ಮುಂಬೈ :ಶಿವಸೇನೆಯ ಮೂಲ ಹೆಸರು ಮತ್ತು ಪಕ್ಷದ ಚಿನ್ಹೆಯಾದ ಬಿಲ್ಲು ಮತ್ತು ಬಾಣ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಪಾಲಾದ ಬಳಿಕ ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಮತ್ತು ಏಕನಾಥ್ ಶಿಂಧೆ ಮೇಲೆ ಉದ್ಧವ್ ಠಾಕ್ರೆ ಬಣ ಟೀಕಾಪ್ರಹಾರ ನಡೆಸುತ್ತಿದೆ.
ನಿನ್ನೆಯಷ್ಟೇ ಶಿವಸೇನೆಯ ಮುಖಂಡ ಉದ್ಧವ್ ಠಾಕ್ರೆ ಚುನಾವಣಾ ಆಯೋಗ ಮೋದಿಯ ಗುಲಾಮ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಉದ್ಧವ್ ಬಣದ ಇನ್ನೊಬ್ಬ ನಾಯಕ, ಸಂಸದ ಸಂಜಯ್ ರಾವತ್ ಪಕ್ಷದ ಮೂಲ ಹೆಸರು ಮತ್ತು ಚಿನ್ಹೆಗಾಗಿ ಭಾರೀ ಮೊತ್ತದ ಡೀಲ್ ನಡೆದಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ʻಮೂಲ ಶಿವಸೇನಾ ಹೆಸರು ಮತ್ತು ಪಕ್ಷದ ಬಿಲ್ಲು ಮತ್ತು ಬಾಣದ ಚಿನ್ಹೆಗಾಗಿ 2,000 ಕೋಟಿಗೂ ಅಧಿಕ ಮೊತ್ತದ ಡೀಲ್ ಕುದುರಿದೆʼ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಮುಂಬೈನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ʻನನಗೆ ಖಚಿತ ಮಾಹಿತಿ ಸಿಕ್ಕಿದೆ, ನನಗೆ ವಿಶ್ವಾಸವೂ ಇದೆ. ಇದು ಕೇವಲ ಪ್ರಾಥಮಿಕ ಅಂಕಿ ಅಂಶ ಮಾತ್ರ. ಆದರೆ ಈ ಮಾಹಿತಿ ಶೇ.100 ರಷ್ಟು ನಿಜʼ ಎಂದು ರಾವತ್ ಟ್ವೀಟ್ ಮಾಡಿದ್ಧಾರೆ.
ʻಇದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದ ಸಂಗತಿ. ಇನ್ನು ಕೆಲವು ಮಾಹಿತಿಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದೇವೆʼ ಎಂದಿದ್ದಾರೆ.
ಇದನ್ನೂ ಓದಿ:
ಚುನಾವಣಾ ಆಯೋಗ ಮೋದಿಯ ಗುಲಾಮ: ಉದ್ಧವ್ ಠಾಕ್ರೆ