ಗಂಗಾವತಿ: ಮಕರ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಸೇರಿ ಸುತ್ತಲಿನ ಪ್ರವಾಸಿ ತಾಣಗಳು ಮತ್ತು ಆನೆಗೊಂದಿ, ಋಷಿಮುಖಪರ್ವತ ಪ್ರದೇಶ, ಹನುಮನಹಳ್ಳಿ, ಸಾಣಾಪೂರ ಹಾಗೂ ವಿರೂಪಾಪೂರ ಗಡ್ಡಿ, ಸಾಣಾಪೂರದ ತುಂಗಭದ್ರಾ ನದಿ ಪ್ರದೇಶ ಸಾವಿರಾರು ಪ್ರವಾಸಿ ಭಕ್ತರಿಂದ ತುಂಬಿ ತುಳುಕುತ್ತಿತ್ತು.
ಸಂಕ್ರಾಂತಿ ಪವಿತ್ರ ನದಿ ಸ್ನಾನಕ್ಕೆ ಗಂಗಾವತಿ ಸೇರಿ ಸುತ್ತಲಿನ ಜಿಲ್ಲೆಗಳ ಜನರು ಕುಟುಂಬ ಸಮೇತರಾಗಿ ಆಗಮಿಸಿ ನದಿಯಲ್ಲಿ ಮಿಂದು ಮರಳಿನ ಪೂಜೆ ಮಾಡಿ ಕಿಷ್ಕಿಂದಾ ಅಂಜನಾದ್ರಿ, ಪಂಪಾಸರೋವರ, ಚಿಂತಾಮಣಿ, ನವವೃಂದಾವನ ಗಡ್ಡಿ, ಆನೆಗೊಂದಿ ವಾಲೀಕಿಲ್ಲಾ ಆದಿಶಕ್ತಿ ದೇಗುಲ ಮತ್ತು ಋಷಿಮುಖ ಪರ್ವತ ಪ್ರದೇಶದಲ್ಲಿರುವ ಸುಗ್ರೀವಾ ಆಂಜನೇಯ ದೇವಾಲಯ ದರ್ಶನ ಪಡೆದರು. ಅಂಜನಾದ್ರಿಯಲ್ಲಿ ಗ್ರಾಮೀಣ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸಪಟ್ಟರು.
ತುಂಗಭದ್ರಾ ನದಿ ಪಾತ್ರ ಹಾಗೂ ಸಾಣಾಪೂರ ಲೇಕ್(ಕೆರೆ)ಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಂಜನಾದ್ರಿ ಬೆಟ್ಟಕ್ಕೆ ರಸ್ತೆ ವರೆಗೂ ಭಕ್ತರು ಕ್ಯೂನಲ್ಲಿ ನಿಂತಿದ್ದರು. ಬಲಗಡೆಯಿಂದ ಬೆಟ್ಟ ಹತ್ತಿ ಎಡಗಡೆಯಿಂದ ಕೆಳಗೆ ಇಳಿಯುವ ವ್ಯವಸ್ಥೆಯನ್ನು ಗ್ರಾಮೀಣ ಪೊಲೀಸರು ಮಾಡಿದರು. ಅಂಜನಾದ್ರಿಯ ದರ್ಶನಕ್ಕೆ ಮೂರು ತಾಸಿಗೂ ಅಧಿಕ ಸಮಯ ತೆಗೆದುಕೊಂಡಿತು.
ನದಿ ಸ್ನಾನಕ್ಕೆ ಆಗಮಿಸಿದ ಪ್ರವಾಸಿಗರ ವಾಹನಗಳಿಂದಾಗಿ ಕಡೆಬಾಗಿಲು ಪುನೀತ್ ರಾಜಕುಮಾರ ವೃತ್ತದಿಂದ ಆನೆಗೊಂದಿ, ಅಂಜನಾದ್ರಿ ಬೆಟ್ಟ, ಹನುಮನಹಳ್ಳಿ ಹಾಗೂ ಸಾಣಾಪೂರ ವರೆಗೆ ವಾಹನಗಳು ನಿಲುಗಡೆಯಾಗಿದ್ದವು. ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು. ಕಳೆದರೆಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಪರಿಣಾಮ ಸಂಕ್ರಾಂತಿ ಹಬ್ಬವನ್ನು ಮನೆಯಲ್ಲಿಯೇ ಆಚರಣೆ ಮಾಡಿದ್ದ ಜನರು ಈ ಭಾರಿ ಕುಟುಂಬ ಸಮೇತರಾಗಿ ಸಂಕ್ರಾಂತಿಯ ನದಿ ಪುಣ್ಯ ಸ್ನಾನಕ್ಕೆ ಆಗಮಿಸಿದ್ದರು. ಪೊಲೀಸ್ ವರದಿ ಪ್ರಕಾರ ರವಿವಾರ ಅಂಜನಾದ್ರಿಗೆ 50 ಸಾವಿರ ಭಕ್ತರು ಆಗಮಿಸಿದ್ದರು.