Advertisement

ಸಂಸ್ಕೃತವಿಲ್ಲದ ಭಾರತ ಭಾರತವೇ ಅಲ್ಲ; ಅದೊಂದು ನಿರ್ವಾತ

02:19 PM May 04, 2022 | Team Udayavani |

ಭಾರತದ ಸನಾತನ ಧರ್ಮವು ಜಗತ್ತಿನ ಇತರ ಎಲ್ಲ ಧರ್ಮಗಳಿಗಿಂತಲೂ ಪುರಾತನ ಧರ್ಮವಾಗಿದ್ದು ಇತರ ಎಲ್ಲ ಧರ್ಮಗಳೂ ಇದರಿಂದಲೇ ಉದಿಸಿರಬಹುದು ಅಥವಾ ಒಂದಲ್ಲ ಒಂದು ರೀತಿಯಲ್ಲಿ ಪ್ರೇರಿತರಾಗಿರಬಹುದು. ಪುರಾತತ್ವದ ಉತ್ಖನನಗಳು, ಲೋಹ ಮತ್ತು ಶಿಲಾಶಾಸನಗಳೂ ಇದನ್ನೇ ಪುಷ್ಟೀಕರಿಸುತ್ತವೆ. ಸನಾತನ ಧರ್ಮದ ಸಾರವನ್ನು ಜಗತ್ತಿಗೆ ಸಾರಿದ ಮೂಲಭಾಷೆ ಸಂಸ್ಕೃತ. ಸಂಸ್ಕೃತವು ಕೇವಲ ಭಾರತದ ಭಾಷೆಯೆಂದು ಮಾತ್ರ ಪರಿಗಣಿಸಲ್ಪಡದೆ ದೇವಭಾಷೆಯೆಂದೂ ಪ್ರಸಿದ್ದಿಯನ್ನು ಪಡೆದಿದೆ. ಅದರ ಲಿಪಿಯನ್ನು ದೇವನಾಗರೀ ಲಿಪಿಯೆಂದೇ ಕರೆಯುತ್ತಾರೆ. ವೇದ, ಪುರಾಣಗಳ ಮೂಲ ಗ್ರಂಥಗಳು ಸಂಸ್ಕೃತ ಭಾಷೆಯಲ್ಲೇ ಇವೆ. ವೇದಗಳಿಂದ ನಮಗೆ ಬಳುವಳಿಯಾಗಿ ಬಂದ ಶಾಸ್ತ್ರ, ಪೂಜಾ ವಿಧಾನಗಳು, ಷೋಡಶ ಸಂಸ್ಕಾರಗಳ ವಿವರಗಳು ಮೂಲ ಸಂಸ್ಕೃತ ಲಿಪಿಯಲ್ಲೇ ಇದ್ದು ಇತರ ಭಾಷೆಗಳಿಗೆ ತರ್ಜುಮೆಗೊಂಡಿವೆ.

Advertisement

ಸಂಸ್ಕೃತದಿಂದಲೇ ಪ್ರಪಂಚದ ಎಲ್ಲ ಭಾಷೆಗಳೂ ಜನಿಸಿವೆ ಎಂದರೆ ತಪ್ಪಾಗಲಾರದು. ಸಂಸ್ಕೃತ ಭಾಷೆಯ ಶಬ್ದವೇ ಇಲ್ಲದ ಅನ್ಯ ಭಾಷೆಯನ್ನು ಹುಡುಕಿ ಕೊಡುವುದೇ ಅಸಾಧ್ಯವಾದೀತು ಎನ್ನುವಷ್ಟರ ಮಟ್ಟಿಗೆ ಸಂಸ್ಕೃತದ ಪ್ರಭಾವ ಜಗತ್ತಿನ ಮೇಲಾಗಿದೆ. ಭಾರತದ ಸಂಸ್ಕೃತಿ ಬೆಳೆದದ್ದೇ ಸಂಸ್ಕೃತದಿಂದ ಎನ್ನುವುದು ಒಪ್ಪ ಲೇಬೇಕಾದ ವಿಚಾರ. ಜಗತ್ತಿನಲ್ಲೇ ಭಾರತಕ್ಕೆ ವಿಶಿಷ್ಟ ಸ್ಥಾನಮಾನವನ್ನು ಗಳಿಸಿಕೊಟ್ಟು, ದೇಶ- ವಿದೇಶಗಳಿಂದ ಜನರನ್ನು ಭಾರತಕ್ಕೆ ಆಕರ್ಷಿಸಿದ್ದ ಭಾಷೆ ಇಂದು ಸೂಕ್ತ ಸ್ಥಾನಮಾನವಿಲ್ಲದೆ ಸೊರಗುತ್ತಿ ರುವುದು ಬೇರೆಲ್ಲೂ ಅಲ್ಲ, ಅದರ ತಾಯ್ನಾಡಾದ ಭಾರತದಲ್ಲೇ.

ಹಿಂದೆ ರಾಜ ಮಹಾರಾಜರು ಭಾರತವನ್ನು ಆಳಿದ ಕಾಲದಲ್ಲಿ ಸಂಸ್ಕೃತಕ್ಕೊಂದು ವಿಶೇಷ ಸ್ಥಾನಮಾನವಿತ್ತು. ಸಂಸ್ಕೃತವನ್ನು ಕಲಿತು, ವೇದ ಅಧ್ಯಯನ ಮಾಡಿ ವೇದಗಳ ಸಾರವನ್ನು ಇತರರಿಗೆ ಅರ್ಥವಾಗುವ ಹಾಗೆ ವಿವರಿಸುವ ವಿದ್ವಾಂಸರಿಗೆ, ಪಂಡಿತರಿಗೆ ರಾಜರ ಆಸ್ಥಾನದಲ್ಲಿ ವಿಶೇಷ ಸ್ಥಾನಮಾನವಿತ್ತು. ತಕ್ಷಶಿಲಾ ಮತ್ತು ನಾಲಂದಾ ವಿಶ್ವವಿದ್ಯಾನಿಲಯಗಳು ಭಾರತದ ಪ್ರಾಚೀನ ವಿಶ್ವವಿದ್ಯಾನಿಲ ಯಗಳಾಗಿದ್ದು ಇಲ್ಲಿ ಸಂಸ್ಕೃತವನ್ನು ಕಲಿತು ಭಾರತೀಯ ಸಂಸ್ಕೃತಿಯ ಜ್ಞಾನವನ್ನು ಪಡೆಯಲು ವಿದೇಶಗಳಿಂದ ಹಲವಾರು ವಿದ್ಯಾರ್ಥಿಗಳು ಬರುತ್ತಿದ್ದರು.

ಅನಂತರದ ದಿನಗಳಲ್ಲಿ ವಿದೇಶಿಯರ ಆಕ್ರಮಣ ಮತ್ತು ಆಳ್ವಿಕೆಯ ಕಾಲದಲ್ಲಿ ಸಂಸ್ಕೃತಕ್ಕಿದ್ದ ಮಹತ್ವ ಕಡಿಮೆಯಾಗುತ್ತಾ ಬಂತು. ಉರ್ದು ಮತ್ತು ಇಂಗ್ಲಿಷ್‌ ಭಾಷೆಗಳು ಸಂಸ್ಕೃತವನ್ನು ಹಂತ ಹಂತವಾಗಿ ದಮನಿಸುತ್ತಾ ಬಂದವು. ಇದೇ ರೀತಿಯಲ್ಲಿ ಸಂಸ್ಕೃತದಿಂದಲೇ ಹುಟ್ಟಿಕೊಂಡ ಭಾರತೀಯ ಪ್ರಾಂತೀಯ ಭಾಷೆಗಳು ತಮ್ಮ ಸ್ವಂತಿಕೆಗಾಗಿ ತಮ್ಮನ್ನು ಹೆತ್ತ ಮಾತೆಯಾದ ಸಂಸ್ಕೃತವನ್ನೇ ಮಲತಾಯಿಯಂತೆ ನೋಡತೊಡಗಿದವು. ಸ್ವಾತಂತ್ರ್ಯಾನಂತರವಂತೂ ಸಂಸ್ಕೃತ ಮೂಲೆಗುಂಪಾಗಿಯೇ ಹೋಯಿ ತೆಂದರೆ ಅದು ತಪ್ಪಾಗಲಾರದು. ಪ್ರಜಾಪ್ರಭುತ್ವ, ಸರ್ವ ಸಮಾನತೆ ಎನ್ನುವ ಅಂಶಗಳು ರಾಜಕಾರಣದೊಳಗೆ ಹೊಕ್ಕು ಸಂಸ್ಕೃತ ಕಲಿತವರನ್ನು, ವೇದ, ಶಾಸ್ತ್ರ, ಪುರಾಣಗಳನ್ನು ಬಲ್ಲವರನ್ನು ತುಳಿಯತೊಡಗಿದವು. ಪುರಾತನ ಭಾರತದಲ್ಲಿ ಸಂಸ್ಕೃತವು ಯಾವುದೇ ಜಾತಿಯ ಭಾಷೆಯಾಗಿರಲಿಲ್ಲ. ಅದು ಸಾರ್ವತ್ರಿಕ ಭಾಷೆಯಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಜಾತಿ ರಾಜಕಾರಣ ಎಷ್ಟು ಬೆಳೆದಿದೆಯೆಂದರೆ ಸಂಸ್ಕೃತವೆಂದರೆ ಅದು ಒಂದು ಜಾತಿಯ ಭಾಷೆಯೆನ್ನುವಂತೆ ಬಿಂಬಿಸಿ ಸಂಸ್ಕೃತ ಕಲಿತವರು ತಮ್ಮ ವಿದ್ವತ್ತಿನ ಬಗ್ಗೆ ಹೆಮ್ಮೆಪಡುವ ಬದಲು ಅವರಿಗೆ ಮುಖಭಂಗವಾಗುವಂತೆ ಮಾಡುವ ಅದೆಷ್ಟೋ ಘಟನೆಗಳು ನಮ್ಮ ಮುಂದೆ ನಡೆಯುತ್ತಿವೆ. ರಾಜಕೀಯ ದುರುದ್ದೇಶಗಳು ಮತ್ತು ಸಂಸ್ಕೃತ ಕಲಿಯದಿರುವವರ ಕೀಳರಿಮೆಗಳು ಸೇರಿ ಸಂಸ್ಕೃತವನ್ನು ತುಳಿಯುತ್ತಿವೆ.

ಸಂಸ್ಕೃತವು ಕೇವಲ ಒಂದು ಜಾತಿ ಅಥವಾ ವರ್ಗದ ಭಾಷೆಯಲ್ಲ. ಸಂಸ್ಕೃತವು ಎಲ್ಲರೂ ಕಲಿಯಬಹುದಾದ, ಕಲಿಯಬೇಕಾದ ಸುಂದರ ವಾದ ಭಾಷೆ. ಅಮೆರಿಕವೂ ಸೇರಿದಂತೆ ಅನೇಕ ದೇಶಗಳ ಜನರು ಸಂಸ್ಕೃತವನ್ನು ಕಲಿತು ಭಾರತೀಯ ಸಂಸ್ಕೃತಿಯ ಸಾರವನ್ನು ಅರಿಯುವ ಮತ್ತು ತಮ್ಮ ಭಾಷೆಗಳಿಗೆ ಅನುವಾದಿಸುವ ಕಾರ್ಯವನ್ನು ಮಾಡುತ್ತಿ¨ªಾರೆ. ಯೂರೋಪಿನ ಚಿಕ್ಕ ರಾಷ್ಟ್ರವಾದ ಜರ್ಮನಿಯಲ್ಲೇ 14 ಸಂಸ್ಕೃತ ವಿಶ್ವವಿದ್ಯಾನಿಲಯಗಳಿವೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್‌ಗಳಲ್ಲೂ ಸಂಸ್ಕೃತ ವಿಶ್ವವಿದ್ಯಾನಿಲಯಗಳಿವೆ. ಆಧುನಿಕ ವಿಜ್ಞಾನದ ಅವಿಷ್ಕಾರಗಳಾದ ಸನ್ನೆಯ ತತ್ತÌಗಳು, ಗಣಿತದ ಸೂತ್ರಗಳು, ಖಗೋಳಶಾಸ್ತ್ರ, ವಿಮಾನ ರಚನೆ, ಅಣು, ರೇಣು, ಪರಮಾಣುಗಳ ಬಗ್ಗೆ ಪುರಾತನ ಭಾರತೀಯರ ಜ್ಞಾನವು ಸಂಸ್ಕೃತ ಲಿಪಿಯಲ್ಲಿ ಇಂದಿಗೂ ಲಭ್ಯವಿದೆ. ಆದರೆ ಅನ್ಯ ದೇಶದವರು ಸಂಸ್ಕೃತವನ್ನು ಅಧ್ಯಯನ ಮಾಡಿ, ಈ ತಣ್ತೀಗಳನ್ನು ಕಲಿತು ತಮ್ಮದೇ ಭಾಷೆಯಲ್ಲಿ ಬರೆದು ತಮ್ಮದೇ ಎಂದು ಸಾಬೀತುಪಡಿಸಿಯಾಗಿದೆ. ವಿದೇಶೀಯರು ಸಂಸ್ಕೃತದಲ್ಲಿರುವ ಯೋಗ, ಆಯುರ್ವೇದ ಗ್ರಂಥಗಳ ಅಧ್ಯಯನವನ್ನೂ ಮಾಡಿ, ತಮ್ಮ ಭಾಷೆಗೆ ತರ್ಜುಮೆ ಮಾಡಿ ಮುಂದೊಂದು ದಿನ ಅದು ತಮ್ಮದೇ ಎಂದರೂ ಆಶ್ಚರ್ಯವಿಲ್ಲ. ಆದರೆ ಇಂಥಾ ಸುಂದರ, ಶ್ರೀಮಂತ ಭಾಷೆ ಭಾರತೀಯರಾದ ನಮಗೆ ಬೇಡವಾಗಿದೆ.

Advertisement

ಭಾರತದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯಗಳ ಸಂಖ್ಯೆ ಎಷ್ಟಿದೆ? ಕೇವಲ ಬೆರಳೆಣಿಕೆಯಷ್ಟಿರಬಹುದು. ಈಗಲಾದರೂ ಭಾರತ ಸರಕಾರವು ಈ ವಿಷಯ ದಲ್ಲಿ ಎಚ್ಚೆತ್ತುಕೊಂಡು ಪ್ರತೀ ರಾಜ್ಯಕ್ಕೆ ಐದರಂತೆ ಸಂಸ್ಕೃತ ವಿಶ್ವವಿದ್ಯಾನಿಲಯಗಳನ್ನು ತೆರೆಯಬೇಕು. ಈಗಿನ ಪೀಳಿಗೆಯ ಆಸಕ್ತರಿಗಾದರೂ ಸಂಸ್ಕೃತವನ್ನು ಕಲಿತು ಭಾರತದ ಸಂಸ್ಕೃತಿಯನ್ನರಿತು ಅದನ್ನು ದೇಶ- ವಿದೇಶದವರಿಗೆ ಕಲಿಸುವಂಥ ಅವಕಾಶ ವನ್ನು ಕಲ್ಪಿಸಬೇಕು. ನಲಂದಾ ಹಾಗೂ ತಕ್ಷಶಿಲಾ ವಿಶ್ವವಿದ್ಯಾನಿಲಯಗಳನ್ನು ತಮ್ಮ ಮೂಲ ರೂಪದಲ್ಲಿ ಪುನಃ ಸೃಷ್ಟಿಸಬೇಕು. ಕರ್ನಾಟಕವೂ ಸೇರಿದಂತೆ ಕೆಲವು ಕಡೆ ಸಂಸ್ಕೃತ ವಿಶ್ವವಿದ್ಯಾನಿಲಯಗಳನ್ನು ತೆರೆಯುವ ಸರಕಾರದ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತವಾಗು ತ್ತಿರುವುದು ನಿಜಕ್ಕೂ ದುಃಖದ ಸಂಗತಿ. ಸಂಸ್ಕೃತ ವಿಶ್ವವಿದ್ಯಾನಿಲಯವು ತೆರೆಯು ವುದರಿಂದ ಕನ್ನಡಕ್ಕಾಗಲೀ ಇತರ ಭಾಷೆ ಗಳಿಗಾಗಲೀ ಯಾವುದೇ ಹಾನಿಯಾಗದು. ಸಂಸ್ಕೃತ ವನ್ನು ಉಳಿಸಿ ಬೆಳೆಸುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಇದಕ್ಕಾಗಿ ರೇಡಿಯೋ ಹಾಗೂ ದೂರದರ್ಶನವನ್ನೂ ಬಳಸಿ ಕೊಳ್ಳಬೇಕು. ಭಾರತದ ಎಲ್ಲ ಭಾಷೆಗಳ ಟಿವಿ ವಾಹಿನಿಗಳಿದ್ದರೂ ಸಂಸ್ಕೃತದ ವಾಹಿನಿಗಳು ಇಲ್ಲ. ಇಡೀ ದಿನ ಸಂಸ್ಕೃತದ ಧಾರಾವಾಹಿಗಳು, ಹಾಡು ಗಳು, ವೇದ ಪುರಾಣಗಳ ಪರಿಚಯ, ಸಂಸ್ಕೃತದಲ್ಲೇ ವಿಜ್ಞಾಪನೆಗಳು, ಆಟೋಟಗಳ ವೀಕ್ಷಕ ವಿವರಣೆ ಗಳು ಇತ್ಯಾದಿ ಪ್ರಸಾರ ಮಾಡುವ ಸಂಸ್ಕೃತ ವಾಹಿನಿಗಳು ಬಂದರೆ ಭಾಷೆ ಕಲಿಯುವುದು ಬಲು ಸುಲಭವಾಗಿ, ಸಂಸ್ಕೃತ ಭಾಷೆಯು ಜನಪ್ರಿಯವಾಗುವುದು ನಿಸ್ಸಂಶಯ.

ಸಂಸ್ಕೃತ ಭಾಷೆಯು ಬರಿಯ ಭಾಷೆಯಷ್ಟೇ ಅಲ್ಲ. ಅದು ಅಧ್ಯಾತ್ಮ ಜ್ಞಾನದ ಸಾಗರ. ವಿಜ್ಞಾನದ ಆಗರ. ಅದೊಂದು ಅಪೂರ್ಣವಾಗಿ ಅಗೆಯಲಾದ ಗಣಿ. ನಾವು ಈಗಾಗಲೇ ಪಡೆದಿರುವುದಕ್ಕಿಂತಲೂ ಇನ್ನು ಮುಂದೆ ಪಡೆಯಲಿರುವ ಜ್ಞಾನಸಂಪತ್ತು ಸಂಸ್ಕೃತದಲ್ಲಿದೆ. ಸಂಸ್ಕೃತ ಮತ್ತು ಭಾರತ ಈ ಎರಡು ಶಬ್ದಗಳು ಒಂದೇ ನಾಣ್ಯದ ಎರಡು ಮುಖಗಳು. ಭಾರತದ ರಾಷ್ಟ್ರಭಾಷೆಯಾಗುವ ನಿಜವಾದ ಅರ್ಹತೆ ಯಿರುವ ಏಕೈಕ ಭಾಷೆ ಸಂಸ್ಕೃತ.

ಸಂಸ್ಕೃತವಿಲ್ಲದ ಭಾರತ ಅದು ಭಾರತವಲ್ಲ. ಅದೊಂದು ನಿರ್ವಾತ. ಸಂಸ್ಕೃತವನ್ನು ಉಳಿಸಿ, ಬಳಸಿ, ಬೆಳೆಸಿ ಈ ನಿರ್ವಾತವನ್ನು ಹೋಗಲಾಡಿಸೋಣ. ಸಂಸ್ಕೃತವನ್ನು ಕಲಿಯಲು ಮನಸ್ಸಿಲ್ಲದವರು ಕೊನೆಯ ಪಕ್ಷ ಕಲಿಯುವ ಮನಸ್ಸಿರುವವರಿಗೆ ಅಡ್ಡಗಾಲು ಹಾಕದಿದ್ದರೆ ಸಾಕು. ಅದು ಚಿಗುರಿ ಬೆಳೆದು ಮತ್ತೆ ಹೆಮ್ಮರವಾಗುವುದರಿಲ್ಲಿ ಸಂಶಯವಿಲ್ಲ.

– ಡಾ| ಸತೀಶ ನಾಯಕ್‌, ಆಲಂಬಿ

Advertisement

Udayavani is now on Telegram. Click here to join our channel and stay updated with the latest news.

Next