Advertisement

“ಸಂತೆಕಟ್ಟೆ ರಸ್ತೆ ಸಮಸ್ಯೆ: 3 ದಿನಗಳಲ್ಲಿ ಪರಿಹರಿಸಿ’: ಜಿಲ್ಲಾಧಿಕಾರಿ

03:55 PM Jun 17, 2023 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಲ್ಯಾಣ ಪುರ ಸಂತೆಕಟ್ಟೆಯಲ್ಲಿ ಓವರ್‌ಪಾಸ್‌ ನಿರ್ಮಾಣಕ್ಕಾಗಿ ತೋಡಿ ರುವ ಹೊಂಡದಿಂದ ಹೆದ್ದಾರಿ ಕುಸಿಯುವ ಅಪಾಯವಿದ್ದು, ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ 3 ದಿನಗಳೊಳಗೆ ಸೂಕ್ತ ಪರಿಹಾರ ಹುಡುಕುವಂತೆ ರಾ.ಹೆ.ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಸೂಚನೆ ನೀಡಿದರು.

Advertisement

ಮಳೆಗಾಲದ ಹಿನ್ನೆಲೆ ಸಾರ್ವಜನಿಕರ ಹಿತ ದೃಷ್ಟಿಯಿಂದ ತುರ್ತಾಗಿ ಕೈಗೊಳ್ಳಬೇಕಾದ ರಾ.ಹೆ. ಕಾಮಗಾರಿಗಳ ಕುರಿತು ಉಡುಪಿ ತಾ| ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದರು.

ಸಂತೆಕಟ್ಟೆ ಜಂಕ್ಷನ್‌ನಲ್ಲಿ ಓವರ್‌ ಪಾಸ್‌ ನಿರ್ಮಾಣಕ್ಕೆ ಕೈಗೊಂಡಿರುವ ಕಾಮಗಾರಿಯಿಂದ ಹೆದ್ದಾರಿ ಪಕ್ಕದಲ್ಲಿ ಬೃಹತ್‌ ಹೊಂಡ ನಿರ್ಮಾಣವಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ತುಂಬಿ ಹೆದ್ದಾರಿ ಕುಸಿಯುವ ಸಂಭವವಿದೆ.

ಈ ಭಾಗದಲ್ಲಿ ವಾಹನ ಸಂಚಾರ ಬಂದ್‌ ಆಗುವ ಸಾಧ್ಯತೆಯಿದೆ. ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಯಾವ ಸೂಕ್ತ ವಿಧಾನವನ್ನು ಅಳವಡಿಸುವ ಮೂಲಕ ಹೆದ್ದಾರಿ ಕುಸಿತ ತಡೆಯಬಹುದು. ವಾಹನಗಳ ಸುರಕ್ಷಿತ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆಯನ್ನು ಶೀಘ್ರ ದಲ್ಲಿ ಸಿದ್ಧಪಡಿಸಿ ಕಾರ್ಯನಿರ್ವಹಿಸಬೇಕು. ಕಾಲಮಿತಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಬೇಕೆಂದು ನಿರ್ದೇಶಿಸಿದರು.

ಪೊಲೀಸ್‌ ಇಲಾಖೆಯಿಂದ ಗುರುತಿಸಿರುವ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಅಗತ್ಯವಿರುವ ವೈಜ್ಞಾನಿಕ ಸುರಕ್ಷಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಂಡು ಲಿಖೀತ ವರದಿ ನೀಡಬೇಕು. ರಾ.ಹೆ. ಕಾಮಗಾರಿಯಿಂದ ನಗರಸಭೆಯ ವ್ಯಾಪ್ತಿಯಲ್ಲಿ ಯುಜಿಡಿ ವ್ಯವಸ್ಥೆಗೆ ಕೆಲವಡೆ ತೊಂದರೆಯಾಗಿದ್ದು ಅದನ್ನು ಸರಿಪಡಿಸಿಕೊಡುವಂತೆ ಸೂಚಿಸಿದರು.
ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಮರದ ಕೊಂಬೆಗಳನ್ನು ತತ್‌ಕ್ಷಣ ತೆರವುಗೊಳಿಸಬೇಕು. ಪರ್ಕಳದಲ್ಲಿ ಹೆದ್ದಾರಿ ಕಾಮಗಾರಿಯ ತಡೆಯಾಜ್ಞೆ ತೆರವುಗೊಳಿಸುವ ಕುರಿತಂತೆ ರಾಜ್ಯದ ಅಡ್ವೊಕೇಟ್‌ ಜನರಲ್‌ ಬಳಿ ಚರ್ಚಿಸಿ, ಶೀಘ್ರದಲ್ಲಿ ಕಾಮಗಾರಿ ಯನ್ನು ಆರಂಭಿಸಲು ಅಗತ್ಯವಿರುವ ಕ್ರಮ ಕೈಗೊಳ್ಳು ವಂತೆ ತಿಳಿಸಿದರು.

Advertisement

ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು, ಕಲ್ಸಂಕ ಜಂಕ್ಷನ್‌, ಟೈಗರ್‌ ಸರ್ಕಲ್‌ ಬಳಿ ವಾಹನ ದಟ್ಟಣೆ ತಪ್ಪಿಸಿ, ಜನ ಸಾಮಾನ್ಯರ ಸಂಚಾರಕ್ಕೆ ಅನುಕೂಲವಾಗುವಂತೆ ಸೂಕ್ತ ಕಾಮಗಾರಿಗಳನ್ನು ಕೈಗೊಳ್ಳಬೇಕು. ಮಣಿಪಾಲದಿಂದ ಕಲ್ಸಂಕವರೆಗೆ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಹಾಕೇ ಮಚ್ಚೀಂದ್ರ, ತರಬೇತಿ ನಿರತ ಐಎಎಸ್‌ ಅಧಿಕಾರಿ ಯತೀಶ್‌, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮದ್‌ ಅಜ್ಮಿ, ಉಡುಪಿ ತಹಶೀಲ್ದಾರ್‌ ರವಿ ಅಂಗಡಿ, ನಗರಸಭೆ ಪೌರಾಯುಕ್ತ ರಮೇಶ್‌ ನಾಯ್ಕ, ರಾ.ಹೆ. 169ಎ ವಿಭಾಗದ ಎಂಜಿನಿಯರ್‌ ನಾಗರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next