Advertisement

ವಿವಿಧ ದೇಗುಲಗಳಲ್ಲಿ ಸಂಕ್ರಾಂತಿ ಆಚರಣೆ

12:21 PM Jan 15, 2018 | |

ಪುತ್ತೂರು: ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ವಿವಿಧ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ರವಿವಾರ ಬೆಳಗ್ಗೆ ಶಾಸ್ತಾರ ಗುಡಿಯ ಎದುರು ಧರ್ಮಶಾಸ್ತರ ಶಾಂತಿಹವನ ನಡೆಯಿತು. ರಾತ್ರಿ ದೇವಾಲಯದಲ್ಲಿ ಕನಕಾಭಿಷೇಕ ನಡೆದಿದ್ದು, ಸಾವಿರಾರು ಭಕ್ತರು ಭಾಗಿಯಾದರು. ದೇವಾಲಯದ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ವ್ರತಾಚರಣಾ ಸಮಿತಿಯಿಂದ 55 ನೇ ವರ್ಷದ ಶ್ರೀ ಸತ್ಯನಾರಾಯಣ ವ್ರತಾಚರಣೆ ನಡೆಯಿತು.

Advertisement

ಧನು ಪೂಜೆ ಸಮಾಪನ
ಡಿ.16ರಿಂದ ತಾಲೂಕಿನ ವಿವಿಧ ದೇಗುಲಗಳಲ್ಲಿ ಆರಂಭಗೊಂಡಿದ್ದ ಧನುರ್ಮಾಸದ ಪೂಜೆ ಮಕರ ಸಂಕ್ರಮಣ ದಂದು ಸಮಾಪನಗೊಂಡಿತು. ಪುತ್ತೂರು ಮಹಾಲಿಂಗೇಶ್ವರ ದೇಗುಲ ಸೇರಿದಂತೆ ವಿವಿಧ ದೇಗುಲಗಳಲ್ಲಿ ಧನುಪೂಜೆ ವಿಶೇಷವಾಗಿ ನಡೆದಿದ್ದು, ಭಕ್ತರು ವ್ರತಾಚರಣೆಯೊಂದಿಗೆ ಪಾಲ್ಗೊಂಡರು. ಕಲ್ಲಾರೆ ಗುರು ರಾಘವೇಂದ್ರ ಮಠ, ಕೆಮ್ಮಿಂಜೆ ಮಹಾ ವಿಷ್ಣು – ಷಣ್ಮುಖ ದೇವಸ್ಥಾನ, ಮುಂಡೂರು ಮೃತ್ಯುಂಜ ಯೇಶ್ವರ ದೇವಸ್ಥಾನ, ಕಾವು ಪಂಚಲಿಂಗೇಶ್ವರ ದೇವಸ್ಥಾನ, ಕುಂಜೂರು ಪಂಜ ದುರ್ಗಾಪರಮೇಶ್ವರಿ ದೇವಸ್ಥಾನ, ರಾಮಕುಂಜ ರಾಮ ಕುಂಜೇಶ್ವರ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಕರಾಯ ಮಹಾಲಿಂಗೇಶ್ವರ ದೇವಸ್ಥಾನ, ಪುಳಿತ್ತಡಿ ಸುಬ್ರಹ್ಮಣ್ಯ ದೇವಸ್ಥಾನ, ಹನುಮಗಿರಿ ಆಂಜನೇಯ ಕ್ಷೇತ್ರ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ ಮೊದಲಾದೆಡೆ ತಿಂಗಳ ಕಾಲ ಧನುಪೂಜೆ ನಡೆದಿತ್ತು. ಇದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಪನಗೊಂಡಿತು.

ಸಚಿವರ ಭೇಟಿ
ಮಕರ ಸಂಕ್ರಮಣದಂದು ರವಿವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಹಾಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿ ಮುಂಜಾನೆ ಧನುಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಸಚಿವ ಪ್ರಮೋದ್‌ ಮಧ್ವರಾಜ್‌ ದೇವಾಲಯಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಉಳ್ಳಾಲ್ತಿ ಕ್ಷೇತ್ರಕ್ಕೆ ನಗರ ಭಜನೆ
ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿರುವ ಶ್ರೀ ಶಾರದಾ ಭಜನ ಮಂದಿರದ ಭಕ್ತರಿಂದ ಮಕರ ಸಂಕ್ರಮಣ
ದಿನದ ಸಂಜೆ ಸೀಮೆಯ ಪ್ರಧಾನ ದೈವಸ್ಥಾನ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ನಗರ ಭಜನೆ ಸೇವೆ ನಡೆಯಿತು. ಭಜನ ತಂಡ ಬಪ್ಪಳಿಗೆ ಮಾರ್ಗವಾಗಿ ಸಾಗುವ ವೇಳೆ ದಾರಿಯಲ್ಲಿ ಸಿಗುವ ಮನೆಗಳ ತುಳಸಿ ಕಟ್ಟೆಗಳಿಗೆ ಸುತ್ತು ಬಂದು ಬಲ್ನಾಡಿಗೆ ತೆರಳಿತು. ಉಳ್ಳಾಲ್ತಿ ಕ್ಷೇತ್ರದಲ್ಲಿ ಭಜನೆ ಸೇವೆ ನಡೆದು ಬಳಿಕ ಮರಳಿ ಭಜನ ಮಂದಿರಕ್ಕೆ ತಂಡ ಹಿಂತಿರುಗಿತು. 

ರೋಗ ಪೀಡಿತರಿಗೆ ದೈವ ಪರಿಹಾರ 
ಶತಮಾನದ ಹಿಂದೆ ಪುತ್ತೂರು ಆಸುಪಾಸಿನಲ್ಲಿ ಆವರಿಸಿದ ಸಾಂಕ್ರಾಮಿಕ ಕಾಯಿಲೆ ದೂರಮಾಡುವ ನಿಟ್ಟಿನಲ್ಲಿ ಭಕ್ತರು ಬಲಾ°ಡು ದೈವಸ್ಥಾನಕ್ಕೆ ತೆರಳಿ ಉಳ್ಳಾಲ್ತಿ ತಾಯಿಯಲ್ಲಿ ಬೇಡಿಕೊಂಡಾಗ ದೈವ ಪರಿಹಾರ ಸೂಚಿಸಿದ್ದಾಗಿ ಹೇಳಲಾಗಿದೆ. ಅದರಂತೆ ರೋಗ ಪೀಡಿತ ಪ್ರದೇಶಗಳ ಮನೆಗಳಿಗೆ ಮುಸ್ಸಂಜೆ ತೆರಳಿ ತುಳಸಿಕಟ್ಟೆಗೆ ಸುತ್ತು ಭಜನೆ ಮಾಡಿ ಪ್ರತಿ ವರ್ಷ ಮಕರ ಸಂಕ್ರಮಣದಂದು ರಾತ್ರಿ ಭಜನೆಯೊಂದಿಗೆ ಬಲ್ನಾಡು ದೈವಗಳ ಸನ್ನಿಧಿಗೆ ಬರುವಂತೆ ಹೇಳಲಾಗಿತ್ತು ಎನ್ನಲಾಗಿದೆ. ಅಂದಿನಿಂದ ನಗರ ಭಜನೆ ಆರಂಭವಾಯಿತು ಎನ್ನುವುದು ಹಿನ್ನೆಲೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next