ಹಳೆಯಂಗಡಿ: ಸರಕಾರದ ವಿದ್ಯಾಸಿರಿ ಯೋಜನೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಜೀವಿನಿಯಾಗಿದೆ. ಹಳೆಯಂಗಡಿ ಸರಕಾರಿ ಕಾಲೇಜು ಸಹ ಖಾಸಗಿ ಕಾಲೇಜಿಗೆ ಸಮಾನವಾಗಿ ಪೈಪೋಟಿ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣಕ್ಕೆ ದಿ| ಸೋಮಪ್ಪ ಸುವರ್ಣ ಅವರ ಹೆಸರನ್ನಿಟ್ಟು ಫೆ. 27ರಂದು ನಡೆದ ವಿಶೇಷ ಸಂಸ್ಮರಣ ಕಾರ್ಯಕ್ರಮದಲ್ಲಿ ಸಭಾಂಗಣವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ನಡೆಸಿ, ಕೆಎಎಸ್, ಐಎಎಸ್ ನಂತಹ ಶಿಕ್ಷಣವನ್ನು ಪಡೆದುಕೊಂಡು ಸರಕಾರಿ ಕೆಲಸ ದೊಂದಿಗೆ ಸಮಾಜದ ಪರಿವರ್ತನೆಯ ಅಧಿಕಾರಿಯಾಗಿ ನಿಯುಕ್ತರಾಗಬೇಕು. ಶಿಕ್ಷಣ ತಜ್ಞರಾಗಿ, ಜನಮಾನಸದಲ್ಲಿ ಉಳಿದುಕೊಂಡಿರುವ ದಿ| ಸೋಮಪ್ಪ ಸುವರ್ಣ ಅವರ ಆದರ್ಶ ಸಮಾಜದಲ್ಲಿ ಆಧರಣೀಯವಾಗಿದೆ ಎಂದರು.
ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್ ಮಾತನಾಡಿ, ಶಿಕ್ಷಣಕ್ಕೆ ನೀಡಿದ ಮಹತ್ವದಿಂದ ಇಂದು ಗ್ರಾಮೀಣ ಭಾಗದಲ್ಲಿಯೂ ಬಡ ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ವಿದ್ಯಾರ್ಜನೆ ಮಾಡಲು ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಬೆಳವಣಿಗೆಯಲ್ಲಿ ವಿಶೇಷ ಮುತುವರ್ಜಿ ವಹಿಸಿದ ಪ್ರಾಂಶುಪಾಲ ಪ್ರೊ| ವಿಶ್ವನಾಥ್ ಭಟ್ ಅವರನ್ನು ಗೌರವಿಸಲಾಯಿತು.
ಯುವ ಉದ್ಯಮಿ ಮಿಥುನ್ ರೈ, ಕಿಲ್ಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಧನಂಜಯ ಮಟ್ಟು, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಅಜೀಜ್, ಶರ್ಮಿಳಾ ಡಿ. ಕೋಟ್ಯಾನ್, ಹಮೀದ್ ಸಾಗ್, ಚಿತ್ರಾ ಸುರೇಶ್, ಅಬ್ದುಲ್ ಬಶೀರ್, ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್, ಕಾರ್ಯದರ್ಶಿ ಕೇಶವ ದೇವಾಡಿಗ, ಮಾಜಿ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಅಭಿವೃದ್ಧಿ ಸಮಿತಿಯ ಸದಸ್ಯೆ ಶಾಲೆಟ್ ಪಿಂಟೋ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ವಿಶ್ವನಾಥ್ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಚ್. ವಸಂತ ಬೆರ್ನಾಡ್ ಪರಿಚಯಿಸಿದರು. ವಿದ್ಯಾರ್ಥಿನಿ ವಿಜೇತಾ ಸಮ್ಮಾನ ಪತ್ರ ವಾಚಿಸಿದರು. ಉಪನ್ಯಾಸಕಿ ಮಂಜುಳಾ ಮಲ್ಯ ವಂದಿಸಿದರು. ಹರ್ಷಿತಾ ಟಿ. ನಿರೂಪಿಸಿದರು.
ಮುಚ್ಚಿದ ಕಾಲೇಜನ್ನು ತೆರೆಸಿದರು
ವಿದ್ಯಾರ್ಥಿಗಳ ಕೊರತೆಯಿಂದ ಕ್ಷೇತ್ರದ ಏಕೈಕ ಪದವಿ ಕಾಲೇಜನ್ನು ಮುಚ್ಚಲು ಆದೇಶ ನೀಡಲಾಗಿತ್ತು. ಆಗ ಸೋಮಪ್ಪ ಸುವರ್ಣ ಅವರ ಒತ್ತಾಸೆಯಂತೆ ಅಂದಿನ ಶಿಕ್ಷಣ ಮಂತ್ರಿ ಡಾ| ಜಿ. ಪರಮೇಶ್ವರ್ ಅವರಲ್ಲಿ ಇಲ್ಲಿನ ವಾಸ್ತವವನ್ನು ವಿವರವಾಗಿ ಹೇಳಿದ್ದರಿಂದ ಕಾಲೇಜನ್ನು ಮತ್ತೆ ತೆರೆಯಲಾಯಿತು. ಅಂದು ಕೇವಲ 80 ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲಿ ಇಂದು 400 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ. ಮೂರು ಭಾರಿ ನಿರಂತರವಾಗಿ ಬಿ. ಶ್ರೇಷ್ಠ ವರದಿಯನ್ನು ನಾೖಕ್ ವರದಿ ಮಾಡಿದೆ.
– ಕೆ. ಅಭಯಚಂದ್ರ ಜೈನ್