Advertisement

ಸಂಜೀವಿನಿ: ವೇತನ ಏರಿಕೆಗೆ ಸರಕಾರ ಸಮ್ಮತಿ

11:42 PM Feb 06, 2024 | Team Udayavani |

ಕುಂದಾಪುರ: ರಾಜ್ಯದ ಪಂಚಾಯತ್‌ ವ್ಯಾಪ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಜೀವಿನಿ ಸ್ವಸಹಾಯ ಸಂಘಗಳ ಮೇಲ್ವಿಚಾರಣೆ ಮಾಡುತ್ತಿರುವ ಸಿಬಂದಿಯ ವೇತನ ಪರಿಷ್ಕರಣೆಗೆ ಸರಕಾರ ಒಪ್ಪಿಗೆ ನೀಡಿದೆ.

Advertisement

ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘ ಸಚಿವ ಶರಣಪ್ರಕಾಶ ಪಾಟೀಲ್‌, ಹಿರಿಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್‌, ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಇತರ ಹಿರಿಯ ಅಧಿಕಾರಿಗಳ ಜತೆ ನಡೆಸಿದ ಮಾತುಕತೆ ಕೊನೆಗೂ ಫಲಪ್ರದವಾಗಿದೆ.

ವೇತನ ಹೆಚ್ಚಳ ಕುರಿತಂತೆ ಎಂಬಿಕೆಗಳು ಅವರ ವ್ಯಾಪ್ತಿಯಲ್ಲಿ ಬರುವ ಸ್ವ ಸಹಾಯ ಸಂಘಗಳ ಸಂಖ್ಯೆಯ ಆಧಾರದಲ್ಲಿ 40 ಸ್ವಸಹಾಯ ಸಂಘಗಳಿದ್ದರೆ 5 ಸಾವಿರ ರೂ., 45 ಸಂಘಗಳಿದ್ದರೆ 6 ಸಾವಿರ ರೂ., 90 ಸಂಘಗಳಿದ್ದರೆ 9 ಸಾವಿರ ರೂ.ಗಳಂತೆ ಕನಿಷ್ಠ 5 ಸಾವಿರ ರೂ.ಗಳಿಂದ ಗರಿಷ್ಠ 9 ಸಾವಿರ ರೂ.ವರೆಗೆ ವೇತನ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು, ಎಪ್ರಿಲ್‌ನಿಂದ ವೇತನ ಏರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು. ಎಂಬಿಕೆಗಳಿಗೆ ವೇತನ ಹೆಚ್ಚಳ ಜತೆಗೆ ಕೇಂದ್ರ ಸರಕಾರದ ಅಭಿಪ್ರಾಯ ಪಡೆದು ಎಲ್‌ಸಿಆರ್‌ಪಿಗಳಿಗೆ ಮಾಸಿಕ 4 ಸಾವಿರ ರೂ. ವೇತನ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

2021ರಿಂದ 2023ರ ವರೆಗೆ 6 ಬಾರಿ ಗಣತಿ ಕಾರ್ಯ ಮಾಡಿದ್ದು, ಗಣತಿಯಲ್ಲಿ ಭಾಗಿಯಾದವರಿಗೆ ನೀಡಬೇಕಾದ ಬಾಕಿ ವೇತನವನ್ನು ಕೊಡಲು ಒಪ್ಪಿದರು. ಪಂಚಾಯತ್‌ಗಳಲ್ಲಿ ಸಂಜೀವಿನಿ ಸಿಬಂದಿಗೆ ವ್ಯವಸ್ಥೆ, ಪ್ರತ್ಯೇಕ ಕಚೇರಿಗೆ ಸ್ಥಳವಿದ್ದಲ್ಲಿ ನರೇಗಾ ಮೂಲಕ ಕಟ್ಟಡ, ನೌಕರರಿಗೆ ಐಡಿ ಕಾರ್ಡ್‌ ಮತ್ತು ನೇಮಕಾತಿ ಆದೇಶ ಪತ್ರ, ಯುನಿಫಾರಂ ಹಾಗೂ ಸೇವಾ ನಿಯಮಾವಳಿಗಳಿಗೆ ಕ್ರಮ ಕೈಗೊಳ್ಳುವುದು, ಎಂಬಿಕೆಗಳಿಗೆ ಚೆಕ್‌ ಸಹಿ ಮಾಡುವ ಅಧಿಕಾರ ನೀಡುವ ಅವಕಾಶಗಳನ್ನು ಪರಿಶೀಲಿಸಿ ನಿರ್ಧರಿಸುವುದಾಗಿ ತಿಳಿಸಿದರು.

ಸಂಘವು ಬೆಳಗಾವಿ ಅಧಿವೇಶನ ಸಂದರ್ಭ ಪ್ರತಿಭಟನೆ ನಡೆಸಿತ್ತು.ರಾಜ್ಯ ಸಂಚಾಲಕರಾದ ಜಿ. ನಾಗರಾಜ, ಬಿ. ಮಾಳಮ್ಮ, ಯು. ಬಸವರಾಜ, ರುದ್ರಮ್ಮ,ಗೌಸ್‌ ಸಾಬ್‌, ಜೆ.ಎಂ.ವೀರ ಸಂಗಯ್ಯ, ವಿಜಯ ನಗರ, ಧಾರವಾಡ, ಕಲಬುರಗಿ, ಕೊಪ್ಪಳ, ಮಂಡ್ಯ, ಉಡುಪಿ, ಶಿವಮೊಗ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ದಾವಣಗೆರೆ, ಮುಂತಾದ ಜಿಲ್ಲೆಗಳ ಮುಖಂಡರು ಉಪಸ್ಥಿತರಿದ್ದರು.

Advertisement

“ಉದಯವಾಣಿ’ 2023ರ ಡಿ.6ರಂದು ಸಂಜೀವಿನಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಕುರಿತು “ರಾಜ್ಯಾದ್ಯಂತ ಕೆಲಸ ನಿಲ್ಲಿಸಿದ ಸಂಜೀವಿನಿ ಮೇಲ್ವಿಚಾರಕರು’ ಎಂಬ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next