ಸಂತೆಮರಹಳ್ಳಿ: ಯಳಂದೂರು ಪಟ್ಟಣ ಪಂಚಾಯಿತಿಗೆ ಬುಧವಾರ ನಡೆದ ಚುನಾವಣೆಯು ಶಾಂತಿಯುತವಾಗಿ ನೆರವೇರಿತು. ಪಟ್ಟಣದ 4ನೇ ವಾರ್ಡಿನಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನದಲ್ಲಿ 1 ಗಂಟೆ ವಿಳಂಬವಾದ ಪ್ರಸಂಗವೂ ಜರುಗಿತು.
ಕೈ ಕೊಟ್ಟ ಮತಯಂತ್ರ: ಪಟ್ಟಣದ ಗೌತಮ್ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ವಾರ್ಡಿನ ಮತಗಟ್ಟೆಯಲ್ಲಿ 80 ಮತಗಳು ಹಾಕಿದ್ದ ವೇಳೆ ಮತಯಂತ್ರ ಕೈಕೊಟ್ಟಿತು. ಇದನ್ನು ದುರಸ್ತಿಪಡಿಸಲು ತಜ್ಞರ ತಂಡ ಸ್ಥಳಕ್ಕೆ ದೌಡಾಯಿಸಿದರೂ ಇದು ಸಾಧ್ಯವಾಗಲಿಲ್ಲ. ನಂತರ ಚುನಾವಣಾ ಸಿಬ್ಬಂದಿ ಬೇರೆ ಮತ ಯಂತ್ರ ವನ್ನು ಅಳವಡಿಸುವ ಮೂಲಕ ಮತ್ತೆ ಚುನಾವಣೆ ಆರಂಭಿಸಲು ನೆರವಾದರು. ಅಷ್ಟೋತ್ತಿಗಾಗಲೇ 1 ಗಂಟೆ ತಡವಾಗಿತ್ತು.
10ನೇ ವಾರ್ಡಿನಲ್ಲಿ ಕೆಲ ಕಾಲ ಗದ್ದಲ: ಪಟ್ಟಣ 11 ವಾರ್ಡ್‌ಗಳಿಗೆ ಚುನಾವಣೆ ನಡೆಯಿತು. ಪ್ರತಿ ವಾರ್ಡಿಗೂ ಪ್ರತ್ಯೇಕ ಮತಗಟ್ಟೆ ಸ್ಥಾಪಿಸ ಲಾಗಿತ್ತು. ಪಟ್ಟಣದ 10ನೇ ವಾರ್ಡಿನಲ್ಲಿ ಬೆಳಗ್ಗೆಯಿಂದಲೂ ಅಭ್ಯರ್ಥಿ ಗಳ ಪರ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿತ್ತು. ನಿಗದಿತ ಗಡಿಯನ್ನು ದಾಟಿ ತಮಗೆ ಮತ ನೀಡಿ ಎಂದು ಪ್ರತಿಯೊಬ್ಬ ಅಭ್ಯರ್ಥಿಯೂ ಮತದಾರರಿಗೆ ತಮ್ಮ ಕಾರ್ಯಕರ್ತರ ಒಡಗೂಡಿ ಅವಲತ್ತುಕೊಳ್ಳು ತ್ತಿದ್ದರು. ಇವರ ಸಂಖ್ಯೆಯೂ ಹೆಚ್ಚಾಗಿದ್ದರಿಂದ ಗದ್ದಲ ಉಂಟಾಯಿತು. ಕೆಲ ಕಾಲ ಪೊಲೀಸರು ಗುಂಪನ್ನು ಚದುರಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ವ್ಹೀಲ್ ಚೇರ್ ಇಲ್ಲದೆ ಪರದಾಡಿದ ಮತದಾರರು: ಪಟ್ಟಣದ ದೇವಾಂಗ ಬೀದಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣ ಮಾಡಲಾಗಿದ್ದ 3 ಮತ್ತು 7 ನೇ ಮತಗಟ್ಟೆಯಲ್ಲಿ ಮತದಾ ರರಿಗೆ ವ್ಹೀಲ್ ಚೇರ್ ವ್ಯವಸ್ಥೆ ಇರಲಿಲ್ಲ. ವಿಶೇಷ ಚೇತನರು ಹಾಗೂ ವಯೋವೃದ್ಧರನ್ನು ಎತ್ತಿಕೊಂಡೇ ಮತಗಟ್ಟೆಗೆ ತೆರಳುವ ಸ್ಥಿತಿ ಇತ್ತು.
ಮಳೆ ನೀರಿನಲ್ಲೇ ನಡೆದ ಮತದಾನ: ಪಟ್ಟಣದ 3 ಮತ್ತು 7ನೇ ವಾರ್ಡ್ ವ್ಯಾಪ್ತಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ 1 ಮತ್ತು 2ನೇ ವಾರ್ಡಿನ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿನ ಮಂಗಳವಾರ ರಾತ್ರಿ ಪಟ್ಟಣದಲ್ಲಿ ಸುರಿದ ಮಳೆಯಿಂದ ಮಳೆ ನೀರು ಸಂಗ್ರಹವಾಗಿ ಇಡೀ ಆವರಣವೇ ಮಳೆ ನೀರಿನಿಂದ ತುಂಬಿಕೊಂಡಿತ್ತು. ಇದರಿಂದ ವಯೋವೃದ್ಧರು ಪರದಾಡುವ ಸ್ಥಿತಿ ನಿರ್ಮಾಣಮಾತು. ಕಾಲು ಜಾರಿ ಬೀಳುವ ಅಪಾಯದಲ್ಲೇ ಬೇರೆಯವರ ನೆರವಿನೊಂದಿಗೆ ಮತ ಚಲಾವಣೆ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಗುತ್ತಿತ್ತು. ಅಲ್ಲದೆ ವಿಶೇಷ ಚೇತನರನ್ನು ಖಾಸಗಿ ವಾಹನಗಳಲ್ಲಿ ಮತಗಟ್ಟೆ ಸಮೀಪಕ್ಕೆ ಸಾಗಿಸಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.