Advertisement

ಸಂಜೀವಿನಿ ಮಾಸಿಕ ಸಂತೆಗೆ ಚಾಲನೆ

03:50 PM May 09, 2022 | Team Udayavani |

ಕುಷ್ಟಗಿ: ಸಂಜೀವಿನಿ ಮಾಸಿಕ ಸಂತೆಯ ಪ್ರದರ್ಶನ ಮತ್ತು ಮಾರಾಟದಿಂದ ಲಾಭದಾಯಕ ಆದಾಯವಿದ್ದು, ಗ್ರಾಮೀಣ ಸ್ವ ಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಹೇಳಿದರು.

Advertisement

ಪಟ್ಟಣದ ತಾಪಂ ಬಳಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ, ಜಿಪಂ ಹಾಗೂ ತಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಮಾರಾಟ ಮತ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಸಂಜೀವಿನಿ ಮಾಸಿಕ ಸಂತೆಯಲ್ಲಿ ವಿವಿಧ ಸ್ವ ಸಹಾಯ ಒಕ್ಕೂಟದ ಮಹಿಳೆಯರು ತಯಾರಿಸಿದ ವಿವಿಧ ಖಾದ್ಯ, ಗುಡು ಕೈಗಾರಿಕೆ, ಕರ ಕುಶಲ ವಸ್ತುಗಳು ಅಲಂಕಾರಿ ವಸ್ತುಗಳ ನೇರ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ತಿಂಗಳು ರವಿವಾರ ವಾರದ ಸಂತೆಯಲ್ಲಿ ಇದೇ ಸ್ಥಳದಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಹಣಕಾಸಿನ ಸೌಲಭ್ಯ ಪಡೆದುಕೊಂಡ ಸ್ವ ಸಹಾಯ ಸಂಘದವರು ತಯಾರಿಸಿದ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ಅಮೆಜಾನ್‌, ಪ್ಲಿಪ್‌ಕಾರ್ಟ್‌ ಮೂಲಕ ಆನ್‌ಲೈನ್‌ ಮಾರಾಟ ವ್ಯವಸ್ಥೆಗೆ ಸರ್ಕಾರ ಯೋಜಿಸಿದೆ. ಈ ಕ್ರಮದಿಂದ ಗ್ರಾಮೀಣ ಮಹಿಳೆಯರು ತಯಾರಿಸಿ ವಸ್ತುಗಳನ್ನು ಆನ್‌ಲೈನ್‌ ಖರೀದಿಯಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯವಿದೆ ಎಂದರು.

ತಾಪಂ ಇಒ ಡಾ| ಜಯರಾಮ್‌ ಚವ್ಹಾಣ ಮಾತನಾಡಿ, ತಾಲೂಕಿನ 36 ಸಂಜೀವಿನಿ ಒಕ್ಕೂಟಗಳಲ್ಲಿ ಆಯ್ದ 20 ಸ್ವಸಹಾಯ ಗುಂಪುಗಳಿಂದ ಕುಷ್ಟಗಿ ವಾರದ ಸಂತೆಯಲ್ಲಿ ಮೊದಲ ಬಾರಿಗೆ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಎಲ್ಲ ಸಂಘಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುತ್ತಿವೆ. ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ರಾಷ್ಟ್ರಮಟ್ಟದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಗುಣಮಟ್ಟದಿಂದ ವಸ್ತುಗಳನ್ನು ತಯಾರಿಸಿದ ಬೇಡಿಕೆ ಹೆಚ್ಚಿಸಿ ಆದಾಯ ವೃದ್ಧಿಸಿಕೊಳ್ಳುವ ಅವಕಾಶಗಳಿವೆ. ಕಳೆದ ತಿಂಗಳು ಜಿಲ್ಲೆಯ ಮಹಿಳಾ ಸ್ವಸಹಾಯಕ ಸಂಘಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಮನ್ನಣೆ ಗಳಿಸಿದೆ ಎಂದರು.

ವಲಯ ಮೇಲ್ವಿಚಾರಕ ಮಾದೇಗೌಡ ಪೊಲೀಸ ಪಾಟೀಲ ಮಾತನಾಡಿ, ತಾಲೂಕಿನಲ್ಲಿ 1561 ಮಹಿಳಾ ಸಂಘಗಳಿದ್ದು, 17,200 ಸದಸ್ಯರಿದ್ದಾರೆ. ಪ್ರತಿ ಗ್ರಾಪಂಗೆ ತಲಾ ಒಂದರಂತೆ ಒಕ್ಕೂಟವಿದ್ದು, ಈ ಒಕ್ಕೂಟದ ಮೂಲಕ ಸ್ವ ಸಹಾಯ ಸಂಘಗಳಿಗೆ ಶೇ. 12ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಪಡೆದ ಸಾಲಕ್ಕೆ ಪ್ರತಿ ತಿಂಗಳ ಸಾಲ ಹಾಗೂ ಬಡ್ಡಿ ಮರು ಪಾವತಿಸಲಾಗುತ್ತಿದೆ. ಈ ಸೌಲಭ್ಯ ಪಡೆದು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ವಾರದ ಸಂತೆಯಲ್ಲಿ ತಯಾರಿಸಿದ ವಸ್ತುಗಳನ್ನು ತಂದು ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ ಎಂದರು.

Advertisement

ನಂತರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಕೆ. ಮಹೇಶ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಜಿವೀನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಪಾಟೀಲ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಂಗಣ್ಣ, ರಾಜು ಭಜಂತ್ರಿ, ವಿಜಯಕುಮಾರ ತಾಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕ ರವಿಗೌಡ್ರು, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಎಂಬಿಕೆಎಲ್‌ಸಿ ಆರ್‌.ಪಿ. ಸದಸ್ಯರು ಪಾಲ್ಗೊಂಡಿದ್ದರು. ‌

ಸಂಜಿವೀನಿ ಮಾಸಿಕ ಸಂತೆಯಲ್ಲಿ ಏನೇನು?

15 ಮಳಿಗೆಗಳ ವ್ಯವಸ್ಥೆಯಲ್ಲಿ ಮಾಸಿಕ ಸಂತೆಯಲ್ಲಿ ಟ್ಯಾರಾಕೋಡ್‌ (ಮಣ್ಣಿನಿಂದ ತಯಾರಿಸಿದ) ಆಭರಣಗಳು, ಸೀರೆಗಳು, ಕೌದಿಗಳು, ಶೇಂಗಾ ಚಿಕ್ಕಿ, ಶೇಂಗಾ ಹೊಳಿಗೆ, ಚಕ್ಕಲಿ, ಕರುಕಲು ತಿಂಡಿಗಳು, ಬೆಲ್ಲದಿಂದ ತಯಾರಿಸಿದ ಜಿಲೇಬಿ, ಜಾಮೂನು, ಪಾಪಡಿ, ಕರಿದ ಅವಲಕ್ಕಿ, ಶ್ಯಾವಗಿ, ಹಪ್ಪಳ, ಆಲೂಗಡ್ಡೆ ಚಿಪ್ಸ್‌, ಪಾಪಡ್‌, ಪೇಪರ್‌ ಪ್ಲೇಟ್‌ ಮಣ್ಣಿನಿಂದ ತಯಾರಿಸಿದ ಅಲಂಕಾರಿಕ ಹಣತೆಗಳು, ಲಂಬಾಣಿ ಕಸೂತಿ ಬಟ್ಟೆ ಹಾಗೂ ಇಲಕಲ್‌ ಸೀರೆ, ಸಂಜೀವಿನಿ ಸ್ಪೇಷಲ್‌ ಟೀ ಪುಡಿ, ಎತ್ತಿಗೆ ಹಣೆ ಕಟ್ಟು, ಗೊಂಡೆ, ಗಾಡಿ, ಎತ್ತಿನ ಜೂಲಾ ಸಾಮಾಗ್ರಿ, ಅಡುಗೆ ಮಸಾಲೆ ಸಾಮಗ್ರಿಗಳ ಮಾರಾಟ ಹಾಗೂ ಪ್ರದರ್ಶನದಲ್ಲಿ ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next