ಮುಂಬೈ: “ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಲು ಕೆಲವು ವ್ಯಕ್ತಿಗಳು ನನ್ನನ್ನು ಸಂಪರ್ಕಿಸಿದ್ದರು. ಈ ಬಗ್ಗೆ ನೆರವು ನೀಡುವಂತೆ ಕೋರಿದ್ದರು’
– ಹೀಗೆಂದು ಶಿವಸೇನೆ ವಕ್ತಾರ, ರಾಜ್ಯಸಭೆ ಸದಸ್ಯ ಸಂಜಯ ರಾವುತ್ ಗಂಭೀರ ಆರೋಪ ಮಾಡಿದ್ದಾರೆ ಮತ್ತು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು, ಬೆಳವಣಿಗೆಗಳನ್ನು ವಿವರಿಸಿದ್ದಾರೆ. ಅದಕ್ಕೆ ಪೂರಕವಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾವತ್ ಶಿವಸೇನೆಯ ಚಿಹ್ನೆ ಹುಲಿಯ ಚಿತ್ರದ ಸಹಿತ “ನಾವು ಯಾರಿಗೂ ಬಾಗುವುದಿಲ್ಲ. ಜೈ ಮಹಾರಾಷ್ಟ್ರ’ ಎಂದು ಬರೆದುಕೊಂಡಿದ್ದಾರೆ.
ಜತೆಗೆ ಪತ್ರಕರ್ತರ ಜತೆಗೆ ಮಾತನಾಡಿದ ರಾವತ್ “ಇದು ಮುಂಬೈ ಮತ್ತು ಈ ನಗರದಲ್ಲಿ ನಮ್ಮ ಪಕ್ಷವೇ ಹೆಚ್ಚು ಬಾಹುಳ್ಯವನ್ನು ಹೊಂದಿದೆ. ಎಂವಿಎ ಸರ್ಕಾರ ಐದು ವರ್ಷಗಳ ಅವಧಿ ಪೂರ್ತಿಗೊಳಿಸಲಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಜಮ್ಮು ಮತ್ತು ಕಾಶ್ಮೀರ: 610 ಕಾಶ್ಮೀರಿ ಪಂಡಿತರ ಆಸ್ತಿ ಮರುಸ್ಥಾಪನೆ
ರಾಜ್ಯಸಭೆ ಸಭಾಪತಿ ಮತ್ತು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಬರೆದ ಪತ್ರದಲ್ಲಿ “ಸುಮಾರು ಒಂದು ತಿಂಗಳ ಹಿಂದೆ ರಾಜ್ಯ ಸರ್ಕಾರವನ್ನು ಪತನಗೊಳಿಸುವ ಯೋಜನೆ ಮುಂದಿಟ್ಟುಕೊಂಡು ಕೆಲವರು ನನ್ನ ಬಳಿಗೆ ಆಗಮಿಸಿದ್ದರು. ಈ ಸಂಚಿನಲ್ಲಿ ನಾನು ಪ್ರಧಾನ ಪಾತ್ರ ವಹಿಸುವಂತೆ ಸೂಚಿಸಲಾಗಿತ್ತು. ಈ ಮೂಲಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಯತ್ನಿಸಲಾಗಿತ್ತು. ಆದರೆ, ಈ ಆಫರ್ ತಿರಸ್ಕರಿಸಿದೆ.
ಇ.ಡಿ..ಸೇರಿದಂತೆ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಶಿವಸೇನೆ ವಿರುದ್ಧ ಛೂ ಬಿಡಲಾಗುತ್ತಿದೆ. ಎಂವಿಎ ಸರ್ಕಾರ ರಚನೆಯಾದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಪತ್ರ ಏನಿದ್ದರೂ ಒಂದು ಮಾದರಿ ಮಾತ್ರ. ಬಿಜೆಪಿ ಜತೆ ಸೇರಿಕೊಂಡು ಇ.ಡಿ.ಯ ಕೆಲವು ಅಧಿಕಾರಿಗಳು ಅಕ್ರಮ ನಡೆಸುತ್ತಿದ್ದಾರೆ’ ಎಂದು ಬರೆದಿದ್ದಾರೆ.