ಮೈಸೂರು: ಭಾರತೀಯ ಪರಂಪರೆಯಲ್ಲಿ ಸಂಸ್ಕೃತಕ್ಕೆ ತನ್ನದೇ ಸ್ಥಾನವಿದ್ದು, ಜಗತ್ತಿನ ಎಲ್ಲಾ ಮಾನವ ಕುಲವನ್ನು ಸಂಸ್ಕೃತ ಭಾಷೆ ಆಕರ್ಷಿಸಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಮುಖ್ಯಸ್ಥರಾದ ಸೋಮೇಶ್ವರನಾಥ ಸ್ವಾಮೀಜಿ ಬಣ್ಣಿಸಿದರು.
ರಾಮಕೃಷ್ಣನಗರದಲ್ಲಿರುವ ವಿಶ್ವಮಾನವ ವಿದ್ಯಾನಿಕೇತನ ಟ್ರಸ್ಟ್ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ವಿಶ್ವಮಾನವ ವೇದ ಮತ್ತು ಸಂಸ್ಕೃತ ಪಾಠಶಾಲಾ ಹಾಗೂ ವಿಶ್ವಮಾನವ ಯೋಗ ಅಧ್ಯಯನ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತಿನ ಎಲ್ಲಾ ಮಾನವ ಕುಲವನ್ನು ಸಂಸ್ಕೃತ ಭಾಷೆ ಆಕರ್ಷಿಸಿದ್ದು,
ಇದಕ್ಕಾಗಿ ಸಂಸ್ಕೃತವನ್ನು ದೇವಭಾಷೆಯೆಂದು ಕರೆಯಲಾಗಿದೆ. ಹೀಗಾಗಿ ಭಾರತೀಯ ಪರಂಪರೆಯಲ್ಲಿ ಸಂಸ್ಕೃತಕ್ಕೆ ತನ್ನದೇ ಆದ ಸ್ಥಾನವಿದ್ದು, ವೇದ, ಪುರಾಣಗಳು, ರಾಮಾಯಣ, ಮಹಾಭಾರತ ಸೇರಿದಂತೆ ಹಲವು ಮಹಾಕಾವ್ಯಗಳನ್ನು ನಮ್ಮ ಋಷಿಮುನಿಗಳು ಸಂಸ್ಕೃತ ಭಾಷೆಯಲ್ಲಿ ಕಾಣಿಕೆಯಾಗಿ ನೀಡಿದ್ದಾರೆ ಎಂದರು.
ಸಂಸ್ಕೃತದಂತಹ ದೇವಭಾಷೆಯ ಉಗಮಕ್ಕೆ ಆರಂಭದಲ್ಲಿ ಸಾಕಷ್ಟು ಸಾಹಸ ಕಾರ್ಯಗಳು ನಡೆದರೂ, ಆರಂಭದಲ್ಲಿ ಹೆಚ್ಚು ಪ್ರಜ್ವಲಿಸಲಿಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಜನಸಾಮಾನ್ಯರು, ಗ್ರಾಮೀಣ ಜನರನ್ನು ತಲುಪುವ ಮಟ್ಟಕ್ಕೆ ಸಂಸ್ಕೃತ ಬೆಳೆದಿದ್ದು, ಇದಕ್ಕೆ ಬಾಲಗಂಗಾಧರನಾಥ ಸ್ವಾಮೀಜಿಯವರ ಪರಿಶ್ರಮವೂ ಕಾರಣವಾಗಿದೆ.
ಸಂಸ್ಕೃತ ಭಾಷೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯವಿರಲಿಲ್ಲ. ಆದರೆ ಇಂದು ಸಂಸ್ಕೃತಕ್ಕೆ ಪ್ರತ್ಯೇಕ ವಿವಿ ಸ್ಥಾಪನೆಯಾಗಿದ್ದು, ಮೈಸೂರಿನವರೇ ಇದರ ಕುಲಪತಿಯಾಗಿದ್ದಾರೆ. ಅದರಂತೆ ವಿಶ್ವಮಾನವ ವಿದ್ಯಾನಿಕೇತನ ಟ್ರಸ್ಟ್‌ನಿಂದ ಆರಂಭಿಸಿರುವ ಈ ಶಾಖೆಯನ್ನು ಅವರೇ ಉದ್ಘಾಟಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಇದಕ್ಕೂ ಮುನ್ನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಪದ್ಮಾಶೇಖರ್ ವಿಶ್ವಮಾನವ ವಿದ್ಯಾನಿಕೇತನ ಟ್ರಸ್ಟ್‌ನಿಂದ ಆರಂಭಿಸಿರುವ ವಿಶ್ವಮಾನವ ವೇದ ಮತ್ತು ಸಂಸ್ಕೃತ ಪಾಠಶಾಲಾ ಹಾಗೂ ವಿಶ್ವಮಾನವ ಯೋಗ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದರು.
ಸಮಾರಂಭದ ಅಂಗವಾಗಿ ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಶ್ರೀನಿವಾಸ್‌ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ವಿಶ್ರಾಂತ ಪ್ರಾಧ್ಯಾಪಕ ಡಾ. ಸೋಮಶೇಖರ್‌ಗೌಡ, ಬಿ.ಕೆ. ಚಂದ್ರಶೇಖರ್‌ಗೌಡ, ವಿಜಯಲಕ್ಷ್ಮೀ, ಆರ್. ಗೋವಿಂದಯ್ಯ ಹಾಜರಿದ್ದರು.