ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸಂಜೀವ್ ನೌಟಿಯಾಲ್ ಅವರನ್ನು ಮುಂದಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿದೆ.
ಜುಲೈ 1 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಸಂಜೀವ್ ನೌಟಿಯಾಲ್ ಅವರನ್ನು ತನ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲು ಆರ್ಬಿಐ ಅನುಮೋದನೆ ನೀಡಿದೆ ಎಂದು ಬ್ಯಾಂಕ್ ತಿಳಿಸಿದೆ.
ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಮುಂಚಿನ ಮಧ್ಯಂತರ ಸಮಯದಲ್ಲಿ ಅವರನ್ನು ಅಧ್ಯಕ್ಷ ಎಂದು ನೇಮಕಮಾಡಲಾಗಿದೆ. ನೌಟಿಯಾಲ್ ಅವರು ಈ ಹಿಂದೆ ಎಸ್ಬಿಐನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್, ಮತ್ತು ಎಸ್ ಬಿಐ ಲೈಫ್ ನಲ್ಲಿ ಎರಡು ವರ್ಷಗಳ ಕಾಲ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್ ವೃತ್ತಿಜೀವನದಲ್ಲಿ 36 ವರ್ಷಗಳ ಅನುಭವಿ.
ಈ ಸಂದರ್ಭದಲ್ಲಿ ಮಾತನಾಡಿದ ಉಜ್ಜೀವನ್ ಎಸ್ಎಫ್ಬಿ ಅಧ್ಯಕ್ಷ ಬಾಣಾವರ ಅನಂತರಾಮಯ್ಯ ಪ್ರಭಾಕರ್ “ಆರ್ಬಿಐ ನೌಟಿಯಾಲ್ ಅವರ ನೇಮಕಾತಿಯನ್ನು ಅನುಮೋದಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ಅವರಿಗೆ ಬ್ಯಾಂಕಿಂಗ್ ನ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಅನುಭವವಿದೆ “ಎಂದರು.
ತಮ್ಮ ನೇಮಕಾತಿಯ ಕುರಿತು ಪ್ರತಿಕ್ರಿಯಿಸಿರುವ ಸಂಜೀವ್ ನೌಟಿಯಾಲ್: “ಉಜ್ಜೀವನ್ ಗೆ ಸೇರುತ್ತಿರುವುದು ನಿಜಕ್ಕೂ ಒಂದು ಗೌರವ. ಟೀಮ್ ಉಜ್ಜೀವನ್ ಮತ್ತು ಎಲ್ಲ ಹಿತಾಸಕ್ತರೊಂದಿಗೆ ಸೇರಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ” ಎಂದರು.