ನಾಗಶೇಖರ್ ನಿರ್ದೇಶನದ “ಸಂಜು ವೆಡ್ಸ್ ಗೀತಾ- 2′ ಚಿತ್ರದ ಚಿತ್ರೀಕರಣ ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇತ್ತೀಚೆಗೆ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ.
ನಾಯಕ ಶ್ರೀನಗರ ಕಿಟ್ಟಿ ಒಬ್ಬ ಸೈನಿಕನ ಗೆಟಪ್ನಲ್ಲಿ ಜರ್ಮನ್ ಸೈನಿಕರ ವಿರುದ್ಧ ಸೆಣೆಸಾಟ ನಡೆಸಿ ಅವರ ಹಿಡಿತದಿಂದ ರಾಣಿಯನ್ನು ಬಿಡಿಸಿಕೊಂಡು ಬರುವ ಸನ್ನಿವೇಶವನ್ನು ಚಿತ್ರತಂಡ ಚಿತ್ರೀಕರಿಸಿಕೊಳ್ಳುತ್ತಿತ್ತು. ಸಂಜು ಹಾಗೂ ಗೀತಾರ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ಹೇಳಹೊರಟಿದ್ದಾರೆ. ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ.
“ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇದು ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ದೃಶ್ಯ. ಇದರ ನಂತರ ನೆದರ್ಲ್ಯಾಂಡ್ನಲ್ಲಿ ಮುಂದುವರಿಯುತ್ತದೆ’ ಎಂದರು ನಾಗಶೇಖರ್.
ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ, ಈಗಾಗಲೇ ನಾವು ಶೂಟಿಂಗ್ ಕೊನೇ ಹಂತಕ್ಕೆ ಬಂದಿದ್ದೇವೆ. ಅಂದುಕೊಂಡ ಹಾಗೆ ಚಿತ್ರ ಮೂಡಿಬರುತ್ತಿದೆ. ಒಂದು ಅದ್ಭುತ ದೃಶ್ಯಕಾವ್ಯವಾಗಿ ಸಂಜು ವೆಡ್ಸ್ ಗೀತಾ ಚಿತ್ರ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಶ್ರೀಧರ ವಿ. ಸಂಭ್ರಮ ಐದು ಹಾಡುಗಳನ್ನು ಮಾಡಿದ್ದಾರೆ. ಅಂದಹಾಗೆ, ನಾಗಶೇಖರ್ ಹೇಳಿದಂತೆ ಈ ಚಿತ್ರ ಏಪ್ರಿಲ್ನಲ್ಲಿ ತೆರೆಕಾಣಬೇಕಿತ್ತು. ಆದರೆ, ಸದ್ಯ ಚಿತ್ರ ಚಿತ್ರೀಕರಣದಲ್ಲಿದೆ.