Advertisement

ಶಂಕರಪುರ ಮಲ್ಲಿಗೆ ದರ ಪರಿಷ್ಕರಣೆ ; ಅಟ್ಟೆಗೆ ಗರಿಷ್ಠ 2,100 ರೂ

11:46 AM Dec 21, 2021 | Team Udayavani |

ಶಿರ್ವ: ಶಂಕರಪುರ ಮಲ್ಲಿಗೆ ದರ ನಿಗದಿ ಕೇಂದ್ರದಿಂದ ದರ ಪರಿಷ್ಕರಣೆ ಮಾಡಲಾಗಿದ್ದು, ಕಟ್ಟೆಯಲ್ಲಿ ಮಲ್ಲಿಗೆಯ ಗರಿಷ್ಠ ದರ ಅಟ್ಟೆಗೆ 2,100 ರೂ. ನಿಗದಿಯಾಗಿರುವುದು ಮಲ್ಲಿಗೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

Advertisement

ಈವರೆಗೆ ಮಲ್ಲಿಗೆ ಬೆಳೆಗಾರರಿಗೆ ಒಂದು ಅಟ್ಟೆ ಮಲ್ಲಿಗೆಗೆ ಗರಿಷ್ಠ 1,200 ರೂ. ಸಿಗುತ್ತಿತ್ತು.ಆದರೆ ಮಲ್ಲಿಗೆಗೆ ಕನಿಷ್ಠ ದರವೆಂಬುದು ನಿಗದಿಯಾಗಿಲ್ಲ. ಬೇಡಿಕೆಯಿಲ್ಲದ ಸಂದರ್ಭಗಳಲ್ಲಿ ಅಟ್ಟೆಗೆ 90 ರೂ. ತಲುಪಿದ್ದ ಸಂದರ್ಭವೂ ಇದ್ದು, ಬೆಳೆಗಾರರಿಗೆ ಹೂ ಕಟ್ಟುವ ಖರ್ಚು ಹೆಚ್ಚಾಗಿ ಮಲ್ಲಿಗಯನ್ನು ಗಿಡದಲ್ಲಿ ಬಿಡಲಾರದೆ ಕೊಯ್ದು ಬಿಸಾಡುವ ಸಂದರ್ಭವೂ ಎದುರಾಗುತ್ತದೆ.

ಬೇಡಿಕೆ ಎಷ್ಟೇ ಹೆಚ್ಚಾದರೂ ಬೆಳೆಗಾರರಿಗೆ ಕಟ್ಟೆಯಲ್ಲಿ ಸಿಕ್ಕುವ ಗರಿಷ್ಠ ದರವೇ ಅಂತಿಮ.ಅತೀಹೆಚ್ಚು ಬೇಡಿಕೆಯಿರುವ ಸಂದರ್ಭಗಳಲ್ಲಿ ಮಾರಾಟಗಾರರು ಕೃತಕ ಅಭಾವ ಸೃಷ್ಠಿಸಿ ಮಲ್ಲಿಗೆ ಹೂವನ್ನು ರೂ.2,000 ದಿಂದ 2,500ರ ವರೆಗೂ ಮಾರುತ್ತಾರೆ. ಆದರೆ ಬೆಳೆಗಾರರಿಗೆ ಸಿಗುತ್ತಿದ್ದದ್ದು 1,200 ರೂ. ಮಾತ್ರ.

ಮಲ್ಲಿಗೆ ಕೃಷಿಯ ಖರ್ಚು ವೆಚ್ಚ ಅತಿಯಾಗಿ ಏರಿಕೆಯಾಗಿದ್ದು,ಇಳುವರಿ ಕಡಿಮೆಯಾಗಿ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ .ನಿರ್ವಹಣೆ ಮತ್ತು ಸಾಗಾಟದ ಖರ್ಚು ಕೂಡಾ ಅಧಿಕವಿರುವುದರಿಂದ ಡಿ. 16 ರಂದು ನಡೆದ ಸದಸ್ಯರ ಸಭೆಯಲ್ಲಿ ಮಲ್ಲಿಗೆ ಬೆಳೆಗಾರರ ಬಹುದಿನದ ಬೇಡಿಕೆಯಾದ ದರ ಪರಿಷ್ಕರಣೆ ನಡೆದಿದೆ ಎಂದು ಶಂಕರಪುರ ಮಲ್ಲಿಗೆ ದರ ನಿಗದಿ ಕೇಂದ್ರದ ಸದಸ್ಯರು ತಿಳಿಸಿದ್ದಾರೆ. 2018ರ ನವೆಂಬರ್‌ನಲ್ಲಿ 820ರೂ. ಇದ್ದ ದರವನ್ನು ಪರಿಷ್ಕರಣೆ ಮಾಡಿ 1,250 ರೂ.ದರ ನಿಗದಿಪಡಿಸಲಾಗಿತ್ತು.

Advertisement

ಶ್ರಮಕ್ಕೆ ತಕ್ಕ ಪ್ರತಿಫಲ:

ಈ ಬಾರಿಯ ಹವಾಮಾನ ವೈಪರೀತ್ಯದಿಂದಾಗಿ ಗಿಡಗಳು ಹಾಳಾಗಿ ಇಳುವರಿ ಕಡಿಮೆಯಾಗಿದೆ. ಶುಭ ಸಮಾರಂಭಗಳ ಸಮಯವಾಗಿದ್ದು, ಬೇಡಿಕೆ ಕುದುರಿದ್ದರಿಂದಾಗಿ ಪೂರೈಸಲಾಗದೆ ಕಳೆದ ಕೆಲವುದಿನಗಳಿಂದ ಮಲ್ಲಿಗೆ ಗರಿಷ್ಠ ದರ 1,250 ರೂ. ಕಾಯ್ದುಕೊಂಡಿತ್ತು. ಉತ್ತಮ ಬೆಲೆ ಬಂದಾಗ ಬೆಳೆ ಇರುವುದಿಲ್ಲ,ಬೆಳೆ ಬಂದಾಗ ಬೆಲೆ ಇರುವುದಿಲ್ಲ ಹೀಗಾಗಿ ರೋಗಬಾಧೆ,ಔಷಧ ಸಿಂಪಡನೆ, ಗೊಬ್ಬರ ಸಹಿತ ಇತರೆ ಖರ್ಚುಗಳಿಂದ ಮಲ್ಲಿಗೆ ಬೆಳೆಗಾರರ ಸಂಕಷ್ಟ ಹೇಳ ತೀರದು. ಇದೀಗ ಉತ್ತಮ ದರ ನಿಗದಿಯಾಗಿದ್ದರಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಬೆಳೆಗಾರರು ಖುಷಿಯಲ್ಲಿದ್ದಾರೆ.

ದರ ಪರಿಷ್ಕರ‌ಣೆ ನಡೆದು ಅಟ್ಟೆಗೆ ರೂ. 400ರ ವರೆಗೆ 20 ರೂ. ಕಮಿಶನ್‌,ರೂ. 400 ರಿಂದ 800ರ ವರೆಗೆ 50 ರೂ., ರೂ. 800 ರಿಂದ 1,200ರವರೆಗೆ 50 ರೂ., ರೂ. 1,200 ರ ಮೇಲೆ 100 ರೂ ಮತ್ತು ಅಟ್ಟೆಗೆ 1,300ರ ಮೇಲೆ ಏರಿಕೆಯಾದಲ್ಲಿ 200 ರೂ.ಕಟ್ಟೆಯವರ ಕಮಿಶನ್‌ ನಿಗದಿ ಮಾಡಲಾಗಿದೆ.

ಪರಿಷ್ಕೃತ ದರವು ಡಿ. 23ರಿಂದ ಅನ್ವಯವಾಗಲಿದೆ ಎಂದು ಮಲ್ಲಿಗೆ ದರ ನಿಗದಿ ಕೇಂದ್ರದ ಸದಸ್ಯರಾದ ಇಗ್ನೇಶಿಯಸ್‌ ಡಿ’ಸೋಜಾ,ಡೆವಿನ್‌ ಕ್ಯಾಸ್ತಲಿನೋ,ಮ್ಯಾನ್ಯುವೆಲ್‌ ಡಿ’ಮೆಲ್ಲೊ, ವಿನ್ಸೆಂಟ್‌ ರೊಡ್ರಿಗಸ್‌, ಸಂಜೀವ ಕುಲಾಲ್‌, ಮಂಜುನಾಥ ಪಾಟ್ಕರ್‌ ಮತ್ತು ಲಾರೆನ್ಸ್‌ ವಾಜ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬೇಡಿಕೆಯಂತೆ ಕಟ್ಟೆಯಲ್ಲಿ ದರ ನಿಗದಿಯಾಗುತ್ತದೆ.ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಮಲ್ಲಿಗೆ ಹೂವಿನ ತೀರಾ ಅಭಾವದ ಸಮಯದಲ್ಲಿ ಅಟ್ಟೆಗೆ ಗರಿಷ್ಠ 2,100 ರೂ. ನಿಗದಿ ಪಡಿಸಲಾಗಿದೆ. ವಿನ್ಸೆಂಟ್‌ ರೊಡ್ರಿಗಸ್‌, ಮಲ್ಲಿಗೆ ವ್ಯಾಪಾರಿ, ಶಂಕರಪುರ.

ಗರಿಷ್ಠ ಬೆಲೆ 2,100 ರೂ. ನಿಗದಿಯಾಗಿದ್ದರಿಂದ ಬೆಳೆಗಾರರಿಗೆ ಇನ್ನೂ ಹೆಚ್ಚು ಬೆಳೆಸಲು ಉತ್ತೇಜನ ನೀಡಿದಂತಾಗಿದೆ. ಆದರೆ ಕನಿಷ್ಠ ಬೆಲೆ ನಿಗದಿಯಾಗದೆ ಬೆಳೆಗಾರರಿಗೆ ಪ್ರಯೋಜನವಿಲ್ಲ ದಂತಾಗಿದ್ದು ಕನಿಷ್ಠ ದರವನ್ನೂ ನಿಗದಿಪಡಿಸಬೇಕಾಗಿದೆ. ವಿನ್ನಿ ಮಚಾದೋ, ಮಲ್ಲಿಗೆ ಬೆಳೆಗಾರ್ತಿ,ಶಿರ್ವ

-ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next