು ವಿಚಾರ ಸಂಕಿರಣ ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಖಾಸಗಿ ಅಥವಾ ವಂಶಪಾರಂಪರ್ಯವಾಗಿ ಬಂದ ದೇವಸ್ಥಾನಗಳಲ್ಲಿ ಸಾರ್ವಜನಿಕರಿಂದ ದೇಣಿಗೆ ಹಣ ಬರುತ್ತಿದ್ದರೆ ಸರ್ಕಾರ ನಿಗಾ ವಹಿಸಬೇಕಾಗುತ್ತದೆ. ಕುಟುಂಬ ಅಥವಾ ನಿರ್ದಿಷ್ಟ ಜನಾಂಗಕ್ಕೆ ಸೇರಿದ ದೇವಸ್ಥಾನಗಳ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ಅಥವಾ ದುರಂತಗಳು ಸಂಭವಿಸಿದ ಸಂದರ್ಭಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದರು.

ಸವದತ್ತಿ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, ಆರ್ಥಿಕವಾಗಿ ಶಕ್ತವಾಗಿರುವ ಬಿ ಶ್ರೇಣಿಯ ಎರಡು ದೇವಸ್ಥಾನಗಳನ್ನು ಒಟ್ಟಿಗೆ ಸೇರಿಸಿಯೂ ಸಾಮೂಹಿಕ ವಿವಾಹ ಆಯೋಜಿಸಬಹುದು. ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಂಬಂ ಧಿಸಿದಂತೆ ಎಲ್ಲ ಜಾತ್ರಾ ಮಹೋತ್ಸವಗಳಲ್ಲಿ ಕರಪತ್ರ ಹಂಚುವ ಮೂಲಕ ಜನರಿಗೆ ಸಪ್ತಪದಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಪ್ತಪದಿ: ಬೆಳಗಾವಿ ನಗರದಲ್ಲಿ ಸಂಘ-ಸಂಸ್ಥೆಗಳು ಪ್ರತಿ ವರ್ಷ ಸಾಮೂಹಿಕ ವಿವಾಹ ಆಯೋಜಿಸುತ್ತಿವೆ. ಅವರ ಸಹಯೋಗದೊಂದಿಗೆ ಸರ್ಕಾರದ ವತಿಯಿಂದ ಪ್ರತಿವರ್ಷ ಒಂದು ಕಡೆ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸಬಹುದು ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯ ಮೂರು ಎ ಶ್ರೇಣಿಯ 3 ದೇವಸ್ಥಾನಗಳಲ್ಲಿ ಸಪ್ತಪದಿ ಆಯೋಜಿಸಲು ನಿರ್ಧರಿಸಲಾಗಿದೆ. ಸವದತ್ತಿ ದೇವಸ್ಥಾನದಲ್ಲಿ ಏ.26 ಹಾಗೂ ಚಿಂಚಲಿ ಮಾಯಕ್ಕ ದೇವಿ ದೇವಾಲಯದಲ್ಲಿ ಮೇ 24ರಂದು ಸಾಮೂಹಿಕ ವಿವಾಹ ನಡೆಸಲು ಸಿದ್ಧತೆ ಆರಂಭಿಸಲಾಗಿದೆ ಎಂದರು. ಗೊಡಚಿ ವೀರಭದ್ರೇಶ್ವರ

ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲು ಕೆಲ ತಾಂತ್ರಿಕ ಕಾರಣಗಳು ಅಡ್ಡಿಯಾಗಿದ್ದು, ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಮೂಹಿಕ ವಿವಾಹಕ್ಕೆ ಸಾಧ್ಯವಿರುವ ಬಿ ಮತ್ತು ಸಿ ಶ್ರೇಣಿಯ ದೇವಸ್ಥಾನಗಳನ್ನು ಗುರುತಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹ ಆಯೋಜಿಸಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕ ವಿಧಾನಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಲಕ್ಷಾಂತರ ಜನ ಸೇರುವ ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಈಗಾಗಲೇ ಶೌಚಾಲಯ ನಿರ್ಮಿಸಿದ್ದರೂ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಇವುಗಳ ಬಳಕೆ ಸಾಧ್ಯವಾಗುತ್ತಿಲ್ಲ ಎಂದರು.

ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಿದರೆ ದೇವಸ್ಥಾನದ ಆದಾಯ ಎರಡು ಪಟ್ಟು ಆಗಲಿದೆ. ಶುಚಿತ್ವ ಕಾಪಾಡಲು ಸಾಧ್ಯವಾದರೆ ನೈವೇದ್ಯದ ಸ್ವರೂಪವನ್ನು ಬದಲಾಯಿಸುವ ಅಗತ್ಯವಿದೆ. ಇದರಿಂದ ಸುಕ್ಷೇತ್ರದ ಪರಿಸರದಲ್ಲಿ ಶುಚಿತ್ವ ಕಾಪಾಡಬಹುದು ಎಂದು ಎಂದರು. ದೇವಸ್ಥಾನದ ಆದಾಯದಲ್ಲಿ ಕಾಮಗಾರಿ ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ದುರ್ಯೋಧನ ಐಹೊಳೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next