Advertisement
ಮೊನ್ನೆ ನನ್ನ ಗೆಳೆಯರೊಬ್ಬರು ಮಾತಾಡುತ್ತ ನಮ್‌ದೇಶ ಯಾವತ್ತಿದ್ರೂ ಉದ್ಧಾರ ಆಗಲ್ಲ, ರಾಜಕಾರಣಿಗಳು ನಮ್ಮ ದೇಶಾನ ಮುಂದೆ ಬರೋಕೆ ಬಿಡಲ್ಲ, ಇಂಥ ಹತ್ತು ಮೋದಿ ಎದ್ದು ಬಂದ್ರೂ ನಮ್‌ದೇಶಾನ ಮುಂದೆ ತರೋಕೆ ಆಗಲ್ಲ, “ಯಾವಕ್ಕೂ ನಮ್‌ಜನ ಸರಿ ಇಲ್ಲಾರಿ’ ಅನ್ನುತ್ತ ತಮ್ಮ ಬಾಯಲ್ಲಿ ತುಂಬಿಕೊಂಡಿದ್ದ ಎಲೆಅಡಿಕೆಯ ರಸವನ್ನು ಪುಚುಕ್ ಅಂತ ರಸ್ತೆಯ ಮೇಲೆ ಉಗುಳಿ ಸ್ವತ್ಛತಾ ಕಾರ್ಯದ ಬಗ್ಗೆ ತನ್ನಲ್ಲಿ ಆವರಿಸಿರುವ ಕಾಳಜಿಯನ್ನು ಎತ್ತಿ ತೋರಿಸಿದರು! ಈ ಉದಾಹರಣೆ ಯಾಕಪ್ಪ ಹೇಳ್ಬೇಕಾಯಿತು ಅಂದ್ರೆ ಎಲ್ಲದಕ್ಕೂ ರಾಜಕಾರಣಿಗಳನ್ನು ತೆಗಳುವ ನಮ್ಮಂಥ ಭಾರತೀಯರ ಮನದೊಳಗೆ ತಣ್ಣಗೆ ಅವಿತು ಕುಳಿತ ಆಲಸ್ಯ, ಅಶಿಸ್ತು ಆವಾಗಾವಾಗ ಈ ರೀತಿ ಇಣುಕಿ ಮರೆಯಾಗುತ್ತದೆ. ಅಂದ ಹಾಗೆ ಅಸ್ವತ್ಛ ಭಾರತಕ್ಕೆ ನಾವೆಲ್ಲಾ ತಿಳಿದೋ-ತಿಳಿಯದೆಯೋ ಪಾಲುದಾರರೇ. ಅದಕ್ಕೊಂದು ಸಣ್ಣ ಉದಾಹರಣೆ ವಾರಕ್ಕೊಂದರಂತೆ ನಡೆಯುವ ಸಂತೆ.
ಈ ಸಂತೆ ಶುರುವಾದದು ಯಾವಾಗ ಅನ್ನೋ ನಿಖರ ದಾಖಲೆಗಳು ನಮಗೆ ಖಂಡಿತ ಸಿಗಲಾರದು. ರಾಜರ ಕಾಲದಿಂದಲೂ ಊರೊಳಗೆ ಸಂತೆಗಳು ನಡೆಯುತ್ತಲೇ ಇದ್ದವು, ಈಗಲೂ ಸಂತೆಗಳ ಭರಾಟೆ ಕಡಿಮೆಯಾಗಿಲ್ಲ. ಬೆಂಗಳೂರಿನಂಥ ಮಹಾನಗರಗಳಲ್ಲಿ ದೊಡ್ಡ ದೊಡ್ಡ ಮಾಲ್‌ಗಳಿದ್ದರೂ ದಿನನಿತ್ಯ ಸಂತೆಗಳ ಕಾರುಬಾರು ನಡೆಯುತ್ತಲೇ ಇವೆ. ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ದರಕ್ಕಿಂತ ಕಡಿಮೆ ದರದಲ್ಲಿ ವಸ್ತುಗಳು ಸಂತೆಗಳಲ್ಲಿ ಸಿಗುವುದರಿಂದ ಗ್ರಾಹಕರೂ ಸಾಮಾನು-ಸರಂಜಾಮುಗಳನ್ನು ಹೇರಿಕೊಂಡು ತಮ್ಮ ಮನೆಗಳಿಗೆ ತೆರಳುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ವಹಿವಾಟಿನಲ್ಲಿ ಲಕ್ಷಾಂತರ ರೂಪಾಯಿ ದುಡ್ಡು ಕೈ-ಬದಲಾಗುತ್ತದೆ. ಆದರೆ, ಸಂಜೆಯಾಗುತ್ತಲೇ ಮುಕ್ತಾಯವಾಗುವ ಸಂತೆಯ ನಂತರ ಉಳಿದುಕೊಳ್ಳುವುದೇನು? ಎಲ್ಲಿ ನೋಡಿದರೂ ಕಸ, ಕಸ, ಕಸ ! ಸ್ವತ್ಛ ಭಾರತದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ನಾಗರಿಕರೆಲ್ಲರೂ ಸಂತೆ ನಡೆದು ಮುಕ್ತಾಯವಾದ ಜಾಗಕ್ಕೆ ಒಮ್ಮೆ ಭೇಟಿ ಕೊಡಿ ಸಾಕು. ನಮ್ಮ ಅನಾಗರಿಕತೆ, ಅಶಿಸ್ತು, ಆಲಸ್ಯ ಒಂದೇ ಕಡೆ ಗುಡ್ಡೆ ಹಾಕಿದಂತೆೆ ಕಾಣುತ್ತದೆ ಅಲ್ಲಿನ ದೃಶ್ಯ. ಅಲ್ಲಲ್ಲಿ ಕಸದ ರಾಶಿ, ಕೊಳೆತ ತರಕಾರಿಗಳು, ಖಾಲಿ ಚೀಲಗಳು, ಖಾಲಿ ಡಬ್ಬಿಗಳು, ಪ್ಲಾಸ್ಟಿಕ್ ಲಕೋಟೆ, ಬಾಟಲಿಗಳು ಒಂದೇ ಎರಡೇ? ಇವುಗಳ ನಡುವೆ ಆಹಾರ ಹುಡುಕುತ್ತಿರುವ ಬೀಡಾಡಿ ದನಗಳು, ಬೀದಿ ನಾಯಿಗಳು, ಹಕ್ಕಿಗಳು. ಒಂದು ಪ್ರದೇಶವನ್ನು ಎಷ್ಟು ಸಾಧ್ಯವೋ ಅಷ್ಟು ಹಾಳುಗೆಡವಿ ನಗರದ ಸಂಪೂರ್ಣ ಸೌಂದರ್ಯವನ್ನು ಕೆಡಿಸಿ ಹಾಕಲು ಶಿರಸಾವಹಿಸಿ ದುಡಿಯುತ್ತಿರುವ ನಮ್ಮಂಥ ಅಪ್ಪಟ ಭಾರತೀಯರ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯೇ ಈ ಸಂತೆ!
Related Articles
Advertisement
ಎಲ್ಲೆಲ್ಲಿಯಲ್ಲೋ ಉದಾಹರಣೆ ತೆಗೆದುಕೊಳ್ಳೋದು ಬೇಡ, ಬುದ್ಧಿವಂತರ ಜಿಲ್ಲೆಯೆಂದೇ ಪ್ರಖ್ಯಾತಿಯಾಗಿರುವ ಕರಾವಳಿಯ ಅವಳಿ ಜಿಲ್ಲೆಗಳಲ್ಲೂ ಇದೇ ಹಣೆಬರಹ. ದೇಶಕ್ಕೆ, ಪ್ರಪಂಚಕ್ಕೆ ಮೆದುಳನ್ನು ಕೊಡುತ್ತಿರುವ ಸಭ್ಯ ಜಿಲ್ಲೆಗಳಲ್ಲೂ ಸಂತೆಗಳಲ್ಲಿ ಸಭ್ಯತೆಯಿಲ್ಲ. ನಡೆಯುವ ಪ್ರತೀಸಂತೆಯ ನಂತರ ಉಳಿದುಕೊಳ್ಳುವುದು ಮತ್ತದೇ ಅಶಿಸ್ತಿನ, ಅಸ್ವತ್ಛತೆಯ, ಅನಾಗರಿಕತೆಯ ಮನಃಸ್ಥಿತಿ. ಒಂದೊಂದು ಕಡೆಯಂತೂ ಬಸ್‌ಸ್ಟ್ಯಾಂಡಿನ ಪಕ್ಕದಲ್ಲೋ, ಸಾರ್ವಜನಿಕ ಶೌಚಾಲಯಗಳ ಪಕ್ಕದಲ್ಲೋ ಎಲ್ಲೆದರಲ್ಲಿ ವ್ಯಾಪಾರ ಶುರುವಿಟ್ಟುಕೊಳ್ಳುತ್ತಾರೆ. ಒಂದು ಕಡೆ ಹರಿಯುವ ಕೊಳಚೆ ನೀರು ಮತ್ತೂಂದು ಕಡೆ ಹೊಟ್ಟೆಗೆ ತಿನ್ನೋ ಆಹಾರಗಳ ವ್ಯಾಪಾರ! ದೇವ್ರಾಣೆ ಅಲ್ಲೆಲ್ಲ ಕಾಲು ಹಾಕೋಕು ಮನಸ್ಸು ಬಾರದು ಅಷ್ಟೊಂದು ಗಲೀಜಾಗಿರುತ್ತೆ, ಸಂತೆ ನಡೆಯುವ ಸ್ಥಳಗಳು.ಇನ್ನು ಸಂತೆ ನಡೆಯುತ್ತಿದೆ ಎಂದರೆ ಜನ ಎಲ್ಲೆಲ್ಲಿಂದಲೋ ಒಂದೇ ಜಾಗಕ್ಕೆ ಭೇಟಿಕೊಡುವುದರಿಂದ ವಾಹನಗಳನ್ನು ಅಲ್ಲಿ ನಿಲ್ಲಿಸಿ ಹೋಗುತ್ತಾರೆ.ಇದರಿಂದ ಅನಗತ್ಯ ಜನಸಂದಣಿ ಉಂಟಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುವುದೂ ಕೂಡ ಸಂತೆಯ ಇನ್ನೊಂದು ಅಡ್ಡಪರಿಣಾಮ.
ಇನ್ನು ಆರೋಗ್ಯದ ದೃಷ್ಟಿಯಿಂದ ನೋಡೋದಾದ್ರೆ ಸಂತೆಯಲ್ಲಿ ಕೊಂಡ ವಸ್ತುಗಳನ್ನು ಒಂದೊಂದು ಬಾರಿ ತಿನ್ನಲೂ ಮನಸ್ಸು ಬಾರದು, ಜನಗಳ ಓಡಾಟದಿಂದ ಮೇಲೇಳುವ ಧೂಳಿನ ಕಣಗಳು ಅಲ್ಲಲ್ಲಿ ಹರಡಿರುವ ಹಣ್ಣು-ತರಕಾರಿಗಳು, ತಿಂಡಿ-ತಿನಸುಗಳು, ದಿನಸಿ ಸಾಮಾನುಗಳ ಮೇಲೆ ಯಥೇತ್ಛವಾಗಿ ಸೇರುವುದರಿಂದ ದೇಹಾರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇನ್ನು ಅಲ್ಲಲ್ಲಿ ಬಿದ್ದಿರುವ ಕೊಳೆತ ಹಣ್ಣು-ತರಕಾರಿಗಳ ಮೇಲೆ ನೊಣಗಳು, ಸೊಳ್ಳೆಗಳು ತಮ್ಮ ಸಂಸಾರ ಹೂಡುವುದರಿಂದ ಸಾಂಕ್ರಾಮಿಕ ರೋಗಗಳಿಗೆ ರತ್ನಗಂಬಳಿ ಹಾಸಿದಂತೆಯೇ ಸರಿ. ಇಷ್ಟೆಲ್ಲಾ ತೊಂದರೆಗಳಿರುವುದರಿಂದ ಇದಕ್ಕೊಂದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲೇಬೇಕು.
ಸರಕಾರದ ಪಾತ್ರವೇನು? ದೇಶದ ಪ್ರಜೆಗಳ ಆರೋಗ್ಯದ ದೃಷ್ಟಿಯಿಂದ ತಿನ್ನುವ ಆಹಾರವನ್ನು ಸಮರ್ಪಕವಾಗಿ, ಶುದ್ಧವಾಗಿ, ವ್ಯವಸ್ಥಿತವಾಗಿ ಬಳಸಲು ಪ್ರೇರೇಪಿಸುವುದು ಸರಕಾರದ ಆದ್ಯ ಕರ್ತವ್ಯಗಳಲ್ಲೊಂದು. ಅದಕ್ಕಾಗಿ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯ. .ಮೊತ್ತ ಮೊದಲನೆಯದಾಗಿ ತಿನ್ನುವ ತರಕಾರಿಗಳನ್ನು ನೆಲದ ಮೇಲೆ ಹರಡಿ ವ್ಯಾಪಾರ ನಡೆಸುವ ಬದಲು ಒಂದು ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ ವ್ಯವಸ್ಥಿತವಾಗಿ ವ್ಯಾಪಾರ ನಡೆಸಲು ಅನುವು ಮಾಡಿಕೊಡುವುದು. .ಕೊಳೆತ ತರಕಾರಿಗಳನ್ನು ಅಲ್ಲಲ್ಲಿ ಎಸೆಯದಂತೆ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು. ಅಂತೆಯೇ ಅಲ್ಲಲ್ಲಿ ಕಸದ ಬುಟ್ಟಿಗಳನ್ನಿಟ್ಟು ಕಸವನ್ನು ಬುಟ್ಟಿಗಳಲ್ಲಿ ಶೇಖರಿಸಲು ಪ್ರೇರೇಪಿಸುವುದು. .ವಾಹನ ದಟ್ಟಣೆಯನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಕ್ತ ವ್ಯವಸ್ಥೆಯನ್ನು ರಚಿಸುವುದು.
.ಸಂತೆ ಮುಗಿದ ನಂತರ ಅಲ್ಲಲ್ಲಿ ಹರಡಿರುವ ಕಸ-ಕಡ್ಡಿಗಳನ್ನು ಸ್ವತ್ಛಗೊಳಿಸಿ ಸಾಂಕ್ರಾಮಿಕರೋಗ ಹರಡದಂತೆ ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳುವುದು. ಶಕ್ತಿ ಉತ್ಪಾದನೆ ಸಾಧ್ಯವೇ?
ಶಕ್ತಿಯ ಮೂಲಗಳು ಬರಿದಾಗುತ್ತಿರುವ ಇಂದಿನ ದಿನಗಳಲ್ಲಿ ಉಪಯೋಗಿಸಿ ಎಸೆಯುವ ಪ್ರತಿ ವಸ್ತುವನ್ನೂ ಬಳಸಿಕೊಳ್ಳುವುದು ಜಾಣತನ. ಅಂತೆಯೇ ಸಂತೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಶಕ್ತಿ ಉತ್ಪಾದಿಸಬಹುದು. ವಾರವಿಡೀ ಒಂದೊಂದು ಪ್ರದೇಶಗಳಲ್ಲಿ ನಡೆಯುವ ಸಂತೆಗಳು ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಕೆಲವೇ ಕಿ.ಮೀ.ಗಳ ಅಂತರದಲ್ಲಿರುತ್ತವೆ. ಆದ್ದರಿಂದ ಸಂತೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳು, ಕೊಳೆತ ಹಣ್ಣು-ತರಕಾರಿಗಳನ್ನು ಯಾವುದಾದರೂ ಒಂದುಕಡೆ ಸಂಗ್ರಹಿಸಿ ಬಯೋಗ್ಯಾಸ್ ಘಟಕವನ್ನು ಸ್ಥಾಪಿಸಬಹುದು. ಇಂಥ ಘಟಕಗಳಿಂದ ಸಂಗ್ರಹವಾಗುವ ಬಯೋಗ್ಯಾಸ್‌ನ್ನು ಸಂಸ್ಕರಿಸಿ ಬಯೋಗ್ಯಾಸ್‌ಚಾಲಿತ ವಾಹನಗಳಲ್ಲಿ ಬಳಸಬಹುದು. ಸ್ವೀಡನ್, ಸ್ವಿಜರ್‌ಲ್ಯಾಂಡ್ ಹಾಗೂ ಜರ್ಮನಿಗಳಲ್ಲಿ ಈಗಾಗಲೇ ಈ ಯೋಜನೆ ಭಾರಿ ಜನಮನ್ನಣೆಯನ್ನು ಗಳಿಸಿದೆ. ಅಲ್ಲೆಲ್ಲ ಯಾಕೆ ನಮ್ಮ ಬೆಂಗಳೂರಿನಲ್ಲೇ ಬಯೋಗ್ಯಾಸ್ ಚಾಲಿತ ಬಸ್ಸುಗಳು ಕರ್ನಾಟಕ ರಾಜ್ಯರಸ್ತೆ ಸಾರಿಗೆ ಅಡಿಯಲ್ಲಿ ಓಡಾಡಲು ಸಂಪೂರ್ಣವಾಗಿ ಸಿದ್ಧಗೊಂಡಿವೆ. ಸ್ವೀಡನ್‌ನಲ್ಲಂತೂ ಬಯೋಗ್ಯಾಸ್‌ಚಾಲಿತ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದರೆ ನಿಜಕ್ಕೂ ಕೊಳೆತ ಹಣ್ಣು-ತರಕಾರಿಗಳಿಂದ ಎಷ್ಟು ಉಪಯೋಗವಿದೆ ಅನ್ನೋದನ್ನು ಅಂದಾಜಿಸಬಹುದು. ಇನ್ನು ಉತ್ಪತ್ತಿಯಾದ ಬಯೋಗ್ಯಾಸ್‌ನ್ನು ಸಂಸ್ಕರಿಸಿ ವಿದ್ಯುತ್‌ಶಕ್ತಿಯನ್ನು ಪಡೆದುಕೊಳ್ಳಬಹುದು. ಸುಮಾರು ಎರಡು ಕೆಜಿ ಹಣ್ಣು-ತರಕಾರಿಗಳಿಂದ 2 ಕಿಲೋ ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸಬಹುದು ಎಂದರೆ ನಿಜಕ್ಕೂ ಅಚ್ಚರಿಯ ವಿಷಯವೇ. ಅದಕ್ಕೆ ಅಲ್ಲವೇ ಹೇಳ್ಳೋದು ಕಸದಿಂದ ರಸ ಅಂತ ! ಭಾರತೀಯ ಮನಃಸ್ಥಿತಿ ಹೇಗಿದೆ ನೋಡಿ, ನಾವು ತಿನ್ನುವ ಆಹಾರ ವಸ್ತುಗಳು ರಸ್ತೆ ಬದಿಯಲ್ಲಿ ಮಣ್ಣು ಮೆತ್ತಿಸಿಕೊಳ್ಳುತ್ತಿರುತ್ತವೆ. ಆದರೆ ಕಾಲಿಗೆೆ ತೊಡುವ ಚಪ್ಪಲಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ತಣ್ಣಗೆ ಮಲಗಿರುತ್ತವೆ. ಇಲ್ಲಿ ತಿನ್ನುವ ಆಹಾರಕ್ಕಿಂತ ತೊಡುವ ಚಪ್ಪಲಿಗೇ ಮೌಲ್ಯ ಹೆಚ್ಚು. ಮನಃಸ್ಥಿತಿ ಬದಲಾಗಬೇಕಿದೆ, ಕೇವಲ ಸ್ವತ್ಛ ಭಾರತ ಅಂತ ಬಾಯಲ್ಲಿ ಬಡಾಯಿಕೊಚ್ಚಿಕೊಳ್ಳುತ್ತ ಸಿಕ್ಕಸಿಕ್ಕಲ್ಲಿ ಉಗಿದು, ಕಸಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆದು ಯುರೋಪಿನ ಕನಸು ಕಾಣುತ್ತಿದ್ದರೆ ದೇಶ ಸ್ವತ್ಛವಾಗುವುದೆ? ಮೊದಲು ಮನಸ್ಸನ್ನು ಸ್ವತ್ಛಗೊಳಿಸೋಣ. ಸಂತೆಗಳಾಗಲಿ ಅಥವಾ ಯಾವುದೇ ವ್ಯಾಪಾರ-ವಹಿವಾಟು ನಡೆಯುವ ಸ್ಥಳಗಳಾಗಲಿ ಮೊದಲು ನಮ್ಮ ಜವಾಬ್ದಾರಿಯನ್ನು ಅರಿತು ಬಾಳ್ಳೋಣ. – ಅಕ್ಷಿತ್ ದೇವಾಡಿಗ ಎಲ್ಲೂರು