Advertisement

ಸಣ್ಣಕೇರಿ ಕೆರೆಯಲ್ಲಿ ಜಲ ಸ್ವಚ್ಛತಾ ಅಭಿಯಾನ!

04:51 PM Apr 30, 2023 | Team Udayavani |

ಶಿರಸಿ: ಪಾಚಿಗಟ್ಟಿದ್ದ, ಮುಳ್ಳಿನ ಗಿಡಗಳೇ ತುಂಬಿದ್ದ ಇದ್ದೂ ಇಲ್ಲದಂತೆ ಕಾಣುತ್ತಿದ್ದ ತಾಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣ್ಣಕೇರಿಯ ವಿಶಾಲ ಕೆರೆಯಲ್ಲಿ ರವಿವಾರ ಜಲ ಸಂರಕ್ಷಣೆಗೆ ಸ್ವಚ್ಛತಾ ಹಬ್ಬ. ಸುಡುವ ಬಿಸಿಲಿನಲ್ಲೂ ಹುಗಿಯುವ, ಪಾಚಿಯಿಂದ ತುಂಬಿದ ಕೆರೆಗೆ ಇಳಿದು ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಕೊಂಡು ಕೆರೆಯಲ್ಲಿ ಬೆಳೆದಿದ್ದ ಪಾಚಿ ತೆಗೆದರು.

Advertisement

ಉದ್ಯೋಗಸ್ಥರು, ರೈತರು, ಯುವಕರು, ವಿದ್ಯಾರ್ಥಿಗಳೆಲ್ಲ ಸಂಭ್ರಮದಲ್ಲಿ ಕೆರೆಯ ಸಂರಕ್ಷಣೆಗೆ ಕೈ ಜೋಡಿಸಿದರು‌. ಇದು ಕೆರೆ ರಕ್ಷಣೆಯ ಹಬ್ಬವಾಗಿ ಪರಿವರ್ತನೆ ಕಂಡಿತು. ಜೆಸಿಬಿ, ಟ್ರಾಕ್ಟರ್ ಬಳಸಿ ನೂರಾರು ಯುವಕರು ಕೆರೆಯಲ್ಲಿ ಇಳಿದು ಪಾಚಿ ತೆಗೆದರು. ಇದಕ್ಕೆ ಜಲ ಯೋಗಿಯೊಬ್ಬರು ನೇತೃತ್ವ ವಹಿಸಿದ್ದರು.

ಜೀವ ಜಲದ ನೇತೃತ್ವ:
ಕೆರೆಯ ಸಂರಕ್ಷಣೆಗಾಗಿ ಬೆಳೆದ ಪಾಚಿ ತೆಗೆದು‌ ಸ್ವಚ್ಛಗೊಳಿಸಲು ಅಕ್ಷರಶಃ ಕಾರಣ ಆಗಿದ್ದು‌ ಜೀವ‌ ಜಲ‌ ಕಾರ್ಯಪಡೆ. ರವಿವಾರ ಬೆಳಿಗ್ಗೆ ೯ಕ್ಕೇ ಕಾರ್ಯಪಡೆಯ ಹತ್ತಾರು ಸದಸ್ಯರು, ಟ್ರಾಕ್ಟರ್, ಜೆಸಿಬಿ ಎಲ್ಲ ಕೆರೆಯ ಉಳಿವಿಗೆ ಕೆಲಸ ಆರಂಭಿಸಿತು.

ಕೆರೆಯ ಅಭಿವೃದ್ದಿಗೆ ಗ್ರಾಮಸ್ಥರು ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರಲ್ಲಿ ವಿನಂತಿಸಿದ್ದರು. ಗ್ರಾಮಸ್ಥರು, ಕಾರ್ಯಪಡೆ ಒಂದಾಗಿ ಗ್ರಾಮದ ನಡುವೆ ಇದ್ದ ಮೂರು ಎಕರೆ ವಿಸ್ತೀರ್ಣದ ಕೆರೆ ಅಭಿವೃದ್ಧಿಗೆ ಮುಂದಾಯಿತು. ಮೊದಲಿಗೆ ಬೆಳೆದ ಪಾಚಿ ತೆಗೆಯಲು ಆಯೋಜಿಸಿತು.

ಕೆರೆಗಿಳಿದ ಹೆಬ್ಬಾರ್!
ಶ್ರೀನಿವಾಸ ಹೆಬ್ಬಾರ ಕಾರ್ಯಪಡೆಯ ಅಧ್ಯಕ್ಷರು. ಅವರಿಗೆ ನಮ್ಮ ಕೆರೆಗಳ ಉಳಿವು, ರಕ್ಷಣೆಯ‌ ಕನಸು. ಕೆರೆ ಸ್ವಚ್ಛತಾ ಕಾರ್ಯಕ್ಕೆ‌ ಚಾಲನೆ ನೀಡುತ್ತಿದ್ದಂತೇ ಸ್ವತಃ ಕೆರೆಗೆ ಇಳಿದರು.

Advertisement

ಮುಂಜಾನೆ‌ ೯:೩೦ರಿಂದ ಊರ ಯುವಕರಂತೆ ಕೆರೆಗೆ ಇಳಿದು ಸ್ವಚ್ಛತಾ ಅಭಿಯಾನ ‌ನಡೆಸಿದರು. ಮುಳ್ಳೂ ಇರುವ ಕೆರೆಯಲ್ಲಿ ಹುಡುಗರಿಹಿಂತ ಉತ್ಸಾಹದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. ಮೇಲೆ‌ನಿಂತು ಹೀಗೆ ಮಾಡಿ ಎನ್ನದೇ ಸ್ವತಃ ಹೆಬ್ಬಾರರೂ ಯುವಕರು ನಾಚುವಷ್ಟು ಕೆರೆಗೆ ಇಳಿದದ್ದು ಅಚ್ಚರಿ ತಂದಿತು. ಹೆಬ್ಬಾರರ ಜಲ‌ಪ್ರೀತಿಗೆ ಇದು ಸಾಕ್ಷಿಯಾಯಿತು.

ಮೂರೆಕರೆ‌ ಕೆರೆ:
ಸಣ್ಣಕೇರಿ‌ ಕೆರೆ ಎಂದರೆ‌ ಸಣ್ಣದಲ್ಲ. ಬರೋಬ್ಬರಿ ಮೂರು ಎಕರೆಯಷ್ಟು ವಿಸ್ತಾರವಾದ ಕೆರೆ. ಕೆರೆ ಏರಿಯ ಮೇಲೆ ರಸ್ತೆ, ಕೆಳ ಭಾಗದಲ್ಲಿ ಅಡಿಕೆ ತೋಟಗಳಿವೆ.

ಸಣ್ಣಕೇರಿ, ಪುರ, ಗಣಗೇರಿ, ಹೊಳೆಬೈಲ್, ಮಾವಿನಕೊಪ್ಪ ಸೇರಿದಂತೆ ಹಲವು ಹಳ್ಳಿಗಳಿಗೆ, ನೂರಕ್ಕೂ ಅಧಿಕ ಕೃಷಿ ಭೂಮಿಗೆ ಆಶ್ರಯವಾದ ಕೆರೆಗೆ ಎರಡು ಶತಮಾನಗಳಾಚೆಯ ಇತಿಹಾಸ ಇದೆ ಎನ್ನುತ್ತಾರೆ ಗ್ರಾಮಸ್ಥರು.
ಮೂರ್ನಾಲ್ಕು ದಶಕಗಳ ಹಿಂದೆ ಒಮ್ಮೆ ಒಂದಷ್ಡು ಹೂಳು ತೆಗೆಯಲಾಗಿತ್ತಂತೆ. ಅದಾದ ನಂತರ ನಿರ್ವಹಣೆ ಇಲ್ಲದೇ ಹೀಗಾಗಿದೆ. ಹೇಗಾದರೂ ಕೆರೆ ಜೀರ್ಣೋದ್ದಾರ ಮಾಡಬೇಕು ಎಂದು ಮನವಿ ಮಾಡಿದ್ದಕ್ಕೆ ಹೆಬ್ಬಾರ ಅವರು ಬೆಂಬಲವಾಗಿ ಬಂದಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಈಗ ಇದರ ಅಭಿವೃದ್ದಿಗೆ ಜೀವ ಜಲ ಕಾರ್ಯಪಡೆ ಟೊಂಕ‌ ಕಟ್ಟಿಕೊಂಡಿದೆ. ಕರಸುಳ್ಳಿ, ಜೈನಮಠ, ಯಚಡಿ ಕೆರೆಗಳ ಜೊತೆ ಸಣ್ಣಕೇರಿ ಕೆರೆ ಕೂಡ‌ ಈ ವರ್ಷದ ಪಟ್ಟಿಗೆ ಸೇರಿಕೊಂಡಿದೆ.

ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಕಾರ್ಯಪಡೆ ಮೊದಲ ಹಂತದಲ್ಲಿ ಸ್ವಚ್ಛತೆಗೆ ಕೈ ಜೋಡಿಸಿದೆ. ಮುಂದಿನ ವರ್ಷ ಕೆರೆಯ ಹೂಳೆತ್ತುವ ಕಾರ್ಯ ಎತ್ತಿಕೊಳ್ಳುತ್ತೇವೆ.
-ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು, ಜೀವ ಜಲ ಕಾರ್ಯಪಡೆ, ಶಿರಸಿ

ಒಂದು‌ ಮನವಿಗೆ ಕಾರ್ಯಪಡೆ ಸ್ಪಂದಿಸಿದ ರೀತಿಯೇ ಅನನ್ಯ. ಸ್ಬತಃ ಹೆಬ್ಬಾರರೇ ಕೆರೆಗೆ ಇಳಿದು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದು ನೋಡಿದರೆ ಇವರೊಬ್ಬ ಜಲ ಯೋಗಿಗಳೇ. ನಿಜವಾದ ಭಗೀರಥ.
-ನಾರಾಯಣ ಶೆಟ್ಟಿ, ಸ್ಥಳೀಯ

Advertisement

Udayavani is now on Telegram. Click here to join our channel and stay updated with the latest news.

Next