Advertisement
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನಾಚರಣೆ ಅಂಗವಾಗಿ ನಗರದ ಮೆಜೆಸ್ಟಿಕ್ ಬಳಿ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಹಾಕುವ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಎದುರು ಬದುರಾದರೂ ಮಾತನಾಡಿಲ್ಲ. ಒಂದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Related Articles
Advertisement
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವರ್ಷ ರಾಯಣ್ಣನ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿದ್ದರು. ಆದರೆ, ಈ ವರ್ಷ ಕುಮಾರಸ್ವಾಮಿಯವರ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಇರಲಿಲ್ಲ. ಆದರೂ, ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಮುಗಿಸಿ ನೇರವಾಗಿ ಆಗಮಿಸಿದರು.
ಆದರೆ, ಒಂದೇ ಕಾರ್ಯಕ್ರಮದ ಬಳಿ ದೋಸ್ತಿ ಸರ್ಕಾರದ ಇಬ್ಬರೂ ನಾಯಕರು ಎದುರು ಬದುರಾದರೂ ಮಾತನಾಡದೇ ಅಂತರ ಕಾಯ್ದುಕೊಂಡಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಹಲವಾರು ತೀರ್ಮಾನಗಳನ್ನು ಬದಲಿಸಿದ್ದರು. ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕಡಿತ, ಸಿಂಡಿಕೇಟ್ ಸದಸ್ಯರನ್ನು ಬದಲಾಯಿಸಲಾಗಿತ್ತು. ಸ್ವ ಕ್ಷೇತ್ರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ ಬಜೆಟ್‌ನಲ್ಲಿ ಸೇರ್ಪಡೆ ಮಾಡಿರಲಿಲ್ಲ. ಹಿಂದಿನ ಅವಧಿಯಲ್ಲಿ ನಡೆಸಿದ್ದ ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡುವ ಕುರಿತಂತೆಯೂ ಇಬ್ಬರೂ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.