ಸಂಕೇಶ್ವರ: ಮುಸ್ಲಿಂ ದೇಹ-ಕನ್ನಡ ಮನಸ್ಸು ಹೊಂದಿರುವ ಬೆಳಗಾವಿ ಹತ್ತಿರದ ಶಿಂದೊಳ್ಳಿಯ ಸನದಿ ಕುಟುಂಬ ಕನ್ನಡ ನಾಡಿಗೆ ಮತು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹಿರಿಯ ಸಂಶೋಧಕ
ಡಾ| ಬಸವರಾಜ ಜಗಜಂಪಿ ಹೇಳಿದರು.
ಅವರು ಸಂಕೇಶ್ವರ ಪಟ್ಟಣದಲ್ಲಿ ಕವಿ, ಕಲಾವಿದ ಅಕ್ಬರ ಸನದಿ ಅವರ ಅಭಿನಂದನಾ ಸಮಾರಂಭ ಹಾಗೂ ನಾದ ನಿನಾದ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಕಣಗಲಾದಲ್ಲಿರುವ ಕೇಂದ್ರ ಸರ್ಕಾರದ ಉದ್ದಿಮೆಯಲ್ಲಿ ಸೇವೆ ಸಲ್ಲಿಸುತ್ತಾ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಗಡಿ ಭಾಗದಲ್ಲಿ ನಿರಂತರ ಕನ್ನಡ ಕಟ್ಟುವ ಕಾಯಕ ಮಾಡುತ್ತಾ ಸಾಹಿತಿಯಾಗಿ ಕೆಲವು ಉತ್ತಮ ಕೃತಿಗಳನ್ನು ತಂದು ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ| ರಾಮಕೃಷ್ಣ ಮರಾಠೆ ಮಾತನಾಡಿ, ಗಡಿನಾಡಿನ ಹಳ್ಳಿಯಿಂದ ಬಂದ ಸನದಿ ಕುಟುಂಬದ ಆರು ಸದಸ್ಯರು ಕನ್ನಡ ಸಾರಸ್ವತ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿರುವುದು ಐತಿಹಾಸಿಕ ಕೆಲಸ. ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಸಮಾಜ ಒಡೆದು ಹೋಗುತ್ತಿರುವಾಗ ಸನದಿ ಸಹೋದರರು ಏಕತ್ವದ ಕಲ್ಪನೆಯಲ್ಲಿ ಸಾಹಿತ್ಯ ರಚಿಸಿರುವುದು ಸಂತಸ ಸಂಗತಿ ಎಂದರು.
ಸಾನ್ನಿಧ್ಯ ವಹಿಸಿದ್ದ ನಿಡಸೋಶಿಯ ಸಿದ್ದಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆ-ತಾಯಿ ಪಾತ್ರ, ಜವಾಬ್ದಾರಿ ಬಹುದೊಡ್ಡದು. ಸನದಿ ಸಹೋದರರ ತಂದೆ-ತಾಯಿ ಜನಪದ ಕಲಾವಿದರಾಗಿದ್ದರಿಂದ ತಮ್ಮ ಮಕ್ಕಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿ ತುಂಬಿದರು. ಬಡತನವೇ ಬದುಕಿನ
ಸಾಧನೆಗೆ ಮಾರ್ಗದರ್ಶಿಯಾಗಿರುತ್ತದೆ, ಅಂತಹ ನೆಲೆಯಿಂದ ಬಂದ ಅಕಬರ ಸನದಿ ಅವರ ಕಾರ್ಯ ಶ್ಲಾಘನೀಯ ಎಂದರು.
ಎ. ಎ.ಸನದಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮ ಜರುಗಿತು. ಪ್ರೊ. ಎಲ್.ವಿ.ಪಾಟೀಲ ಸ್ವಾಗತ ಕೋರಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಉದ್ಯಮಿ ಅಪ್ಪಾಸಾಹೇಬ ಶಿರಕೋಳಿ, ಡಾ. ಪಿ..ಜಿ.ಕೆಂಪಣ್ಣವರ, ಡಾ. ದಯಾನಂದ ನೂಲಿ, ಡಾ. ಜಯಪ್ರಕಾಶ್ ಕರಜಗಿ, ಎಸ್.ಎಂ.ಶಿರೂರ, ದಸಗತಗೀರ ತೇರಣಿ ಉಪಸ್ಥಿತರಿದ್ದರು. ಡಾ. ಶ್ರೀಶೈಲ ಮಠಪತಿ, ಪ್ರೊ. ವಿ.ಬಿ.ಚೌಗಲಾ ನಿರೂಪಿಸಿದರು.