ರಿಯಾಧ್: ಭಾರತದ ಪ್ರತಿಷ್ಠಿತ ರಾಷ್ಟ್ರೀಯ ಕಬಡ್ಡಿ ಕೂಟ ಸಂತೋಷ್ ಟ್ರೋಫಿಯ ಫೈನಲ್ ಪಂದ್ಯ ಶನಿವಾರ ಸೌದಿ ಅರೇಬಿಯದ ರಾಜಧಾನಿ ರಿಯಾಧ್‌ನಲ್ಲಿ ನಡೆಯಲಿದೆ. 47 ವರ್ಷಗಳ ನಂತರ ಈ ಕೂಟದ ಫೈನಲ್ ಹಂತಕ್ಕೇರಿರುವ ಕರ್ನಾಟಕ, ಇದೇ ಮೊದಲ ಬಾರಿಗೆ ಫೈನಲ್‌ಗೇರಿರುವ ಪುಟ್ಟ ರಾಜ್ಯ ಮೇಘಾಲಯವನ್ನು ಎದುರಿಸಲಿದೆ. ಯಾವುದೇ ತಂಡ ಪ್ರಶಸ್ತಿ ಗೆದ್ದರೂ ಎರಡಕ್ಕೂ ಐತಿಹಾಸಿಕ ಸಾಧನೆಯಾಗಲಿದೆ.
ಮೇಘಾಲಯ ಫೈನಲ್‌ಗೇರಿದ್ದೇ ಇದೇ ಮೊದಲ ಬಾರಿ. ಅದು ಸೆಮಿಫೈನಲ್‌ನಲ್ಲಿ ಬಲಿಷ್ಠ ಪಂಜಾಬನ್ನು ಸೋಲಿಸಿತ್ತು. ಪಂಜಾಬ್ ಸಂತೋಷ್ ಟ್ರೋಫಿ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ತಂಡ ಎನ್ನುವುದನ್ನು ಗಮನಿಸಬೇಕು. ಹೀಗಿರುವಾಗ ಅದು ಕರ್ನಾಟಕವನ್ನು ಸೋಲಿಸಿ ಪ್ರಶಸ್ತಿ ಗೆದ್ದರೆ, ಆ ರಾಜ್ಯದ ಪಾಲಿಗೆ ಅತಿದೊಡ್ಡ ವಿಚಾರವಾಗಲಿದೆ.
ಇನ್ನು ಕರ್ನಾಟಕ 1968-69ರಲ್ಲಿ ಪ್ರಶಸ್ತಿ ಗೆದ್ದಿತ್ತು. ಆಗ ನಮ್ಮ ರಾಜ್ಯವನ್ನು ಮೈಸೂರು ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. 1975-76ರಲ್ಲಿ ಕರ್ನಾಟಕ ಫೈನಲ್‌ಗೇರಿತ್ತು. ಅಲ್ಲಿ ಪ.ಬಂಗಾಳ ವಿರುದ್ಧ ಸೋತುಹೋಗಿತ್ತು. ಹೀಗಾಗಿ ಪ್ರಶಸ್ತಿ ಗೆದ್ದರೆ 54 ವರ್ಷಗಳ ನಂತರ ದಾಖಲಾದ ಅದ್ಭುತ ಸಾಧನೆಯಾಗಲಿದೆ.
ಒಂದು ಕಾಲದಲ್ಲಿ ರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಕರ್ನಾಟಕದ ಆಟಗಾರರಿಗೆ ದೊಡ್ಡ ಹೆಸರಿತ್ತು. 75-76ರಲ್ಲಿ ಫೈನಲ್‌ಗೇರಿದ ನಂತರ ಮತ್ತೂಮ್ಮೆ ಆ ಸುತ್ತಿಗೆ ಪ್ರವೇಶ ಮಾಡಲಾಗಿಲ್ಲ ಎನ್ನುವುದನ್ನು ಗಮನಿಸಬೇಕು. ಜೊತೆಗೆ ತಂಡದ ಪ್ರದರ್ಶನವೂ ಬಿದ್ದುಹೋಗಿದೆ. ಗತವೈಭವವನ್ನು ಮರಳಿ ಗಳಿಸಿಕೊಳ್ಳುವ ಅತ್ಯುತ್ತಮ ಅವಕಾಶ ರಾಜ್ಯದ ಮುಂದಿದೆ. ವಿಶೇಷವೆಂದರೆ ಅಂತಿಮ ಸುತ್ತಿನಲ್ಲಿ ಬಲಿಷ್ಠ ತಂಡಗಳಾದ ಪಂಜಾಬ್ ಮತ್ತು ಸರ್ವೀಸಸ್‌ಗಳು ಎದುರಾಗಲಿವೆ ಎಂದು ಊಹಿಸಲಾಗಿತ್ತು. ಈ ನಿರೀಕ್ಷೆಯನ್ನು ಕರ್ನಾಟಕ, ಮೇಘಾಲಯಗಳು ಹುಸಿ ಮಾಡಿವೆ. ಹೀಗೆ ನೋಡಿದರೆ ಚಾಂಪಿಯನ್ ಆಗುವ ತಂಡವನ್ನು ಊಹಿಸುವುದು ತೀರಾ ಕಷ್ಟವಾಗಿದೆ.