ಕೋವಿಡ್ ಲಾಕ್‌ಡೌನ್ ಇಲ್ಲೊಬ್ಬ ಸಿನಿಮಾಸಕ್ತ ಪ್ರೇಕ್ಷಕನನ್ನು ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕನನ್ನಾಗಿ ಮಾಡಿದೆ. ಅವರೇ ಸಿದ್ದು ಎಸ್. ಮೂಲತಃ ಎಂಸಿಎ ಪದವೀಧರರಾಗಿರುವ ಜೊತೆಗೆ ಉಪನ್ಯಾಸಕರಾಗಿ, ಉದ್ಯಮಿಯಾಗಿ ಗುರುತಿಸಿಕೊಂಡಿರುವ ಸಿದ್ದು ಎಸ್, ತಮ್ಮದೇ ಕಥೆಯೊಂದನ್ನು “ಸಂತೋಷ ಸಂಗೀತ’ ಎಂಬ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿ ದ್ದಾರೆ. “ಸಂತೋಷ ಸಂಗೀತ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ.
ಇತ್ತೀಚೆಗೆ “ಸಂತೋಷ ಸಂಗೀತ’ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದೆ ಚಿತ್ರತಂಡ. ಇದೇ ವೇಳೆ ಮಾತನಾಡಿದ “ಸಂತೋಷ ಸಂಗೀತ’ ಸಿನಿಮಾದ ನಿರ್ಮಾಪಕ ಕಂ ನಿರ್ದೇಶಕ ಸಿದ್ದು ಎಸ್, “ನನ್ನದೇ ಆದ ಕಥೆಯನ್ನು ನಾನೇ ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರುತ್ತಿದ್ದೇನೆ. ಇದೊಂದು ಕಮರ್ಷಿಯಲ್ ಲವ್‌ಸ್ಟೋರಿ ಸಿನಿಮಾ. ಕೋವಿಡ್ ಲಾಕ್‌ಡೌನ್ ಪರಿಸ್ಥಿತಿ, ಬಿಝಿನೆಸ್, ಸಮಾಜ, ಫ್ಯಾಮಿಲಿ ಹೀಗೆ ಹತ್ತಾರು ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ಇದೇ ಆಗಸ್ಟ್ ವೇಳೆಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ’ ಎಂದರು.
“ಸಂತೋಷ ಸಂಗೀತ’ ಸಿನಿಮಾದಲ್ಲಿ ಅರ್ನವ್ ವಿನ್ಯಾಸ್, ರಾಣಿ ವರದ್ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ದೊಡ್ಡಣ್ಣ, ಬಲರಾಜವಾಡಿ, ಅವಿನಾಶ್, ಲಯಕೋಕಿಲ, ಸೂರ್ಯ, ಲೋಕೇಶ್, ಮಡೆನೂರು ಮನು, ಸೀತಾ ಕೋಟೆ, ಅಮಿತ್, ಕವನ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಎಸ್ ಸ್ಕ್ವೇರ್ ಎಂಟರ್‌ಪ್ರೈಸಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ “ಸಂತೋಷ ಸಂಗೀತ’ ಸಿನಿಮಾಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ವಿನಯ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಶ್ರೀಶಾಸ್ತ ಭೂಪತಿ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು 45ಕ್ಕೂ ಹೆಚ್ಚು ದಿನಗಳ ಕಾಲ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.
ಜಿ.ಎಸ್.ಕಾರ್ತಿಕ ಸುಧನ್