Advertisement
ಹಬ್ಬದ ಸಂಭ್ರಮಕ್ಕೆ ನಗರ- ಹಳ್ಳಿಗಳೆಂಬ ಭೇದವಿಲ್ಲ ಎಂಬಂತೆ ಬೆಂಗಳೂರಿನಲ್ಲೂ ಗ್ರಾಮೀಣ ಸೊಗಡಿನ ಸಂಕ್ರಾಂತಿ ಆಚರಣೆಗೆ ಊರಬಾಗಿಲ ಅಲಂಕಾರ, ಮೈದಾನಗಳಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಸ್ಪರ್ಧೆ, ಧಾನ್ಯಗಳ ರಾಶಿ ಪೂಜೆ, ಮೇಳಗಳ ಜತೆಗೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಈ ಮೂಲಕ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು’ ಎಂಬ ನಾಣ್ಣುಡಿಯಂತೆ ಆಚರಿಸಲಾಗುತ್ತದೆ.
Related Articles
Advertisement
ವಿವಿಧೆಡೆ ಕಾರ್ಯಕ್ರಮ: ರಾಜರಾಜೇಶ್ವರಿ ನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ಜನಪದ ತಂಡಗಳ ಉತ್ಸವ, ಗೋವಿನ ಪೂಜೆ ಮತ್ತು ಕಿಚ್ಚು ಹಾಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರ ನಗರ ಬಯಲು ರಂಗಮಂಟಪದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 10ರವರೆಗೆ ಸಂಗೀತ, ನೃತ್ಯ ವೈಭವ ನಡೆಯಲಿದೆ.
ಬುಧವಾರ ಮಧ್ಯಾಹ್ನ 1.30 ರಿಂದ ರಾತ್ರಿ 9ರವರೆಗೆ ನಗೆಹಬ್ಬ ನಡೆಯಲಿದ್ದು, ಇದರೊಟ್ಟಿಗೆ ತಿಂಡಿ ಮೇಳ ಆಯೋಜಿಸಲಾಗಿದೆ. ಬನಶಂಕರಿ 3ನೇ ಹಂತದ ಭುವನೇಶ್ವರಿ ನಗರದ ಮಹಾಲಕ್ಷ್ಮೀ ದೇವಸ್ಥಾನ ಬೆಳಗ್ಗೆ 10.30ಕ್ಕೆ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 3.30ಕ್ಕೆ ರಂಗೋಲಿ ಸ್ಪರ್ಧೆ, ಸಂಜೆ 5ಕ್ಕೆ ಖ್ಯಾತ ಕಲಾ ತಂಡಗಳಿಂದ ಜಾನಪದ ಗಾಯನ, ಸಂಜೆ 6ಕ್ಕೆ ಮೊಸರು ಗಡಿಗೆ ಹೊಡೆಯುವ ಸ್ಪರ್ಧೆಗಳು ನಡೆಯಲಿವೆ.
ಸಂಕ್ರಾಂತಿ ಸಹಬಾಳ್ವೆ ಸಾಮರಸ್ಯದ ಸಂಕೇತಟಿ. ದಾಸರಹಳ್ಳಿ: ಸಂಕ್ರಾಂತಿ, ಸಹಬಾಳ್ವೆ, ಸಾಮರಸ್ಯವನ್ನು ಸಾರುವ ಸಂಕೇತವಾಗಿದೆ ಎಂದು ಶ್ರೀ ಶಾರದಾ ವಿದ್ಯಾ ಮಂದಿರದ ಸಂಸ್ಥಾಪಕ ಬೋರಯ್ಯ ಅಭಿಪ್ರಾಯಪಟ್ಟರು. ತೆಂಗಿನ ತೋಟದ ರಸ್ತೆಯ ಶ್ರೀ ಶಾರದಾ ವಿದ್ಯಾಮಂದಿರದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಡಗರಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತ ಬೆಳೆದ ದವಸ ಧಾನ್ಯಗಳನ್ನು ಕಣದಲ್ಲಿ ಹದ ಮಾಡಿ ರಾಶಿಮಾಡಿ ಮನೆಗೆ ಕೊಂಡೊಯ್ಯುವಾಗ ಸ್ವಲ್ಪ ಪ್ರಮಾಣವನ್ನು ಬಡ ಬಗ್ಗರಿಗೆ ಹಂಚುವುದು ವಾಡಿಕೆ. ಅನ್ನದಾತನನ್ನು ಆದರ್ಶವಾಗಿರಿಸಿಕೊಂಡು ಮಕ್ಕಳು ಹಂಚಿ ತಿನ್ನುವ ಉದಾತ್ತ ಭಾವನೆಯನ್ನು ಬೆಳೆಸಿಕೊಳ್ಳಿ ಎಂದರು. ಕಾರ್ಯದರ್ಶಿ ಡಾ. ವೇಣುಗೋಪಾಲ್ ಮಾತನಾಡಿ, ಹಿಂದೆಲ್ಲಾ ಜನತೆ ಒಗ್ಗೂಡಿ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ವೈಮನಸ್ಯಗಳನ್ನು ಮರೆಯುತ್ತಿದ್ದರು. ಆಧುನಿಕತೆಯ ಸೋಗಿನಲ್ಲಿ ಇಂದು ಇವೆಲ್ಲ ಮರೆಯಾಗುತ್ತಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡರು. ಶಾಲೆಯಲ್ಲಿ ಸಿಹಿ ಪೊಂಗಲ್ ವಿತರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಸುವರ್ಣ, ಆಡಳಿತಾಧಿಕಾರಿ ಅನುಸೂಯ ಇತರರಿದ್ದರು. ಸಂಕ್ರಾಂತಿಗೆ ಖರೀದಿ ಭರಾಟೆ
ಬೆಂಗಳೂರು: ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಲ್ಲೂ ಕಳೆಗಟ್ಟಿದೆ. ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಕೃಷ್ಣರಾಜೇಂದ್ರ ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಜಯನಗರ, ಯಶವಂತಪುರ, ಬನಶಂಕರಿ, ನಂದಿನಿ ಲೇಔಟ್, ವಿಜಯನಗರ, ಹಲಸೂರು ಸೇರಿದಂತೆ ಇನ್ನಿತರ ಮಾರುಕಟ್ಟೆಗಳು ಜನರಿಂದ ಗಿಜಿಗುಡುತ್ತಿದ್ದವು. ಹಬ್ಬಕ್ಕೆ ಬೇಕಾದ ಕಬ್ಬು, ಕಡಲೆ, ಗೆಣಸು, ಎಳ್ಳು-ಬೆಲ್ಲ ಸೇರಿದಂತೆ ಅಗತ್ಯ ವಸ್ತುಗಳ ಚೌಕಾಸಿ- ಖರೀದಿ ಜೋರಾಗಿತ್ತು. ಬಿಳಿ ಕಬ್ಬಿನ ಒಂದು ಜಲ್ಲೆ ಕೆ.ಆರ್. ಮಾರುಕಟ್ಟೆಯಲ್ಲಿ 25 ರಿಂದ 35 ರೂ.ಗೆ ಮಾರಾಟವಾಯಿತು. ಹಾಗೆಯೇ ನಂದಿನಿ ಲೇ ಔಟ್, ಹೆಬ್ಟಾಳ, ವಿಜಯನಗರ, ಮಲ್ಲೇಶ್ವರ, ಬನಶಂಕರಿ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ 50ರಿಂದ 60ರೂ.ಗೆ ಖರೀದಿಯಾಯಿತು. ಜತೆಗೆ ಕರಿ ಕಬ್ಬಿನ ಜೆಲ್ಲೆ ಜೋಡಿ ಕಬ್ಬಿಗೆ 120 ರಿಂದ 150 ರೂ.ವರೆಗೆ ಮಾರಾಟ ನಡೆಯಿತು. ಉಳಿದಂತೆ ಕಡಲೆಕಾಯಿ ಕೆ.ಜಿ.ಗೆ 80-100ರೂ, ಅವರೆಕಾಯಿ ಕೆ.ಜಿ.ಗೆ 50-70 ರೂ. ಸಿಹಿ ಗೆಣಸು 30-50ರೂ.ಗೆ ಖರೀದಿಯಾಯಿತು. ಜತೆಗೆ ಸಿದ್ಧ ಎಳ್ಳು-ಬೆಲ್ಲ ಕೆ.ಜಿ.ಗೆ 240 ರೂ.ಗೆ ಮಾರಾಟವಾಯಿತು. ಮಲ್ಲಿಗೆ ಹೂವು 2500 ರೂ: ಸೋಮವಾರ ಕೆ.ಜಿ ಗೆ 2000 ರಿಂದ 3 ಸಾವಿರ ರೂ.ವರೆಗೆ ಮಾರಾಟವಾಗಿದ್ದ ಮಲ್ಲಿಗೆ ಹೂವು ಮಂಗಳವಾರ ತುಸು ಕಡಿಮೆಯಾಯಿತು. 2 ಸಾವಿರ ರೂ.ದಿಂದ 2.500ರೂ.ವರೆಗೆ ಮಾರಾಟ ವಾಯಿತು. ಸೋಮವಾರ ಮಲ್ಲಿಗೆ ಹೂವು 2,500 ರಿಂದ 3 ಸಾವಿರ ರೂ.ಗೆ ಮಾರಾಟವಾಗಿತ್ತು. ಆದರೆ ಮಂಗಳವಾರ 2000 -2500 ರೂ.ವರೆಗೆ ಮಾರಾಟವಾಯಿತು. ಕಳೆದ ಬಾರಿ ಹೋಲಿಕೆ ಮಾಡಿದರೆ ಈ ಬಾರಿ ಹೇಳಿಕೊಳ್ಳುವಂತಹ ವ್ಯಾಪಾರ ಆಗಿಲ್ಲ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ಕೆ.ಮಂಜುನಾಥ್ ಹೇಳಿದರು. ಕನಕಾಂಬರ ಹೂವು ಕೆ.ಜಿ.ಗೆ 600-800 ರೂ. ಇದ್ದರೆ, ಕಾಕಡ ಹೂವು 500-600 ರೂ.ವರೆಗೆ ಖರೀದಿ ನಡೆಯಿತು ಎಂದು ಮಾಹಿತಿ ನೀಡಿದರು. ಸಿಎಂ ಶುಭಾಶಯ
ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಸುಗ್ಗಿ ಹಬ್ಬವಾದ ಸಂಕ್ರಾಂತಿ ಎಲ್ಲರಿಗೂ ಸಮೃದ್ಧಿ, ನೆಮ್ಮದಿ ಹಾಗೂ ಸಂತೋಷವನ್ನು ತರಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದ್ದಾರೆ. 5.20ರಿಂದ ಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶ: ಐತಿಹಾಸಿಕ ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ 5.20ರ ನಂತರ ಸೂರ್ಯ ರಶ್ಮಿ ಶಿವಲಿಂಗಕ್ಕೆ ಸ್ಪರ್ಶವಾಗಲಿದೆ. ಪ್ರತಿ ಸಂಕ್ರಾಂತಿ ದಿನದಂದು ಈ ವಿಸ್ಮಯ ನಡೆಯಲಿದ್ದು ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.