Advertisement

ಅಡಿಕೆಗೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಹಕಾರ ಸಚಿವರಿಗೆ ಮನವಿ: ಸಂಜೀವ ಮಠಂದೂರು

11:36 PM Feb 08, 2023 | Team Udayavani |

ಪುತ್ತೂರು: ಹತ್ತಾರು ವರ್ಷಗಳಿಂದ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕ್ಯಾಂಪ್ಕೋ ಹಾಗೂ ಎಆರ್‌ಎಫ್‌ ಸಂಸ್ಥೆಯು ಪಟ್ಟಿ ಮಾಡಿವೆ. ತೆಂಕಿಲದಲ್ಲಿ ಫೆ. 11ರಂದು ನಡೆಯುವ ಸಮಾವೇಶದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಅಡಿಕೆ ಬೆಳೆಗಾರರು ಮತ್ತು ಸಹಕಾರ ಸಮಾವೇಶದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಅಡಿಕೆ ಬೆಳೆಗಾರರ ಜಿಲ್ಲೆ ಆಗಿದ್ದು ಇಲ್ಲಿ ಅಡಿಕೆ ಧಾರಣೆ ಇಳಿದರೆ ಜನರ ಆರ್ಥಿಕತೆ ಹಳಿ ತಪ್ಪುತ್ತದೆ. ಹೀಗಾಗಿ ಅಡಿಕೆ ಉತ್ಪಾದನ ವೆಚ್ಚ ಹೆಚ್ಚಳ, ಅಡಿಕೆ ಆಮದು ನಿಷೇಧ, ಹಳದಿ, ಎಲೆ ಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ, ಸಂಶೋಧನೆ ಬಗ್ಗೆ ಸಚಿವ ಅಮಿತ್‌ ಶಾ ಗಮನಕ್ಕೆ ತರುವ ಕಾರ್ಯ ಆಗಲಿದೆ ಎಂದರು.

ಅಮಿತ್‌ ಶಾ ಭೇಟಿ ಚುನಾವಣೆ ಸಂದೇಶ
ಅಮಿತ್‌ ಶಾ ಅವರ ಪುತ್ತೂರು ಭೇಟಿಯು ಚುನಾವಣೆಯ ಸಂದೇಶ ರವಾನಿಸುವ ವೇದಿಕೆಯೂ ಆಗಲಿದೆ. ಕೇರಳ ಮೊದಲಾದ ಭಾಗದ ಮತೀಯ ಸಂಘಟನೆಗಳಿಂದ ಜಿಲ್ಲೆಯ ಹಿಂದೂ ಕಾರ್ಯಕರ್ತರ ಹತ್ಯೆ ಉಂಟಾದ ಸಂದರ್ಭ ಗೃಹ ಸಚಿವರು ಎನ್‌ಐಎ ಮೂಲಕ ಆ ಸಂಘಟನೆಗಳನ್ನು ಸದೆ ಬಡಿದಿದ್ದರು. ಆ ಕೃತಜ್ಞತೆ ಜಿಲ್ಲೆಯ ಜನರಿಗೆ ಇದೆ ಎಂದ ಅವರು ಮತಾಂಧತೆಯ ವಿರುದ್ಧ ಧ್ವನಿಯಾಗಿಯು ಅಮಿತ್‌ ಶಾ ಭೇಟಿ ಮಹತ್ವ ಪಡೆದಿದೆ ಎಂದರು.

ಸೋಲೊಪ್ಪಿದ ಕಾಂಗ್ರೆಸ್‌
ಪುತ್ತೂರು ಬಿಜೆಪಿಯ ಹಿಂದುತ್ವದ ಕೋಟೆ. ಇಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಹಾಗಾಗಿ ಕೆಲವರು ಭಯದಿಂದ ಪತ್ರಿಕಾಗೋಷ್ಠಿ ಮಾಡುತ್ತಾರೆ. ಅವರು ಚುನಾವಣೆ ದಿನಾಂಕ ಘೋಷಣೆಯ ಮೊದಲೇ ಸೋಲು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಮಠಂದೂರು ಅವರು ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಗ್ರಾಮಾಂತರ ಮಂಡಲ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್‌, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ, ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next