Advertisement

Mangaluru: ಜಾತ್ರೆ, ಉತ್ಸವಗಳಲ್ಲಿ ಸಂತೆ ವ್ಯಾಪಾರ: ಹಿಂದೂಗಳಿಗಷ್ಟೇ ಅವಕಾಶ ಕಲ್ಪಿಸಲು ಆಗ್ರಹ

10:44 AM Aug 18, 2023 | Team Udayavani |

ಮಂಗಳೂರು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997-2001ರ ಸಂಖ್ಯೆ 33ರ ಪ್ರಕಾರ ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಈ ನಿಯಮದ ಪ್ರಕಾರ ಏಲಂನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ ಆಗ್ರಹಿಸಿದೆ.

Advertisement

ಸಂಘದ ಗೌರವಾಧ್ಯಕ್ಷ ಮಹೇಶ್‌ ದಾಸ್‌ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ಹಿಂದೂ ದೇವಸ್ಥಾನಗಳು ಮಾತ್ರ ಇದರಲ್ಲಿ ಅನ್ವಯ ವಾಗುತ್ತಿದೆ. ಜತೆಗೆ ವ್ಯಾಪಾರಕ್ಕೂ ಹಿಂದೂಗಳಿಗೆ ಅವಕಾಶ ಎಂಬುದು ನಿಯಮದಲ್ಲಿದೆ. ಒಂದು ವೇಳೆ ಇತರ ಧರ್ಮ ದವರು ವ್ಯಾಪಾರ ಮಾಡುವುದಾದರೆ ಮುಜರಾಯಿ ಇಲಾಖೆಯಡಿ ಮಸೀದಿ ಹಾಗೂ ಚರ್ಚ್‌ಗಳನ್ನೂ ಸೇರಿಸಿದರೆ ನಮ್ಮ ಯಾವುದೇ ತಕರಾರು ಇಲ್ಲ ಎಂದರು.

ಸಂತೆ ವ್ಯಾಪಾರದ ಬಗ್ಗೆ ಯಾವುದೇ ಆಕ್ಷೇಪವನ್ನೂ ನಾವು ಮಾಡುವುದಿಲ್ಲ ಎಂದರು. ಸಂಘದ ಕೋಶಾಧಿಕಾರಿ ಪ್ರಮೀಳಾ, ಕೃಷ್ಣಲೀಲಾ, ಪ್ರದೀಪ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ವಿವಿಧ ಜಾತ್ರೆ ಉತ್ಸವಗಳಲ್ಲಿ ಸಂತೆ ವ್ಯಾಪಾರ ಮಾಡುವವರಿಗೆ ಅಡ್ಡಿಪಡಿಸುವವರ ವಿರುದ್ಧ ಕೋಮು ನಿಗ್ರಹ ದಳ ನಿಗಾವಹಿಸಿ ಕಠಿನ ಕ್ರಮ ಜರಗಿಸಬೇಕು. ಉಭಯ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದ.ಕ.-ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಹಾಗೂ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಆಗ್ರಹಿಸಿದೆ.

ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಸುನೀಲ್‌ ಕುಮಾರ್‌ ಬಜಾಲ್‌ ಮತ್ತು ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮಿ¤ಯಾಝ್ ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಜಿಲ್ಲಾಡಳಿತ ಸರ್ವಧರ್ಮ ಕ್ಷೇತ್ರಗಳಲ್ಲಿ ವ್ಯಾಪಾರ ನಡೆಸುವವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ವ್ಯಾಪಾರಿಗಳ ಮೇಲೆ ದಾಂಧಲೆ ನಡೆಸುವವರ ವಿರುದ್ಧ ಕೋಮು ನಿಗ್ರಹ ದಳವು ಎಚ್ಚೆತ್ತುಕೊಳ್ಳಬೇಕು. ನಿರ್ಲಕ್ಷಿಸಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದರು.

Advertisement

ಸಮನ್ವಯ ಸಮಿತಿ ಅಧ್ಯಕ್ಷ ಭರತ್‌ ಜೈನ್‌, ಉಪಾಧ್ಯಕ್ಷ ಆರೀಫ್ ಉಡುಪಿ, ಪ್ರಮುಖರಾದ ಪ್ರಕಾಶ್‌ ಕ್ವಾಡ್ರಸ್‌, ಮುಹಮ್ಮದ್‌ ಶಫಿ, ಕವಿರಾಜ್‌ ಉಡುಪಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next