“ದೃಷ್ಟಿ ಮಿಡಿಯಾ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ “ಹೋಮ್ ಸ್ಟೇ’ ಸಿನಿಮಾದ ಖ್ಯಾತಿಯ ಸಂತೋಷ್ ಕೋಡಂಕೇರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ (ಪ್ರೊಡಕ್ಷನ್ ನಂ. 02) ಹೊಸ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ಸುಳ್ಯದ ಶ್ರೀಚನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.
ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ತೂಗುಸೇತುವೆಗಳ ಸರದಾರ ಪದ್ಮಶ್ರೀ ಗಿರೀಶ್ ಭಾರಧ್ವಾಜ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಹಾಗೂ ಜೆಡಿಎಸ್ ರಾಜ್ಯ ಸಂಚಾಲಕ ಎಂ.ಬಿ. ಸದಾಶಿವ, ಶ್ರೀಚನ್ನಕೇಶವ ದೇವಳದ ಆಡಳಿತ ಮೊಕೇಸ್ತರ ಡಾ. ಹರಪ್ರಸಾದ್ ತುದಿಯಡ್ಕ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಸೇರಿದಂತೆ ಅನೇಕರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ಹೊಸ ಸಿನಿಮಾಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಸಂತೋಷ್ ಕೋಡಂಕೇರಿ, “ಈ ಸಿನಿಮಾ ದಕ್ಷಿಣ ಕನ್ನಡದ ಸೊಗಡು, ಭಾಷೆ, ಸಂಸ್ಕೃತಿಗಳ ಚಿತ್ರಣ ಹೊಂದಿದೆ. ಕರಾವಳಿಯ ಜನ-ಜೀವನ ಸಿನಿಮಾದಲ್ಲಿದೆ. ಸಿನಿಮಾದ ಕಥೆಗೆ ತಕ್ಕಂತೆ, ದಕ್ಷಿಣ ಕನ್ನಡದ ಸುಳ್ಯ, ಸಂಪಾಜೆ, ತೋಡಿಕಾನ ಸುತ್ತಮುತ್ತ ಸುಮಾರು 30 ದಿನಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಇನ್ನು, ಈ ಹೊಸ ಸಿನಿಮಾದಲ್ಲಿ ಗೀತಾ ಭಾರತಿ ಭಟ್, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ್, ಖುಷಿ ಆಚಾರ್, ಮೀನಾ, ದರ್ಶಿನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಪಾವನಾ ಸಂತೋಷ್ ಕಥೆ-ಸಂಭಾಷಣೆ ಬರೆದಿದ್ದು, ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರಕ್ಕೆ ಮುರಳಿಧರ್. ಎಂ ಛಾಯಾಗ್ರಹಣ, ರಘು ಎಸ್. ಸಂಕಲನ, ಚಿತ್ರದ ಹಾಡುಗಳಿಗೆ ವಿನಯ್ ಶರ್ಮಾ ಸಂಗೀತ ಸಂಯೋಜನೆಯಿದ್ದು, ಕಿರಣ್ ಕಾವೇರಪ್ಪ ಸಾಹಿತ್ಯವಿದೆ.