Advertisement
ಪ್ರತಿಯೊಂದು ರಾಶಿಯಲ್ಲಿ ಸಂಕ್ರಮಣ ನಡೆದರೂ ಕೂಡ, ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸಂಕ್ರಮಣಗೈಯುವ ಘಳಿಗೆ ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ತರವಾದುದು. ಅಂದಿನಿಂದಲೇ ಉತ್ತರಾಯಣ ಆರಂಭ. ಸೌರಮಾನವೂ ಕೂಡ. ಅಂದರೆ ದೇವತೆಗಳ ಪರ್ವ. ಈ ಮಕರ ಸಂಕ್ರಾಂತಿಯು ದೇಶದ ಹಲವು ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟಿದೆ. ಜೊತೆಗೆ, ಆಚರಣೆಯಲ್ಲೂ ಭಿನ್ನತೆಗಳನ್ನು ಕಾಣಬಹುದು. ಆದರೆ, ವಿಶೇಷವಾಗಿ ಐದು ವರ್ಷದ ಒಳಗಿನ ಮಕ್ಕಳಿಗೆ, ಸಂಕ್ರಾಂತಿಯಂದು ಎಳ್ಳು ಎರೆಯುವ ಆಚರಣೆ ಇದೆ. ಇದನ್ನು ಕೆಲವೆಡೆ ಎಳ್ಳು ಎರೆಯುವುದು ಅಂದರೆ, ಇನ್ನೂ ಕೆಲವೆಡೆ ಕರಿ ಎರೆಯುವುದು ಅಥವಾ ಹಣ್ಣೆರೆಯುವುದು ಎಂದೂ ಕರೆಯುತ್ತಾರೆ.
ಸಂಕ್ರಾಂತಿಯಂದು ಪುಣ್ಯತೀರ್ಥಗಳಲ್ಲಿ ಅಂದರೆ ನದಿ ಸಂಗಮ, ಸಮುದ್ರ ಮುಂತಾದ ಕಡೆಗಳಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿಯಿದೆ. ಶರೀರದ ಕೊಳೆಯನ್ನು ನಿವಾರಿಸುವ ಜೊತೆಗೆ ಮಾನಸಿಕ ಕೊಳೆಯನ್ನು ನಾಶ ಮಾಡುವುದು ಸ್ನಾನದ ಉದ್ದೇಶ. ಸ್ನಾನದಷ್ಟೇ ಪ್ರಾಮುಖ್ಯತೆ ಎಳ್ಳಿಗೂ ಇದೆ. ಎಳ್ಳಿನ ನೀರಿನಿಂದ ಸ್ನಾನ ಮಾಡುತ್ತಾರೆ. ಪೀಡಾ ಪರಿಹಾರಕ್ಕಾಗಿ ಎಳ್ಳು, ಬೆಲ್ಲ, ಕೊಬ್ಬರಿ ಹಂಚುತ್ತಾರೆ. ಅಂತೆಯೇ, ಮಕ್ಕಳ ಮೇಲೆ ಎಳ್ಳನ್ನು ಸುರಿಯುವುದರಿಂದ ಬಾಲಾರಿಷ್ಟ ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಆಚರಣೆ ಹೇಗೆ?
ಸಂಕ್ರಾಂತಿ ದಿನ ಮಗುವಿಗೆ ಕಪ್ಪು ಬಣ್ಣದ ಹೊಸ ಬಟ್ಟೆಯನ್ನು ತೊಡಿಸಿರುತ್ತಾರೆ. ಜೊತೆಗೆ ತಾಯಿಯೂ ಕೂಡ ಕಪ್ಪು ಬಣ್ಣದ ಸೀರೆ ಉಡುವ ವಾಡಿಕೆ. ಬೇರೆ ಮಂಗಳಕಾರ್ಯದಲ್ಲಿ ಕಪ್ಪು ಬಣ್ಣಕ್ಕೆ ನಿಷೇಧವಿದ್ದರೂ, ಈ ಆಚರಣೆಯಲ್ಲಿ ಕಪ್ಪು ಬಣ್ಣಕ್ಕೆ ವಿಶೇಷ ಪ್ರಾಶಸ್ತ್ಯ. ಬಹುಶಃ ವೈಜ್ಞಾನಿಕವಾಗಿ ಕಪ್ಪು ಬಣ್ಣ ಶಾಖ ಹೀರುವುದರಿಂದ ಇದಕ್ಕೆ ಹಿರಿಯರು ಪ್ರಾಮುಖ್ಯತೆ ನೀಡಿರಬಹುದು.
Related Articles
Advertisement
ಈ ಆಚರಣೆಯಲ್ಲಿ ಎಳ್ಳಿಗೆ ಪ್ರಮುಖ ಪ್ರಾಶಸ್ತ್ಯ ಇದ್ದರೂ ಕೂಡ; ಎಳ್ಳಿನ ಜೊತೆಗೆ ಕಡ್ಲೆಪುರಿ, ಕಾಶಿ ಬೋರ್ ಕಾಯಿ, ಹಸಿ ಬಟಾಣಿ ಕಾಯಿ, ಕಡಲೆ ಸುಲಿಗಾಯಿ, ಸಿಹಿಯಾದ ಬೆಂಡು-ಬತ್ತಾಸುಗಳನ್ನು ಸೇರಿಸಿ ಮಿಶ್ರಣ ಮಾಡಿ; ಇದನ್ನು ಮಗುವಿನ ತಲೆಯ ಮೇಲೆ ಬೆಳ್ಳಿ ಬಟ್ಟಲಿನಿಂದ ಐದು ಬಾರಿ ಎರೆಯುತ್ತಾರೆ. ಮುತ್ತು ಹವಳದ ಸಂಕೇತವಾಗಿ ಒಂದು ಮುತ್ತನ್ನೊ ಅಥವಾ ಹವಳದ ಉಂಗುರವನ್ನು ಮಿಶ್ರಣದಲ್ಲಿ ಹಾಕಿ ಎರೆಯುತ್ತಾರೆ. ಹೀಗೆ ಎರೆದ ನಂತರ ಬೀಳುವ ಸಿಹಿ ಹಾಗೂ ಇನ್ನಿತರ ಕಾಯಿಗಳನ್ನು, ಆಚರಣೆಗೆ ಬಂದ ಉಳಿದ ಮಕ್ಕಳು ಹೆಕ್ಕುವುದು ಪದ್ಧತಿ. ಬಂದ ಮಕ್ಕಳಿಗೆ ಸಿಹಿ ತಿನಿಸು ಹಾಗೂ ತಾಯಂದಿರಿಗೆ ಬಾಗಿನ ನೀಡುವುದು ವಾಡಿಕೆ.
ಈ ಆಚರಣೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಕಂಡುಬರುತ್ತದೆ. ಆಚರಣೆಯ ಹೆಸರು ಮತ್ತು ವಿಧಾನದಲ್ಲಿ ಕೊಂಚ ವ್ಯತ್ಯಾಸವಿದ್ದರೂ, ಮಕ್ಕಳ ಬಾಲಾರಿಷ್ಟ ನಿವಾರಣೆಗೆ ಎಳ್ಳು ಎರೆಯುವ ಸಂಪ್ರದಾಯ ಇನ್ನೂ ಉಳಿದಿದೆ.
-ಅನುಪಮಾ ಕೆ ಬೆಣಚಿನಮರ್ಡಿ