Advertisement

34 ವರ್ಷಗಳಿಂದ ಉಚಿತ ಯೋಗ ತರಬೇತಿ ಕೊಡುತ್ತಿರುವ ಸಂಜೀವ

06:00 AM Jun 21, 2018 | Team Udayavani |

ಕುಂದಾಪುರ: ತನ್ನ ಆಪ ತ್ಕಾಲದಲ್ಲಿ ಬದುಕು ಉಳಿಸಿದ ವಿದ್ಯೆ ಎಲ್ಲರ ಪಾಲಾಗಬೇಕು ಎಂದು ಇಲ್ಲೊಬ್ಬರು ಕಳೆದ 34 ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ.

Advertisement

ಮೂಲತಃ ಉಡುಪಿಯ ಹೆರಂಜೆ ನಿವಾಸಿ ಪ್ರಸ್ತುತ ಕುಂದಾಪುರದವರಾದ ಸಂಜೀವ (55) ಅವರು ಇಲ್ಲಿನವರ ಪಾಲಿಗೆ ಯೋಗಬಂಧು ಸಂಜೀವಣ್ಣ. ಉಡುಪಿ ಜಿಲ್ಲೆ ಹಾಗೂ ಆಂಧ್ರಪ್ರದೇಶದ ವಿವಿಧೆಡೆ ಉಚಿತ ಯೋಗ ತರಬೇತಿ ನಡೆಸುತ್ತಿರುವ ಅವರು ಕಳೆದ 34 ವರ್ಷ ಗಳಿಂದ ಯೋಗ, ತರಬೇತಿ ಬಿಟ್ಟಿಲ್ಲ. ಇಂತಹ ಪರಿಪಾಠ ಶುರುಮಾಡಿದ್ದೇಕೆ ಎಂದು ಕೇಳಿದಾಗ ಅವರು ಹೇಳಿದ್ದು, ನನಗಾದ ಪ್ರಯೋಜನ ಎಲ್ಲರಿಗೂ ದೊರೆಯಲಿ ಎಂದು.
 
ಹೆದರಿಸಿದ ಖಾಯಿಲೆ
ಆದರ್ಶ ಆಸ್ಪತ್ರೆಯ ಮೆನೇಜರ್‌ ಆಗಿರುವ ಸಂಜೀವ ಅವರು 36 ವರ್ಷಗಳ ಹಿಂದೆ ಮುಂಬೈಯಲ್ಲಿ ಕ್ಯಾಂಟೀನ್‌ ಒಂದರಲ್ಲಿ ಕೆಲಸಕ್ಕಿದ್ದರು. ಕೆಲಸದ ವೇಳೆ ಶುರುವಾದ ಬೆನ್ನುನೋವು ಅವರನ್ನು ಹೈರಾಣಾಗಿಸಿತು. ನರ, ಮಾನಸಿಕ, ಮೂಳೆ ಎಂದು ಯಾವುದೇ ವೈದ್ಯರಿಂದಲೂ ಖಾಯಿಲೆ ಗುಣ ವಾಗಲಿಲ್ಲ. ಊರಿಗೆ ಬಂದರೂ ಪ್ರಯೋ ಜನ ವಾಗಲಿಲ್ಲ. ಬದುಕಿನ ತುತ್ತಿನ ಬುತ್ತಿ ತುಂಬಿಸುವುದು ಹೇಗೆ ಎಂಬ ಯೋಚನೆ ಹತ್ತಿತು. ಧರ್ಮಸ್ಥಳದಲ್ಲಿ ಆಗ ತಾನೆ  ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಆರಂಭವಾಗಿತ್ತು. ಉದ್ಘಾಟನೆಯಾದ 10ನೆ ದಿನಕ್ಕೆ ಸಂಜೀವರು ದಾಖಲಾದರು. ಅಲ್ಲಿನ ಚಿಕಿತ್ಸೆಯಿಂದ ಬೆನ್ನು ನೋವು ಮಾಯವಾಗಿತ್ತು. ಅನಂತರ 3 ವರ್ಷ ಸಾಧಕರಾಗಿ ದಾಖಲಾಗಿ ಪ್ರಕೃತಿ ಚಿಕಿತ್ಸೆಯ ಪ್ರಯೋಜನ ಪಡೆದು ಆರೋಗ್ಯ ವೃದ್ಧಿಸಿಕೊಂಡರು. ಸಮಾನ ಮನಸ್ಕರನ್ನೂ ಅಲ್ಲಿಗೆ ಕರೆದೊಯ್ಯುತ್ತಿದ್ದರು.
   
25 ವರ್ಷಗಳಿಂದ
1992ರಲ್ಲಿ ಬ್ರಹ್ಮಾವರದಲ್ಲಿ ಯೋಗ ತರಗತಿ ಆರಂಭಿಸಿದರು. ಶಾಲಾ ಮಕ್ಕಳಿಗೆ ಪ್ರತಿ ರವಿವಾರ ತರಬೇತಿ ನೀಡುತ್ತಿದ್ದರು. 1993ರಲ್ಲಿ ಯೋಗ ಬಂಧು ಸಂಸ್ಥೆ ಸ್ಥಾಪಿಸಿ ಯೋಗ ಶಿಬಿರಗಳನ್ನು ಆರಂಭಿಸಿದರು. 2016ರ ವರೆಗೆ ಬ್ರಹ್ಮಾವರದಲ್ಲಿ ತರಗತಿ ನಡೆಸಿದರು. ಕುಂದಾಪುರ ಶಾಸಿŒ  ಪಾರ್ಕ್‌ನ ಬಾಲಭವನದಲ್ಲಿ 25 ವರ್ಷಗಳಿಂದ ಬೆಳಗ್ಗೆ 5.45ರಿಂದ 7.15ರವರೆಗೆ ಪ್ರತಿನಿತ್ಯ ಯೋಗ ತರಬೇತಿ ನೀಡುತ್ತಿದ್ದಾರೆ. ಸಾರ್ವಜನಿಕ ಸಂಘ ಸಂಸ್ಥೆಗಳ ಜತೆಗೂಡಿ ಈವರೆಗೆ 78 ಶಿಬಿರಗಳನ್ನು ನಡೆಸಿದ್ದಾರೆ. ಕುಂದಾಪುರ ತಾಲೂಕಿನ ವಿವಿಧೆಡೆ ನಡೆದ ಜನಜಾಗೃತಿ ವೇದಿಕೆಯ ಮದ್ಯ ವರ್ಜನ ಶಿಬಿರಗಳಲ್ಲೂ ಉಚಿತ ಯೋಗ ತರಬೇತಿ ನೀಡಿದ್ದಾರೆ. 

ನಿತ್ಯ ಯೋಗಮಾಡಿ
ಸಂಜೀವ ಅವರು ತಮ್ಮ ಬಿಡುವಿನ ವೇಳೆಯಲ್ಲೇ ಈ ಕಾರ್ಯ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಪೊಲೀಸರಿಗೆ, ಆಂಧ್ರಪ್ರದೇಶದ ಆಲೂರು, ರಾಯದುರ್ಗ, ನಮ್ಮ ರಾಜ್ಯದ ವಿವಿಧೆಡೆ ತರಬೇತಿ ನೀಡಿದ್ದಾರೆ. ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರ, ಆಸನಗಳ ಮೂಲಕ ನಮ್ಮನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಬಂದ ಖಾಯಿಲೆಗಳನ್ನು ಶಮನ ಮಾಡಬಹುದು, ಬರುವ ಖಾಯಿಲೆ ಗಳನ್ನು ದೂರ ಮಾಡಬಹುದು ಎನ್ನುವುದು ಅವರ ಅನುಭವದ ಮಾತು. 

ಆರೋಗ್ಯ ಸುಧಾರಣೆಗಾಗಿ, ಮಾನಸಿಕ ನೆಮ್ಮದಿಗಾಗಿ ಯೋಗ ಮಾಡಬೇಕು. ಪ್ರತಿನಿತ್ಯ 1 ತಾಸಾದರೂ ಯೋಗದಲ್ಲಿ ತೊಡಗಿಸಿಕೊಳ್ಳಿ, ನಿಮ್ಮ ಆಯುಷ್ಯ ಹೆಚ್ಚಿಸಿಕೊಳ್ಳಿ 
– ಸಂಜೀವ,ಯೋಗ ತರಬೇತುದಾರರು

– ಲಕ್ಷ್ಮೀ ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next