Advertisement

ಸನ್ಯಾಸಿಮಠ ಯಕ್ಷ ತರಬೇತಿ ಕೇಂದ್ರಕ್ಕೆ ಬೆಳ್ಳಿ ಹಬ್ಬದ ಸಡಗರ

03:50 AM Apr 14, 2017 | |

ಉಡುಪಿ ಜಿಲ್ಲೆಯ ಬಡಾನಿಡಿಯೂರು ಎಂಬ ಪುಟ್ಟ ಊರಿನಲ್ಲಿ ಕಳೆದ 25 ವರ್ಷಗಳಿಂದ ಯಕ್ಷಗಾನ ಸಂಬಂಧಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಮಕ್ಕಳ ಯಕ್ಷಗಾನ ಕೇಂದ್ರ, ಸನ್ಯಾಸಿಮಠ ಇದರ ರಜತೋತ್ಸವ ಸಮಾರಂಭ ಎ. 15 ಮತ್ತು 16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಗಣ್ಯರ ಉಪಸ್ಥಿತಿಯ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಬಾಲಕರ ತಂಡಗಳಿಂದ ಎರಡು ದಿನ ಮಕ್ಕಳ ಯಕ್ಷಗಾನ ಸ್ಪರ್ಧೆ ಹಮ್ಮಿಕೊಂಡಿದ್ದು ಯಶಸ್ವಿ ತಂಡಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಎರಡೂ ದಿನ ಯಕ್ಷಗಾನದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸಮ್ಮಾನ, ಹವ್ಯಾಸಿ ಯಕ್ಷಗಾನ ಪ್ರದರ್ಶನ ನೆರವೇರಲಿದೆ. ಮೂರನೇ ದಿನ ಸಮಾರೋಪ ಸಮಾರಂಭ, ಬಹುಮಾನ ವಿತರಣೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

Advertisement

ಯಕ್ಷಗಾನ ಕಲೆ ಅವನತಿಯತ್ತ ಸಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಎಳೆಯ ಮಕ್ಕಳಲ್ಲಿ ಕಲೆಯ ಬೀಜ ಬಿತ್ತಿದರೆ ಹೆಮ್ಮರವಾಗುತ್ತದೆ ಎಂಬ ಬಡಾನಿಡಿಯೂರು ಕೇಶವ ರಾವ್‌ ಅವರ ಆಶಯಕ್ಕೆ ಸನ್ಯಾಸಿ ಮಠದ ಮಂಡಳಿ ಸಮ್ಮತಿ ನೀಡಿತು. ದೇವಸ್ಥಾನದ ಸ್ಥಳಾವಕಾಶ ಬಿಟ್ಟರೆ ಇತರ ಯಾವುದೇ ಸಹಕಾರ ಪಡೆಯದೆ ಸ್ವಯಂ ಕೇಶವ ರಾಯರೇ ತನ್ನ ಗುರು ತೋನ್ಸೆ ಜಯಂತ ಕುಮಾರರ ಸಹಕಾರದೊಂದಿಗೆ ಶ್ರಮಿಸಿದುದರ ಫ‌ಲವಾಗಿ 1991ರ ಫೆಬ್ರವರಿ 17ರಂದು ಸನ್ಯಾಸಿಮಠದ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಅಂದಿನ ಎಸ್‌.ಕೆ.ಎಫ್. ಸಂಸ್ಥೆಯ ಛೇರ್‌ಮನ್‌ ಜೆ.ಎನ್‌.ಮಲ್ಯರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. 2010ರಲ್ಲಿ ವಿಂಶತಿಯನ್ನು ಆಚರಿಸಿದ ಸಂಸ್ಥೆ ಇಂದು ರಜತೋತ್ಸವವನ್ನು ಆಚರಿಸುತ್ತಿದೆ. ಗುರುಗಳ ಮಾರ್ಗದರ್ಶನದಲ್ಲಿ ಇಲ್ಲಿ ಯಕ್ಷಗಾನ ಕಲಿತ ಅನೇಕರು ಇಂದು ವೃತ್ತಿ ಕಲಾವಿದರಾಗಿ ಬೇಡಿಕೆಯ ಹವ್ಯಾಸಿ ಕಲಾವಿದರಾಗಿ ರೂಪುಗೊಂಡಿದ್ದಾರೆ.

 ಈ ಸಂಸ್ಥೆಯಲ್ಲಿ ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸ್ವೀಕರಿಸುವುದಿಲ್ಲ. ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಕ್ರಮವೂ ಇಲ್ಲಿಲ್ಲ. ದೇವಸ್ಥಾನದಿಂದ ಸಣ್ಣ ಮೊತ್ತದ ಸಹಕಾರದೊಂದಿಗೆ ವಾರದ ಎರಡು ರಜಾದಿನದಂದು ತರಗತಿ ನಡಸಲಾಗುತ್ತದೆ. ನವರಾತ್ರಿ ಹಾಗೂ ಬೇಸಗೆ ರಜಾ ದಿನದಲ್ಲಿ ದೂರದ ಊರಿನಿಂದಲೂ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದು, ಕೇಶವ ರಾಯರ ಮನೆಯೇ ಅವರಿಗೆ ಆಶ್ರಯ ತಾಣ. ಈಗ ಶಿಬಿರ 15 ದಿನಗಳಿಗೆ ಸೀಮಿತಗೊಂಡಿದ್ದು ಬೆಳಗಿನ ಹೊತ್ತು ಮಾತ್ರ ತರಗತಿ ನಡೆಸಲಾಗುತ್ತದೆ.

ತರಗತಿ ನಡೆಯುವಾಗ ಪ್ರತಿದಿನ ರಾಮಾಯಣ ಮಹಾಭಾರತಗಳ ಪರಿಚಯವನ್ನು ಮಾಡಲಾಗುತ್ತದೆ. ನೀತಿ ಪಾಠಗಳೂ ನಡೆಯುತ್ತವೆ. ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ವಿದ್ಯಾರ್ಥಿಗಳ ತಂದೆತಾಯಂದಿರನ್ನು ಕರೆಸಿ ಮಕ್ಕಳಿಂದ ಅವರ ಪಾದಪೂಜೆ ಮಾಡಿಸುವುದು ಇಲ್ಲಿನ ವಿಶೇಷತೆ. ಅದನ್ನು ನಿರಂತರ ಮನೆಯಲ್ಲಿ ಮಾಡಿಸುವಂತೆ ಬೋಧಿಸಲಾಗುತ್ತದೆ. ಯಕ್ಷಗಾನವಲ್ಲದೆ ಶಾಲಾ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿರುವಂತೆ ಗಮನಿಸಲಾಗುತ್ತದೆ. ಯಕ್ಷಗಾನದಿಂದ ಬೌದ್ಧಿಕ ವಿಕಾಸವಾಗುತ್ತದೆ ಎಂದು ಮನದಟ್ಟು ಮಾಡಿಸಿ ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಈ ಕಲೆಯ ಮೇಲೆ ಇರುವ ಕೀಳರಿಮೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಅಂಗನವಾಡಿಯ ಮಕ್ಕಳಿಂದಲೂ ಪ್ರದರ್ಶನವೇರ್ಪಡಿಸಿದ ಹೆಗ್ಗಳಿಕೆ ಸಂಸ್ಥೆಗಿದೆ.

ರಜತ ಮಹೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಆಯ್ದ ಐದು ಬಾಲ ತಂಡಗಳನ್ನು ಕರೆಸಿ ನುರಿತ ಮೂವರು ಅನುಭವಿ ತೀರ್ಪುದಾರರ ಸಮ್ಮುಖದಲ್ಲಿ ಯಕ್ಷಗಾನ ಸ್ಪರ್ಧೆ, ಯಕ್ಷಗಾನದ ಉಳಿವಿಗಾಗಿ ಶ್ರಮಿಸುತ್ತಿರುವ ಹನ್ನೆರಡು ಮಂದಿ ಹಿರಿಯರಿಗೆ ಸಮ್ಮಾನ, ಬಾಲಕರಿಂದ ಸೀತಾವಿಯೋಗ-ಲವಕುಶ ಯಕ್ಷಗಾನ ಪ್ರದರ್ಶನ, ಯಕ್ಷಗಾನ ನುರಿತ ಹಿರಿಯ ಕಲಾವಿದರಿಂದ ಚಕ್ರಚಂಡಿಕಾ ಎಂಬ ಯಕ್ಷಗಾನ ಏರ್ಪಡಿಸಲಾಗಿದೆ. ಸಂಸ್ಥೆಯ ಯಶಸ್ಸಿಗೆ ಶ್ರೀ ದುರ್ಗಾಪ್ರಮೇಶ್ವರಿ ದೇವಿಯ ಅನುಗ್ರಹ, ಆಡಳಿತ ಮಂಡಳಿ, ಊರವರು ಮತ್ತು ಮಕ್ಕಳ ಹೆತ್ತವರ ಪೂರ್ಣ ಸಹಕಾರವೂ ಅಪಾರ. 

Advertisement

ಪ್ರೊ| ಎಸ್‌.ವಿ. ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next