ಬಾಗಲಕೋಟೆ: ದೇಶ ವಿದೇಶಗಳಲ್ಲಿ ಸಂಸ್ಕೃತ ಭಾಷೆ ಹೆಚ್ಚು ಪ್ರಖರವಾಗಿ ಬೆಳೆಯುತ್ತಿದೆ. ಭಾರತೀಯರ ಕೊಡುಗೆಯಾದ ಸಂಸ್ಕೃತ ಭಾಷೆಯನ್ನು ನಾವೆಲ್ಲ ಕಲಿಯುವುದರ ಮೂಲಕ ಸಂಸ್ಕೃತವನ್ನು ಉಳಿಸಿ ಬೆಳೆಸಬೇಕು ಎಂದು ಕೋಟೆಕಲ್ಲ ಶಾರದಾ ಸಂಸ್ಕೃತ ಪಾಠ ಶಾಲೆಯ ಶಿಕ್ಷಕಿ ಎಂ.ಎಸ್.ತಾಂಡೂರ ಹೇಳಿದರು.
ತಾಲೂಕಿನ ಬೇವಿನಮಟ್ಟಿಯ ರಂಗನಾಥ ಅಂತರಾಷ್ಟ್ರೀಯ ಶಾಲೆಯಲ್ಲಿ ರವಿವಾರ ನಡೆದ ಸಂಸ್ಕೃತ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಾವು ಮನೆಯಲ್ಲಿ ದಿನಂಪ್ರತಿ ಬಳಸುವ ಬಹುತೇಕ ಶಬ್ದಗಳು ಸಂಸ್ಕೃತದಲ್ಲಿವೆ. ವಿಶ್ವದ 80 ದೇಶಗಳ 450 ವಿವಿಗಳಲ್ಲಿ ಸಂಸ್ಕೃತವನ್ನು ಪ್ರಮುಖ ಭಾಷೆಯಾಗಿ ಕಲಿಸಲಾಗುತ್ತಿದೆ. ಸಂಸ್ಕೃತ ಹಾಗೂ ಸಂಸ್ಕೃತಿ ಭಾರತದ ಪ್ರತಿಷ್ಠೆ. ಸಂಸ್ಕೃತ ಸಾಮಾನ್ಯರ ಭಾಷೆಯಾಗಿ ಬೆಳೆಯಬೇಕು. ಅದಕ್ಕಾಗಿ ಮಕ್ಕಳಿಗೆ ಸಂಸ್ಕೃತ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ವಿಕ್ರಮ್ ನಾರ್ವೇಕರ ಮಾತನಾಡಿ, ಸಂಸ್ಕೃತ ಕಲಿಕೆಯಿಂದ ಸಾಕಷ್ಟು ಲಾಭಗಳಿವೆ. ಸಂಸ್ಕೃತ ಕಲಿಕೆಯಿಂದ ಮಕ್ಕಳಲ್ಲಿ ವಿಶೇಷ ಚೈತನ್ಯ ಮೂಡುತ್ತದೆ. ಸಂಸ್ಕೃತ ಕಲಿಕೆಗೆ ವಿದ್ಯಾರ್ತೀಗಳು ಹೆಚ್ಚು ಆಸಕ್ತಿ ವಹಿಸಬೇಕೆಂದು ಹೇಳಿದರು.
ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ, ನಜೀರ್‌ಸಾಬ್ ವಲ್ಲೆಪ್ಪನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಂಸ್ಕೃತ ಭಾಷೆಯಲ್ಲಿ ನಾಟಕ, ಪಥ ಸಂಚಲನ, ಗೀತ ಗಾಯನ, ಸಂಸ್ಕೃತ ಶ್ಲೋಕ ಪಠಣ ನಡೆದು ನೋಡುಗರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಸಂಸ್ಕೃತ ಶಿಕ್ಷಕಿ ಎಂ.ಎಸ್.ತಾಂಡೂರ, ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ ಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಉಪಪ್ರಾಚಾರ್ಯ ವಸುಧಾ ನಾರ್ವೇಕರ, ಸಂಗಮೇಶ ಹತ್ತರಕಿಹಾಳ, ಅಮರೇಶ ಹುಣಸಗಿ, ಕೃಷ್ಣಾ ಝಿಂಗಾಡೆ, ಪ್ರಕಾಶ ವೆಂಕಣ್ಣವರ, ತಿಪ್ಪಣ್ಣ ಮೇಲಿನಮನಿ, ಸುಧಾಕರ ಕಬ್ಬೂರ, ಚಂದ್ರಕಾಂತ ಆಲೂರು, ವಿಜಯಾ ಶೀಲವಂತ, ಸಂಧ್ಯಾ ಮೇಟಿ, ಸವಿತಾ ಪಾಟೀಲ, ಶಿಲ್ಪಾ ಸಕರಡ್ಡಿ, ಇಂಧುಮತಿ ಜಾಧವ ಪಾಲ್ಗೊಂಡಿದ್ದರು.