Advertisement

ಸಂಸ್ಕಾರ ಸಾಹಿತ್ಯದ ‘ಸಿರಿತುಪ್ಪೆ’ ಬನ್ನಂಜೆ ಬಾಬು ಅಮೀನ್

10:34 PM Dec 15, 2023 | Team Udayavani |

ಬದುಕಿನ ಬಹುಭಾಗವನ್ನು ಬಹುಸಂಸ್ಕೃತಿಯು ಅವರಿಸಿಕೊಂಡಿರುವ ಕಾಲಘಟ್ಟದಲ್ಲಿ ಮೌಖಿಕ ಪರಂಪರೆಯ ನೆಲ ಮೂಲದ ಕಲೆ ಸಂಸ್ಕೃತಿಯನ್ನು ತನ್ನ ಸಾಹಿತ್ಯ ಮತ್ತು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿರುವ ಅನನ್ಯ ಗುಣಸ್ಥಿತಿಯಿಂದ ನಮ್ಮ ನೆಲೆಯಲ್ಲಿ ನಲ್ಮೆಯಿಂದ ಸ್ವೀಕೃತರಾದ ಬನ್ನಂಜೆ ಬಾಬು ಅಮೀನ್‌ರವರಿಗೆ ಸ್ವಯಂ ಸ್ಪೂರ್ತಿಯ ಬಾಳಯಾನದ ಎಂಬತ್ತು ಸಂವತ್ಸರಗಳು ಸಂಪನ್ನಗೊಂಡಿದೆ‌. ಹಿರಿಯ ಪ್ರಾಜ್ಞರಾಗಿ, ಜಾನಪದ ಜಂಗಮನಾಗಿ, ಸಾಹಿತ್ಯಿಕವಾಗಿ ಸಮೃದ್ಧ ಕೃಷಿಯನ್ನು ಮಾಡಿದ್ದಾರೆ. ಭವಿಷ್ಯತ್ತಿಗೆ ಯೋಗ್ಯವೆನಿಸಬಹುದಾದ ಫಲವತ್ತಾದ ಫಸಲಿನ ‘ನುಡಿ ಸಿರಿ’ ಎನ್ನುವಷ್ಟು ಸ್ವೀಕರಾರ್ಹವಾಗಿವೆ ಶ್ರೀಯುತರ ಬರಹಗಳು.

Advertisement

ಜನಪದ ಬದುಕು, ಜಾನಪದ ಸಾಹಿತ್ಯ, ಗರೋಡಿ ಅಧ್ಯಯನ,ದೈವಾರಾಧನೆಯ ಕುರಿತು ತಳಮಟ್ಟದ ಚಿಂತನೆ ನಡೆಸಿದ ವಾಸ್ತವವಾದಿ ವಿದ್ವಾಂಸರು. ಯಕ್ಷಗಾನ, ಶನಿಕಥೆ, ತಾಳಮದ್ದಲೆಯಂತಹ ಸಾಂಸ್ಕೃತಿಕ ಸಂಗತಿಗಳ ಬಹುರೂಪಿ ಸಂಗಾತಿಯೂ ಹೌದು. ಸದಭಿರುಚಿಯ ಸೇವಾ ಚಟುವಟಿಕೆಗಳಿಗೆ ಸಂಘಟನಾತ್ಮಕ ಸಂಚಲನ ನೀಡಿದ ನೇತಾರನಾಗಿಯೂ ಚಿರಪರಿಚಿತರು.

ಸೂರ್ಯನ ಬೆಳಕಿಗೆ ಬೇರೆ ದೀವಟಿಗೆ ಬೇಕೆ…? ತನ್ನದೇ ವಿವೇಚನಾ ವ್ಯಾಪ್ತಿಯಲ್ಲಿ ,ನಿರ್ಧಾರಕ ಸಾಮರ್ಥ್ಯದಲ್ಲಿ,ಜ್ಞಾನಾನುಭವದ ಆಧಾರದಲ್ಲಿ ಜಾನಪದ ಅವತರಣಿಕೆಯಲ್ಲಿ ಅಪರೂಪದ ,ಅನುರೂಪದ ಹೊತ್ತಗೆಗಳನ್ನು ಹೊರತಂದವರು ಇವರು.ನೆಲೆ ನಿಂತ ನೆಲವನ್ನು ಒಳ್ಳೆಯ ಸಂಸ್ಕಾರದಿಂದ ಬೆಳಗಬೇಕೆನ್ನುವ ಆಶಯಗಳು ಇವರ ಕೃತಿಯಲ್ಲಿ ಅಚ್ಚುಗೊಂಡಿವೆ. ಇದೊಂದು ‘ಪರ್ವಕೃತಿ’ ಎಂದು ಪ್ರೊ. ಅಮೃತ ಸೋಮೇಶ್ವರ ನುಡಿದಿರುವ, ಪ್ರೊ ಮೋಹನ್ ಕೋಟ್ಯಾನ್ ಜೊತೆಗೂಡಿ ಬನ್ನಂಜೆ ಬಾಬು ಅಮೀನ್ ಬರೆದಿರುವ ‘ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ’ ಮಹತ್ವಪೂರ್ಣದ್ದಾದ ಸಂಗತಿಗಳನ್ನು ದಾಖಲಿಸಿದ ಮೇರು ಕೃತಿಯಾಗಿದೆ. ಪೂ- ಪೊದ್ದೊಲ್,ಮಾನೆಚ್ಚಿ,ದೈವಗಳ ಮಡಿಲಲ್ಲಿ,ಉಗುರಿಗೆ ಮುಡಿಯಕ್ಕಿ,ನುಡಿಕಟ್ಟ್, ತುಳುನಾಡ ದೈವಗಳು-ಸಾಂಸ್ಕೃತಿಕ ವಿಶ್ಲೇಷಣೆ, ತುಳುವೆರೆ ಮದಿಮೆ,ಗರೋಡಿ ಒಂದು ಚಿಂತನೆ,ದೈವನೆಲೆ,ಆಟಿ-ಸೋಣ,ಸಮಗ್ರ ಕೋಟಿ ಚೆನ್ನಯ, ಸಂಸ್ಕೃತಿ ಸಂಪನ್ನೆ ಸಿರಿ..ಈ ರೀತಿಯ ಇಪ್ಪತ್ತೊಂದು ಕೃತಿಗಳು
ಸ್ವಯಂ ಅರಿವು ಮತ್ತು ಶೋಧ ಪ್ರಜ್ಞೆಯ ಗುಣ ವಿಶೇಷತೆಗಳನ್ನು ಸಾಬೀತುಪಡಿಸಿದೆ.

ಅವರ ಜೀವನದ ಜೀವಂತಿಕೆಯೆ ಉತ್ಸಾಹ,ಕ್ರಿಯಾಶೀಲತೆ ಮತ್ತು ಸ್ಪಂದನೆ.ಮನೋವಿಕಾಸದ ಅಂತಃಸತ್ವ ಅವರಲ್ಲಿ ಅನವರತ ಅಡಗಿದೆ. ಆದ್ದರಿಂದಲೊ ಏನೋ ಸುಮ್ಮನಿದ್ದದ್ದೆ ಕಡಿಮೆ, ಸುದ್ದಿಯಲ್ಲಿದ್ದದ್ದೆ ಹೆಚ್ಚು. ತಾನು ಹಂಬಲಿಸುವ ವರ್ತಮಾನದ ಬದುಕಿಗೆ ಅವರು ಬಾದ್ಯರಾಗಿದ್ದಾರೆ. ಆರ್ಥಿಕ ಲಾಭ, ಅಧಿಕಾರ, ಅಂತಸ್ತು ಇಂತವುಗಳಿಂದ ಅಂತರ ಕಾಯ್ದುಕೊಳ್ಳುವ ತನ್ನ ನಿಲುವುಗಳಿಂದ ಏನನ್ನು ಕಳೆದುಕೊಂಡಿದ್ದಾರೋ ಅದಕ್ಕಿಂತ ಶ್ರೇಷ್ಠವಾದ ಗೌರವ, ಜನ ಮನ್ನಣೆಯನ್ನು ಪಡೆದಿದ್ದಾರೆ. ಇದಲ್ಲವೇ ಸಾಹಿತಿಗೊಲಿಯಬೇಕಾದ ಶ್ರೇಷ್ಠ ಪ್ರಶಸ್ತಿ? ಅದಾಗಲೇ ಒಲಿದಾಗಿದೆ.

ಸಾಮಾನ್ಯವಾಗಿ ಹುಟ್ಟಿ ಅಸಾಮಾನ್ಯವಾಗಿ ಬೆಳೆಯುವುದೇ ಒಂದು ಸಾಧನೆ ಎನ್ನಬಹುದಾದರೆ ಅದಕ್ಕೆ ಅನ್ವಯಗೊಳಿಸಬಹುದಾದ ಎಲ್ಲಾ ಅರ್ಹತೆಗಳು ಬನ್ನಂಜೆ ಬಾಬು ಅಮೀನ್‌ರವರಲ್ಲಿ ಇದೆ.ಸೃಜನಶೀಲ, ರಚನಾತ್ಮಕ ಮನಸ್ಸಿನ ಈ ಜೀವಕ್ಕೆ ಛಲ ಮತ್ತು ಆತ್ಮವಿಶ್ವಾಸವು ದೈವದತ್ತವಾದುದು.ತನ್ನ ನಡೆ ನುಡಿ, ಸಾಹಿತ್ಯಗಳಲ್ಲಿ ಇತರರನ್ನು ಅನುಕರಿಸುವ ಜಾಯಮಾನವೇ ಬಾಬಣ್ಣನವರಿಗಿಲ್ಲ. ಅವರೇನಿದ್ದರೂ ತುಳು ಜಾನಪದ ಲೋಕದ ನೈಜ, ಮೂಲ ಉತ್ಪನ್ನ.ಬೆಳವಣಿಗೆಗೆ ಬುಡವಾಗಿ, ಒಗ್ಗಟ್ಟಿಗೆ ಬಲವಾಗಿ ಮುನ್ನುಡಿ, ಮುಂದಡಿಯಿಡುವ ಕಾರಣಕ್ಕಾಗಿ ಅತ್ಯಾಪ್ತ ಪ್ರೀತಿಯಲ್ಲಿ ಬಾಬಜ್ಜ, ಬಾಬು ಮಾಮು, ಬಾಬಣ್ಣ… ಎಂದೆಲ್ಲಾ ಸ್ವೀಕೃತರಾಗಿದ್ದಾರೆ.

Advertisement

ಒಪ್ಪಿಸಿದ ಒಪ್ಪ ಬಂಗಾರವಾಗಿರದೆ ಅಪ್ಪಟ ಅಪರಂಜಿಯಾಗಿರುವ ಬನ್ನಂಜೆಯವರಿಗೆ ಬದ್ದತೆಯ ಬಂಗಾರದೊಂದಿಗೆ ಅವಿನಾಭಾವದ ಋಣಾನುಬಂಧವಿದೆ. ಈ ಅನುಬಂಧ ಅನುಕಾಲ ಅನುರಣಿಸಬೇಕೆನ್ನುವ ಆಶಯ ನಮ್ಮದು. ತುಳುನಾಡಿನ ಮಣ್ಣಿನ ಮಗ ಬನ್ನಂಜೆ ಬಾಬು ಅಮೀನ್‌ರವರಂತಹ ಪುಣ್ಯಾತ್ಮರೊಡನೆ ಸಖ್ಯವಿರುವುದು ಶ್ರೇಷ್ಠ ಸುಖವೇ ಸರಿ.
ಬನ್ನಂಜೆಯವರ ಅಮೂಲ್ಯ ಅಂಕಿತಗಳನ್ನು ನಮೃತೆಯಿಂದ ನೆನೆಯುವ ಸಂಭ್ರಮ ‘ಸಿರಿತುಪ್ಪೆ’ ನವಿರು ಘಳಿಗೆಯಲ್ಲಿ ನೆರವೇರಲು ಸಜ್ಜುಗೊಂಡಿದೆ.

ಒಳಿತಿನ ಸತ್ಕಾರ್ಯಗಳು ಸೂರ್ಯಚಂದ್ರರ ಕಾಲದವರೆಗೆ ಉಳಿಯಲಿ, ಬನ್ನಂಜೆ ಬಾಬು ಅಮೀನ್‌ರವರು ಬಯಸಿದ ಸರ್ವಶ್ರೇಷ್ಠ ಬಾಳ್ವೆಯನ್ನು ಭಗವಂತ ಪ್ರಾಪ್ತಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ, ಇನ್ನೂ ಏನೋ ಹೇಳಬೇಕೆಂದಿದೆ, ಆಡದೆ ಉಳಿದಿಹ ಮಾತು ನೂರಿದೆ…

ದಯಾನಂದ್ ಕರ್ಕೇರ ಉಗ್ಗೆಲ್‌ಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next