Advertisement
ದುಡಿಯದಿದ್ದರೆ ಸಾಯುತ್ತೇವೆ ವಾಣಿಜ್ಯ ನಗರಿಯಾಗಿರುವ ಸಾವೊ ಪೌಲೊ ಸದ್ಯ ಅಕ್ಷರಶಃ ಸ್ಥಬ್ಧವಾಗಿದೆ. ಇಲ್ಲಿನ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿವೆ. ಸರಕಾರ ಸೂಚಿಸಿರುವ ನಿಯಮಗಳ ಮೇರೆಗೆ ರೆಸ್ಟೋರೆಂಟ್‌ಗಳು ಮಾತ್ರ ಕಾರ್ಯಾಚರಿಸುತ್ತಿದ್ದು, ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಸಣ್ಣ ಪುಟ್ಟ ಕೆಲಸಗಳನ್ನು ಅವಲಂಬಿಸಿರುವ ಕೆಳ ಸ್ತರದ ಜನರ ಜೀವನ ಅತಂತ್ರವಾಗಿದ್ದು, ನಗರದ ಹೊರವಲಯದಲ್ಲಿ ಬದುಕು ಕಟ್ಟಿಕೊಂಡಿರುವ ಈ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿ ಇದ್ದರೂ ಹೊರ ಹೋಗಿ ದುಡಿಯುವ ಅನಿವಾರ್ಯತೆ ನಮ್ಮದು.ದುಡಿಯದಿದ್ದರೆ ಕೋವಿಡ್‌ಗಿಂತ ಮೊದಲು ಹಸಿವು ನಮ್ಮನ್ನು ಕೊಲ್ಲಬಹುದು ಎನ್ನುತ್ತಾರೆ ಇಲ್ಲಿನವರು. ಬ್ರೆಜಿಲ್ಯಾಂಡಿಯದಲ್ಲಿ ಸಲೂನ್ ನಡೆಸುವ ಮೂಲಕ ಜೀವನ ನಡೆಸುತ್ತಿದ್ದ ಬಟಿಸ್ಟಾ ಸದ್ಯ ಆದಾಯ ಮೂಲವಿಲ್ಲದೆ ಪರದಾಡುತ್ತಿದ್ದು, ಭವಿಷ್ಯದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶ ಸೋಂಕಿನ ಹಾಟ್‌ಸ್ಪಾಟ್ ಎಂದು ಗುರುತಿಸಿಕೊಂಡಿದ್ದು, ಈಗಾಗಲೇ ಸೋಂಕಿನಿಂದ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಒಟ್ಟಾರೆಯಾಗಿ ಬ್ರಜಿಲ್ ಲ್ಯಾಟಿನ್ ಅಮೆರಿಕದ ಸೋಂಕು ಪೀಡಿತ ಕೇಂದ್ರವೆಂದೇ ಗುರುತಿಸಿಕೊಂಡಿದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸೋಂಕಿನ ಪ್ರಕರಣಗಳು ದೃಢಪಡುತ್ತಿದ್ದು, ಇದುವರೆಗೆ 12 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನ್ನು ಬ್ರಜಿಲ್‌ನಲ್ಲಿ ಸುಮಾರು 1,77,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸುಮಾರು 4 ಸಾವಿರದಷ್ಟು ಸಾವಿನ ಪ್ರಕರಣಗಳು ಸಾವ್ ಪಾಲೊ ರಾಜ್ಯದ್ದಾಗಿದೆ. ಈ ಪರಿಸ್ಥಿತಿಗೆ ಪರೋಕ್ಷವಾಗಿ ಅಧ್ಯಕ್ಷ ಜೈರ್ ಬೋಲ್ಸೊನಾರೊ ಕಾರಣವಾಗಿದ್ದು, ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಸಮಯದಲ್ಲಿ ಅಸಡ್ಡೆ ತೋರಿದ್ದಾರೆ. ಅಷ್ಟೇ ಅಲ್ಲದೆ ಸೋಂಕನ್ನು ಗಂಭೀರವಾಗಿ ಪರಿಗಣಿಸದೆ ಇದು ಕೇವಲ ಸಾಮಾನ್ಯ ಜ್ವರ ಎಂದು ತಾತ್ಸಾರ ತಾಳಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಸಾಮಾಜಿಕ ಅಂತರ ಪಾಲನೆ ಮತ್ತಿತರ ಸುರಕ್ಷಾ ಕ್ರಮಗಳನ್ನು ಹೇರುವ ಮೂಲಕ ಸೋಂಕು ಪ್ರಸರಣ ತಡಎಯಲು ಅಧಿಕಾರಿಗಳು ಪರದಾಡುತ್ತಿದ್ದರೆ, ಬೋಲ್ಸೊನಾರೊ ವ್ಯವಹಾರ ಚಟುವಟಿಕೆಗಳನ್ನು ಪುನಃ ತೆರೆಯು ಉತ್ಸುಕಯಿಂದಿದ್ದಾರೆ. ದೇಶ ಈ ಪರಿಸ್ಥಿತಿಗೆ ಬರಲು ಅಧ್ಯಕ್ಷ ಜೈರ್ ಬೋಲ್ಸೊನಾರೊ ನಿರ್ಲಕ್ಷವೇ ಕಾರಣವೇ ಎಂಬ ಅಕ್ರೋಶ ಜನರಲ್ಲಿ ಮಡುಗಟ್ಟುತ್ತಿದೆ. ಸಾವೊ ಪೌಲೊದ ಉತ್ತರ ಭಾಗದಲ್ಲಿರುವ ಬ್ರೆಸಿಲ್ಯಾಂಡಿಯ ಸುಮಾರು 2,60,000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಶೇ.11 ಕ್ಕಿಂತಲೂ ಹೆಚ್ಚು ನಿವಾಸಿಗಳು ಫಾವೆಲಾಗಳಲ್ಲಿ (ಜೋಪಡಿ) ವಾಸಿಸುತ್ತಿದ್ದಾರೆ.ಬಹುತೇಕರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, ಅಂದು ದುಡಿದು ಅಂದೇ ತಿನ್ನುವ ಜೀವನ ಶೈಲಿ ಅವರದು. ಸದ್ಯ ಸೋಂಕಿನಿಂದ ಕೆಲಸವಿಲ್ಲದ ಇವರ ಪಾಡನ್ನು ಕೇಳುವವರಿಲ್ಲ.