ಸುರತ್ಕಲ್ : ದೇಶದಲ್ಲಿ ಸಂಸ್ಕೃತ ಭಾಷೆಯ ಚಟುವಟಿಕೆ ನಿರಂತರವಾಗಿ ನಡೆಯುತ್ತಿದ್ದು, ಇದು ಜನ ಮಾನಸಕ್ಕೆ ಮುಟ್ಟುವಲ್ಲಿ ಹಿಂದುಳಿದಿದೆ. ಇದಕ್ಕಾಗಿ ಸಂಸ್ಕೃತ ಭಾರತೀ ದೇಶಾದ್ಯಂತ ಸಮ್ಮೆಳನ ನಡೆಸಿ ಸಂಸ್ಕೃತವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಕೆಲಸ ಮಾಡುತ್ತಿದೆ ಎಂದು ಸಂಸ್ಕೃತ ಭಾರತೀ ಇದರ ಅಖಿಲ ಭಾರತ ಪ್ರಚಾರ ಪ್ರಮುಖ್ ಸತ್ಯನಾರಾಯಣ ಹೇಳಿದರು.
ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ವತಿಯಿಂದ ಸಂಸ್ಕೃತ ಭಾರತೀ ಸಹ ಯೋಗದಲ್ಲಿ ನಡೆದ ಸಂಸ್ಕೃತ ಸಿಂಧುಃ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಇಂದು ಸಂಸ್ಕೃತ ವಿದೇಶದಲ್ಲಿ ಬಹು ಬೇಡಿಕೆಯ ಭಾಷೆಯಾಗಿದೆ.
ಭಾರತದಲ್ಲಿ ಸಂಸ್ಕೃತ ಕುಂಠಿತವಾಗದಂತೆ ನಾವೆಲ್ಲ ತಡೆಯಬೇಕಾಗಿದೆ ಎಂದರು. ಇಂದು ವಿದ್ಯಾರ್ಥಿಗಳು ಸಂಸ್ಕೃತದತ್ತ ಒಲವು ತೋರುವ ಲಕ್ಷಣ ಕಂಡು ಬರುತ್ತಿದೆ. ಸಮೀಪದ ಎಡ ಪಕ್ಷಗಳ ಅ ಧಿಕಾರದಲ್ಲಿರುವ ಕೇರಳ ರಾಜ್ಯವೊಂದರಲ್ಲೇ ಐನೂರು ಸಂಸ್ಕೃತ ಶಿಕ್ಷಕರ ನೇಮಕಕ್ಕೆ ಸರಕಾರ ಒಲವು ತೋರಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಸಂಸ್ಕೃತದ ಉಳಿವಿಗೆ ಸಮ್ಮೇಳನ ಪೂರಕ
ಕಟೀಲು ಶ್ರೀ ಕ್ಷೇತ್ರದ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಸಂಸ್ಕೃತ ಉಳಿಸಲು ಮತ್ತು ಭವಿಷ್ಯದ ಪೀಳಿಗೆಗೆ ಆಸಕ್ತಿದಾಯಕ ವಿಷಯವನ್ನಾಗಿ ಪರಿಚಯಿಸಲು ಈ ಸಮ್ಮೇಳನ ಪೂರಕ ವಾತಾವರಣ ಸೃಷ್ಟಿಸಲು ದೃಢ ನಿರ್ಧಾರ ಕೈಗೊಳ್ಳಬೇಕು ಎಂದರು.
ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಐ. ರಮಾನಂದ ಭಟ್ ಸಮ್ಮೇಳನವನ್ನು ಉದ್ಘಾಟಿಸಿದರು. ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್ ಇದರ ಅಧ್ಯಕ್ಷ ಜನಾರ್ದನ ಇಡ್ಯಾ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್. ವಾಸುದೇವ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್ .ಐ.ಟಿ.ಕೆ. ಸುರತ್ಕಲ್ ಇದರ ಪ್ರೊ| ಅಶ್ವಿನಿ ಚತುರ್ವೇದಿ, ರಾಜ್ಯ ಕಸಪಾ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಗೋವಿಂದದಾಸ ಪದವಿ ಕಾಲೇಜು ಪ್ರಾಂಶುಪಾಲ ಡಾ| ಮುರಳೀಧರ ರಾವ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ., ಹಿಂದೂ ವಿದ್ಯಾದಾಯಿನಿ ಸಂಘದ ಪದಾಧಿಕಾರಿಗಳು, ವಿವಿಧ ವಿಭಾಗದ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಪೈಕ ವೆಂಕಟರಮಣ ಸ್ವಾಗತಿಸಿದರು. ದಿವಸ್ಪತಿ ಕಾರ್ಯಕ್ರಮ ನಿರೂಪಿಸಿದರು. ಸತ್ಯನಾರಾಯಣ ವಂದಿಸಿದರು.
ಸಂಸ್ಕೃತ ಕೊಡುಗೆ ಅನನ್ಯ
ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ, ಸಂಸ್ಕೃತಿ ಮತ್ತು ಭಾಷೆಗೆ ಪರಸ್ಪರ ಸಂಬಂಧವಿದೆ. ಪರಿಸರ ಸಹ್ಯ ವಾತಾವರಣ ಸೃಷ್ಟಿಸಲು ಹಿಂದಿನ ಕಾಲದಲ್ಲಿ ಸಂಸ್ಕೃತ ಬಹುದೊಡ್ಡ ಕೊಡುಗೆ ನೀಡಿದೆ. ಇಂದಿನ ಮಾಲಿನ್ಯಕಾರಕ ಜಗತ್ತಿನ ಬದಲಾವಣೆಗೆ ಸಂಸ್ಕೃತ ಶಕ್ತಿ ತುಂಬಬಲ್ಲದು. ಆಂಗ್ಲ ಮಾಧ್ಯಮ ಹೊಟ್ಟೆಪಾಡಿಗೆ ಉದ್ಯೋಗ ಪಡೆದುಕೊಳ್ಳಲು ಸಹಾಯವಾಗಬಹುದು ಎಂಬ ಕಾರಣದಿಂದ ಇಂದು ಅದರತ್ತ ಮುಖಮಾಡಲಾಗಿದೆ. ಸಂಸ್ಕೃತವನ್ನು ಅವಗಣನೆ ಮಾಡುವ ಬದಲು ನಿತ್ಯ ಕಾಯಕದಲ್ಲಿ ಬಳಸಿಕೊಳ್ಳುವ ಕಾರ್ಯವಾಗಬೇಕು ಎಂದರು.