Advertisement
ಶಂಕರನಾರಾಯಣ: ಕುಂದಾಪುರ ಹಾಗೂ ಬೈಂದೂರು ಈಗ ಎರಡು ಪ್ರತ್ಯೇಕ ತಾಲೂಕುಗಳಾಗಿ ಅಸ್ತಿತ್ವಕ್ಕೆ ಬಂದಿವೆ. ವಂಡ್ಸೆ, ಬೈಂದೂರು, ಕುಂದಾಪುರ ಹೀಗೆ 3 ಹೋಬಳಿಗಳಿವೆ. ಆದರೆ ಆಡಳಿತಾತ್ಮಕ ದೃಷ್ಟಿಯಿಂದ ಗ್ರಾಮೀಣ ಭಾಗವಾದ ಶಂಕರನಾರಾಯಣವನ್ನು ಹೋಬಳಿಯ ಅಗತ್ಯವನ್ನು ಮನಗಂಡು ಆಗಿನ ಡಿಸಿ ಸರಕಾರಕ್ಕೆ ಶಿಫಾರಸು ಕೂಡ ಸಲ್ಲಿಸಿದ್ದರೂ ಅದಿನ್ನೂ ಕೈಗೂಡಿಲ್ಲ.
ಈಗ ವಂಡ್ಸೆ ಹೋಬಳಿಯಲ್ಲಿರುವ ಹೊಸಂಗಡಿ, ಮಚ್ಚಟ್ಟು, ಯಡಮೊಗೆ ಗ್ರಾಮಸ್ಥರು ತಮ್ಮ ಏನಾದರೂ ಕಂದಾಯ, ಆಧಾರ್, ಆರ್‌ಟಿಸಿ ಮತ್ತಿತರ ಕೆಲಸಕ್ಕೆ ಸುಮಾರು 60 ಕಿ.ಮೀ. ದೂರದ ವಂಡ್ಸೆಗೆ ತೆರಳಬೇಕು. ಆದರೆ ಇಲ್ಲಿಗೆ ನೇರವಾದ ಬಸ್ ಇಲ್ಲ. ಇನ್ನು ಅಮಾಸೆಬೈಲು, ಹೆಂಗವಳ್ಳಿಯವರು ಸುಮಾರು 35-40 ಕಿ.ಮೀ. ದೂರದ ಕುಂದಾಪುರಕ್ಕೆ ತೆರಳಬೇಕು. ಶಂಕರನಾರಾಯಣದಲ್ಲೇ ನಾಡ ಕಚೇರಿ ತೆರೆದರೆ ಈ ಎಲ್ಲ ಗ್ರಾಮದ ಜನರಿಗೆ ಅನುಕೂಲವಾಗಲಿದೆ.
Related Articles
ಶಂಕರನಾರಯಣ ಹೋಬಳಿಯನ್ನಾದರೂ ರಚಿಸಬೇಕು ಎಂದು ಬೇಡಿಕೆ ಮುಂದಿಟ್ಟುಕೊಂಡು 2016ರಲ್ಲಿ ಪ್ರತಿ ಗ್ರಾಮಗಳಿಂದ ಒಟ್ಟು 5 ಸಾವಿರ ಅಂಚೆ ಕಾರ್ಡ್‌ಗಳನ್ನು ಬರೆಸಿ, ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ಬೇಡಿಕೆಯ ಬಗ್ಗೆ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ| ವಿ.ಎಸ್. ಆಚಾರ್ಯ ಶ್ರಮಿಸಿದ್ದರು. ಆ ಬಳಿಕ ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್, ಕಾಗೋಡು ತಿಮ್ಮಪ್ಪರಾದಿಯಾಗಿ ಎಲ್ಲರಿಗೂ ಮನವಿ ಸಲ್ಲಿಸಿದ್ದರು. ಮತ್ತೆ ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಲು ಪ್ರಯತ್ನಗಳು ನಡೆಯುತ್ತಿದೆ.
Advertisement
ಯಾವೆಲ್ಲ ಗ್ರಾಮಗಳು?ಜಿಲ್ಲಾಧಿಕಾರಿಗಳು ಶಂಕರನಾರಾಯಣ ಹೋಬಳಿಗೆ ಶಿಫಾರಸು ಮಾಡಿದ ಪಟ್ಟಿಯಲ್ಲಿರುವ 28 ಗ್ರಾಮಗಳು ಹೀಗಿವೆ. ಕುಂದಾಪುರ ಹೋಬಳಿಯ 11 ಗ್ರಾಮಗಳಾದ ಹೆಸ್ಕತ್ತೂರು, ಕೊರ್ಗಿ, ಯಡಾಡಿ- ಮತ್ಯಾಡಿ, ಹೊಂಬಾಡಿ-ಮಂಡಾಡಿ, ಹಾರ್ದಳ್ಳಿ – ಮಂಡಳ್ಳಿ, ಜಪ್ತಿ, ಮೊಳಹಳ್ಳಿ, 28 ಹಾಲಾಡಿ , 76 ಹಾಲಾಡಿ, ಅಮಾಸೆಬೈಲು, ಹೆಂಗವಳ್ಳಿ, ವಂಡ್ಸೆ ಹೋಬಳಿಯ 13 ಗ್ರಾಮಗಳಾದ ಶಂಕರನಾರಾಯಣ, ಕುಳಂಜೆ, ಉಳ್ಳೂರು -74, ಸಿದ್ದಾಪುರ, ಮಚ್ಚಟ್ಟು, ಹೊಸಂಗಡಿ, ಯಡಮೊಗೆ, ಕಮಲಶಿಲೆ, ಆಜ್ರಿ, ಕೊಡ್ಲಾಡಿ, ಅಂಪಾರು, ಹಳ್ನಾಡು, ಕಾವ್ರಾಡಿ ಗ್ರಾಮಗಳು ಸೇರಿವೆ. ಪಟ್ಟಿಯಲ್ಲಿದ್ದ ಮಡಾಮಕ್ಕಿ, ಶೇಡಿಮನೆ, ಅಲಾºಡಿ, ಬೆಳ್ವೆ ಗ್ರಾಮಗಳನ್ನು ಈಗಾಗಲೇ ಹೆಬ್ರಿ ತಾಲೂಕಿಗೆ ಸೇರಿಸಿರುವುದರಿಂದ ಶಂಕರನಾರಾಯಣ ಹೋಬಳಿಗೆ 24 ಗ್ರಾಮಗಳು ಉಳಿಯಲಿದೆ. ಬೈಂದೂರಿಗೆ ಸೇರಿಸಿರುವ ಹಳ್ಳಿಹೊಳೆ ಜತೆಗೆ ಕೆರಾಡಿ, ಬೆಳ್ಳಾಲ ಗ್ರಾಮಗಳನ್ನು ಸೇರಿಸಬೇಕು ಎನ್ನುವ ಬೇಡಿಕೆಯಿದೆ. 39 ಗ್ರಾಮಗಳಿದ್ದ ವಂಡ್ಸೆ ಹೋಬಳಿಯಲ್ಲಿ 13 ಗ್ರಾಮಗಳು ಶಂಕರನಾರಾಯಣ ಹೋಬಳಿಗೆ ಸೇರಿದರೆ ಬಾಕಿ 26 ಗ್ರಾಮಗಳು ಉಳಿಯಳಿದೆ. ಇನ್ನು 36 ಗ್ರಾಮಗಳಿದ್ದ ಕುಂದಾಪುರ ಹೋಬಳಿಯಲ್ಲಿ 11 ಗ್ರಾಮಗಳು ಶಂಕರನಾರಾಯಣ ಹೋಬಳಿಗೆ ಸೇರಿಸಿದರೆ ಬಾಕಿ 25 ಗ್ರಾಮಗಳು ಉಳಿಯಲಿದೆ. 26 ಗ್ರಾಮಗಳಿದ್ದ ಬೈಂದೂರಲ್ಲಿ ಹಳ್ಳಿಹೊಳೆಯನ್ನು ಇಲ್ಲಿಗೆ ಸೇರಿಸಿದರೆ 25 ಗ್ರಾಮಗಳು ಉಳಿಯಲಿದೆ. ಹೋಬಳಿ ಅಗತ್ಯ
ತಾಲೂಕು ರಚನೆಯ ಬೇಡಿಕೆಯಂತೂ ಸದ್ಯಕ್ಕೆ ಈಡೇರುವ ಲಕ್ಷಣ ಕಾಣುತ್ತಿಲ್ಲ. ಆದರೆ ಶಂಕರನಾರಾಯಣ ಹೋಬಳಿ ರಚನೆಯಾದರೆ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಹಿಂದೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ.
– ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕರು, ಶಂಕರನಾರಾಯಣ ತಾ| ಹೋರಾಟ ಸಮಿತಿ ಪುನರ್ ವಿಂಗಡಣೆಗೆ ಬೆಂಬಲ
2001 ರಲ್ಲಿ ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಆಗಿನ ಕಂದಾಯ ಸಚಿವರಿಗೆ ಕುಂದಾಪುರದಲ್ಲಿ ಇನ್ನೆರಡು ಹೋಬಳಿ ರಚಿಸಬೇಕು ಎಂದು ಬೇಡಿಕೆಯಿಟ್ಟಿದ್ದೆ. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇದು ಅತೀ ಅಗತ್ಯವಾಗಿರುವುದರಿಂದ, ಕುಂದಾಪುರ ಕ್ಷೇತ್ರದ ಕೆಲ ಗ್ರಾಮಗಳನ್ನು ಒಳಗೊಂಡ ಶಂಕರನಾರಾಯಣ ಹೋಬಳಿ ರಚನೆಗೆ, ಪುನರ್ ವಿಂಗಡಣೆಗೆ ಬೆಂಬಲವಿದೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕರು ಜನರಿಗೆ ಪ್ರಯೋಜನ
ಬಹಳ ವರ್ಷಗಳಿಂದ ಶಂಕರನಾರಾಯಣ ಹೋಬಳಿ ರಚನೆಗೆ ಬೇಡಿಕೆಯಿದ್ದು, ಇದು ಜನರ ದೃಷ್ಟಿಯಿಂದಲೂ ಭಾರೀ ಪ್ರಯೋಜನವಾಗಲಿದೆ. ಹೋಬಳಿ ರಚನೆ ಸಂಬಂಧ ಅಲ್ಲಿನ ಜನರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ,
ಬೈಂದೂರು ಶಾಸಕರು -ಪ್ರಶಾಂತ್ ಪಾದೆ