ಧಾರವಾಡ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಗೆದ್ದು ಗೆದ್ದು ಅಭ್ಯಾಸ ಆಗಿದ್ದು, ನಾಲ್ಕು ಲಕ್ಷ ಮತಗಳಿಂದ ಹೇಗೆ ಗೆಲ್ಲುತ್ತಾರೋ ಗೊತ್ತಿಲ್ಲ. ಅತಿಯಾದ ಆತ್ಮವಿಶ್ವಾಸದಲ್ಲಿದ್ದು, ಆದರೆ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲೂ ಈ ಬಾರಿ ಹೆಚ್ಚಿನ ಸೀಟನ್ನು ನಾವು ಗೆಲ್ಲುತ್ತೇವೆ ಎಂದರು.
ಜಿಡಿಪಿಯಲ್ಲಿ ಬಾಂಗ್ಲಾದೇಶಕ್ಕಿಂತ ನಾವು ಹಿಂದೆ ಇದ್ದೇವೆ. ಎಲೆಕ್ಷನ್ ಬಾಂಡ್ ಬಗ್ಗೆ ಜೋಶಿ ಮಾತನಾಡುತ್ತಿಲ್ಲ. ಆರೂವರೆ ಸಾವಿರ ಕೋಟಿ ಬಿಜೆಪಿಗೆ ದೇಣಿಗೆ ಬಂದಿದೆ. ಇದು ಎಲ್ಲಿಂದ ಬಂತು? ಏಕೆ ಬಂತು? 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಬೇಕು ಎಂದರು.
ಕೇಂದ್ರದ ಬಿಜೆಪಿ ಸರಕಾರವನ್ನು ಈ ಬಾರಿ ಸೋಲಿಸಬೇಕೆಂದು ಜನ ತೀರ್ಮಾನ ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಆಗಿದ್ದನ್ನು ಹೇಳುವುದು ಬಿಟ್ಟು ಮುಂದಿನ 5 ವರ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಕರ್ನಾಟಕಕ್ಕೆ ಕೊಡಬೇಕಾದ ಯಾವುದೇ ಬಾಕಿ ಹಣ ಇಲ್ಲ ಎಂಬುದಾಗಿ ಹೇಳಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಲಾಡ್, ಬರಗಾಲದ ದುಡ್ಡು ಬಾರದೇ ಹೋದರೂ ಅದಕ್ಕೂ ನಾವು ಸುಳ್ಳು ಹೇಳುತ್ತಿದ್ದೇವೆ ಎಂಬುದಾಗಿ ಬಿಜೆಪಿಗರು ಹೇಳುತ್ತಿದ್ದಾರೆ. ಬಿಜೆಪಿ ಹೇಳಿದ್ದೇ ವೇದ ವಾಕ್ಯ ಎನ್ನುವಂತಾಗಿದೆ ಎಂದರು.
ಒಂದೆರೆಡು ಕಡೆಗಳಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ ಆಗಿದೆ. ಅಸಮಾಧಾನಿತರ ಜತೆ ವಿನಯ್ ಕುಲಕರ್ಣಿ ಸೇರಿದಂತೆ ನಮ್ಮ ಪಕ್ಷದ ಮುಖಂಡರು ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: Lok Sabha Election: ಜನರ ಆಕ್ರೋಶದ ಬಳಿಕ ಜೈಪುರ ಅಭ್ಯರ್ಥಿಯ ಬದಲಿಸಿದ ಕಾಂಗ್ರೆಸ್