Advertisement

ಗುಬ್ಬಿ ಹೇಳಿದ ಕಾಡಿನ ರಹಸ್ಯ

02:12 PM May 27, 2017 | |

 ಸಂಜಯ್‌ ಗುಬ್ಬಿ ಅಂದರೆ ನಿಮಗೆ ಚಿರತೆ, ಅದರ ಮೇಲೆ ಎರಗಿ ಮದ್ದು ಹೊಡೆದು ಉರುಳಿಸಿ ಮಕ್ಕಳನ್ನು ಉಳಿಸಿದ ಘಟನೆ ನೆನಪಿಗೆ ಬರಬಹುದು.ಇವಿಷ್ಟೇ ಅಲ್ಲ, ಸುಮಾರು ಎರಡು ದಶಕಗಳಿಂದ ಕಾಡುಗಳಲ್ಲಿ ಪ್ರಾಣಿಗಳ ಹಿಂದೆ ಬಿದ್ದು ಅದರ ಜಾತಕ, ಕುಂಡಲಿಯನ್ನು ಹಾಕಿಟ್ಟಿರುವುದು ಇನ್ನೊಂದು ಕೌತುಕ.  ಎಂಜಿನಿಯರ್‌ ಆಗಿ ಕೈ ತುಂಬ ಫ‌ಗಾರ ಪಡೆಯಬಹುದಿತ್ತು. ಆದರೆ ಹೀಗೆ ಮಾಡದೇ ಕಾಡಿನ ಹಿಂದೆ ಬಿದ್ದ ಗುಬ್ಬಿಗೆ, ಅವರ ಪರಿಶ್ರಮಕ್ಕೆ  ಈ ಭಾರಿ ಗ್ರೀನ್‌ ಆಸ್ಕರ್‌ ಪ್ರಶಸ್ತಿ ಸಂದಿದೆ.  ಈ ಹಿನ್ನೆಯಲ್ಲಿ ನಡೆದ ಕಾಡಿನ ರಹಸ್ಯ ಬಿಚ್ಚಿಡುವ ಮಾತುಕತೆ ಇಲ್ಲಿದೆ.  

Advertisement

   ಪ್ರಶಸ್ತಿ ಬಂದಿದೆ, ಜವಾಬ್ದಾರಿ ಹೆಚ್ಚಿದೆಯಾ?
   ಪ್ರಶಸ್ತಿ ಬಂದರೆ,  ಪ್ರಶಂಸೆ ಸಿಕ್ಕರೆ ಜವಾಬ್ದಾರಿ ಜಾಸ್ತಿಯಾಗುತ್ತದೆ. ನಮ್ಮ ಮೇಲೆ ನಾವೇ ಹಾಕಿಕೊಳ್ಳುವ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ.  ಅನುಭವ ಆಗ್ತಾ ಆಗ್ತಾ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದನ್ನು ಹೊರುವುದರಲ್ಲೂ ಖುಷಿ ಇದೆ. 

 ನಮ್ಮಲ್ಲಿ ಅರಣ್ಯ ಎಷ್ಟಿದೆಯೋ ಅಷ್ಟೇ ಇದೆ, ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗ್ತಿದೆ.  ಹೀಗಿರುವಾಗ ಪರಿಸರ ಸಮತೋಲನ ಸಾಧ್ಯವಾ?
 ನೀವು ಅಂದುಕೊಂಡಂತೆ  ಎಲ್ಲಾ ಕಡೆ ಪ್ರಾಣಿಗಳು ಜಾಸ್ತಿಯಾಗಿಲ್ಲ.  ಮಲೈ ಮಹದೇಶ್ವರ, ಕಾವೇರಿ ವನ್ಯಧಾಮ, ಅಣಶಿ-ದಾಂಡೇಲಿ ಇಲ್ಲೆಲ್ಲಾ ಅರಣ್ಯಕ್ಕೆ ತಕ್ಕಷ್ಟು ಪ್ರಾಣಿಗಳಿಲ್ಲ. ಜಾಸ್ತಿಯಾಗಿರೋದು ನಾಗರಹೊಳೆ,ಬಂಡೀಪುರ ಕಾಡುಗಳಲ್ಲಿ. ಪ್ರಾಣಿ ಇರುವ, ಇಲ್ಲದ ಕಡೆ ಅದರದೇ ಆದ ಸಮಸ್ಯೆಗಳು ಇವೆ.  ಎರಡನ್ನೂ ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಬೇಕು. ಪ್ರಾಣಿಗಳ ಸಂಖ್ಯೆ ಹೆಚ್ಚಿಸುವುದು ನೈಸರ್ಗಿಕವಾಗೇ ಆಗಬೇಕಾದ ಕಾರ್ಯ.  ಅವುಗಳ ಆವಾಸ ಸ್ಥಾನಕ್ಕೆ ರಕ್ಷಣೆ ಕೊಟ್ಟರೆ ತಾನೇತಾನಾಗಿ ಆಗುತ್ತದೆ. 

ಮತ್ತೆ, ಕಾಡು ಪ್ರಾಣಿಗಳಿಗೆ ನೀರು ಕೊಡೋದು ಸರೀನಾ? 
 ಈ ವರ್ಷ ಬರ ಇದೆ. ನೀರಿಲ್ಲ. ನೀರು ಕೊಟ್ಟಿರಿ. ಆದರೆ ಮುಂದಿನ ಐದು ವರ್ಷ ಏನು ಮಾಡ್ತೀರಿ?  ಕಾಡಲ್ಲಿ ಪ್ರಾಣಿಗಳ ಸಂಖ್ಯೆಯನ್ನು ಹತೋಟಿಯಲ್ಲಿ ಇಡೋದು ನಿಸರ್ಗ.  ಊಟ, ತಿಂಡಿ, ನೀರು ಇವೆಲ್ಲದರ ಜವಾಬ್ದಾರಿಯನ್ನು ಅದೇ ನೋಡಿಕೊಳ್ಳುತ್ತದೆ. ಇದರಲ್ಲಿ ವ್ಯತ್ಯಾಸವಾದಾಗ ಪ್ರಾಣಿಗಳ ಸಂಖ್ಯೆ ಇಳಿಮುಖವಾಗೋದು ನಿಸರ್ಗ ನಿಯಮ.  ಇಷ್ಟು ದೊಡ್ಡ ಕಾಡಲ್ಲಿ ಇಷ್ಟೇ ಹುಲಿ, ಚಿರತೆ ಇರಬೇಕು ಅನ್ನೋದು ಪ್ರಕೃತಿ ನಿಯಮವಿದೆ. ಆದರೆ ದರ್ಶಿನಿಯಂತೆ ಊಟ, ನೀರು ಕೊಟ್ಟು ಜಾಸ್ತಿ ಮಾಡಿದರೆ ಹೊಣೆ ಯಾರು? ಒಂದು ಮನೆಯ ಮೇಲೆ ಇನ್ನೊಂದು ಮನೆ ಕಟ್ಟಿದ ರೀತಿಯಲ್ಲಿ, ಒಂದು ಆನೆ ಮೇಲೆ ಇನ್ನೊಂದು ಆನೆ ಕೂರಿಸಕ್ಕೆ ಆಗುತ್ತಾ? ಇದು ಅವೈಜ್ಞಾನಿಕ. 

 ನಮ್ಮಲ್ಲಿ ಸಂರಕ್ಷಣೆಗೆ ವಿಷನ್‌ ಇಲ್ವಾ?
ಖಂಡಿತ ಇಲ್ಲ. ನಮ್ಮ ರಾಜ್ಯದ ವನ್ಯಜೀವಿ ಸಂರಕ್ಷಣೆಗೆ ಮಂದಿನ 20 ವರ್ಷದ ವಿಷನ್‌ ಡಾಕ್ಯುಮೆಂಟ್‌ ಇದೆಯಾ? ಇಲ್ಲ. ಹಿಂದೆ ಯಾವ್ಯಾವ ಪ್ರಾಣಿಗಳು ಎಷ್ಟೆಷ್ಟು ಇದ್ದವು, ವರ್ಷಕ್ಕೆ ಶೇಕಡವಾರು ಎಷ್ಟು ಜಾಸ್ತಿಯಾಗಿವೆ, ಮುಂದಿನ ಎರಡು ದಶಕದಲ್ಲಿ ಎಷ್ಟಾಗಬಹುದು? ತಿಳಿದಿದೆಯಾ? ಇಲ್ಲ.  ಆದರೆ ನಗರವನ್ನು ಹೇಗೆ ಅಭಿವೃದ್ಧಿ ಗೊಳಿಸಬೇಕು ಅನ್ನೋದು ವಿಷನ್‌ ಡಾಕ್ಯುಮೆಂಟ್‌ಅನ್ನು ಮುತುವರ್ಜಿಯಿಂದ ಮಾಡಿದ್ದಾರೆ. ಇದೇ ದುರಂತ. 

Advertisement

ನಾವು ಇವತ್ತಿನ ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ.  ಮುಂದಿನ ಐದು ವರ್ಷದ ಬಗ್ಗೆ ಚಿಂತನೆ ಮಾಡಬೇಕು. ಅದು ಆಗುತ್ತಿಲ್ಲ. ವನ್ಯಜೀವಿ ಸಂರಕ್ಷಣೆ ಬೇರೆ ಬೇರೆ ರೀತಿ ಇರುತ್ತದೆ. ಹುಲಿ ರಕ್ಷಣೆಗೆ ಕೈಗೊಂಡ ಕ್ರಮ, ಆಮೆ ರಕ್ಷಣೆಗೆ ಆಗೋಲ್ಲ, ಆಮೆಯದ್ದು ಮಂಗಟ್ಟೆಗೆ ಆಗದೇ ಇರಬಹುದು.  ಸಂರಕ್ಷಣೆ ಅವಲಂಬಿತ ಪ್ರಬೇಧಗಳ ಅಗತ್ಯಕ್ಕೆ ತಕ್ಕಂತೆ  ಬೇರೆ ಬೇರೆ ಇರುತ್ತದೆ.  

ಕಾನೂನಿನ ಮೂಲಕ ಸಂರಕ್ಷಣೆ ಸಾಧ್ಯವೇ?
 ಈ 30-40 ವರ್ಷದಲ್ಲಿ ಬಹಳಷ್ಟು ಕಲಿತಿದ್ದೇವೆ. ಮುಂದೆ ಕಲಿತಿರುವ, ಹಿಂದೆ ಆಗಿರುವ ತಪ್ಪುಗಳನ್ನು ಮತ್ತೆ ಪುನರಾವರ್ತನೆ ಮಾಡದೆ ಹೇಗೆ ನಿಭಾಯಿಸಬೇಕು ಅನ್ನೋದನ್ನು ನೋಡಬೇಕು. ಕೆಲವಕ್ಕೆ ಕಾನೂನು ಬೇಕು, ಕೆಲವಕ್ಕೆ ಬೇಡ. ಇನ್ನೂ ಕೆಲ ಸಂದರ್ಭಗಳಲ್ಲಿ ಎರಡನ್ನೂ ಬೆರೆಸಿ ಪ್ರಯೋಗಿಸಬೇಕಾಗುತ್ತದೆ. ಹಾಗಾಗಿ ಎಲ್ಲಾ ವನ್ಯಜೀವಿ ಪ್ರಬೇಧಗಳನ್ನು ಒಂದೇ ದೃಷ್ಟಿಕೋನದಿಂದ ನೋಡುವುದಕ್ಕಾಗಲ್ಲ.  ಸಮಾಜ ಹೇಗೋ, ನಿಸರ್ಗ ಕೂಡ ಹಾಗೇ  ಬದಲಾಗುತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು, ಅರ್ಥವಾಗಿರುವುದನ್ನು ಅಳವಡಿಸಿಕೊಳ್ಳಬೇಕು. ಈ ಎಲ್ಲದಕ್ಕೂ ವ್ಯವಧಾನ ಇರಬೇಕು. 

ಹಲ್ಲಿಗೆ, ಕಣ್ಣಿಗೆ ಒಬ್ಬೊಬ್ಬ ಡಾಕ್ಟರಂತೆ, ಆನೆಗೆ, ಹುಲಿಗೆ ಅಂತ ಒಬ್ಬೊಬ್ಬ ಸಂರಕ್ಷ ಇದ್ದಾರೆ. ಹೀಗೆ ವಿಘಟಿತವಾಗಿ ಸಂರಕ್ಷಿಸಲು ಸಾಧ್ಯವೇ?
 ಜಿಂಕೆ, ಹುಲಿ, ಚಿರತೆ ಯಾವುದೇ ಹೆಸರಲ್ಲಿ ಸಂರಕ್ಷಣೆಗೆ ಮುಂದಾದರೂ ಮೊದಲು ಅದರ ಆವಾಸದ, ಆಹಾರ ಸಂರಕ್ಷಣೆ ಮಾಡುವುದು ಮೂಲಭೂತವಾದ ಅತ್ಯಗತ್ಯ.  ವಿಜ್ಞಾನದ ವಿಚಾರಕ್ಕೆ ಬಂದಾಗ ಜಿಂಕೆಯ, ಕಾಳಿಂಗ ಸರ್ಪದ ವೈಜ್ಞಾನಿಕ ಸಂರಕ್ಷಣೆ ಬೇರೆ ಬೇರೆ.  ಎಲ್ಲದಕ್ಕೂ ಒಂದೇ ವಿಧಾನ ಅಳವಡಿಸಿಕೊಳ್ಳುವುದಕ್ಕಾಗಲ್ಲ. ಅವರವರ ಅನುಭವದ ಮೇಲೆ, ಪರಿಸರ, ಪ್ರಾಣಿಗಳ ಜೀವನಶೈಲಿಯ ಮೇಲೆ ಸಂರಕ್ಷಣೆ ಕಾರ್ಯ ಮಾಡ್ತಾರೆ. 

 ಸಂರಕ್ಷಕರಲ್ಲಿ ಒಗ್ಗಟ್ಟು ಇದೆಯಾ? 
 ಈ ವಿಚಾರದಲ್ಲಿ ತಪ್ಪು ಮಾಡ್ತಾ ಇದ್ದೀವಿ ಅನಿಸುತ್ತಿದೆ. ಎಲ್ಲರೂ ಒಟ್ಟಿಗೆ ಒಗ್ಗಟ್ಟಿಂದ ಕೆಲಸ ಮಾಡುತ್ತಿಲ್ಲ. ಒಟ್ಟಿಗೆ ಕೆಲಸ ಮಾಡೋದನ್ನು ಕಲಿತಿಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಒಳ್ಳೆ ಫ‌ಲಿತಾಂಶ ಸಿಗುತ್ತದೆ. ವನ್ಯಜೀವಿ ಸಂರಕ್ಷಣೆಯ ಬಗ್ಗೆ ಕಾರ್ಯಕ್ರಮದಲ್ಲಿ ಎಲ್ಲರೂ ತಾವೇ ಏನೇನೆಲ್ಲ ಮಾಡಿದ್ದೇವೆ ಅನ್ನೋ ಸಾಧನೆಯನ್ನು ಗುಡ್ಡೆ ಹಾಕುತ್ತಾರೆ.  ಆದರೆ ಕೂತು ಚರ್ಚೆ ಮಾಡೋಲ್ಲ.  ಸಂರಕ್ಷಣೆ ಬಗ್ಗೆ ನಾವೇನು ಮಾಡಬಹುದು, ನೀವೇನು ಮಾಡಬಹುದು? ಹೀಗೆ ಜವಾಬ್ದಾರಿಗಳ ಹಂಚಿಕೆ ಮಾಡೋಲ್ಲ.  ಹಿರಿಯರು ಕಿರಿಯರಿಗೆ ಬೆಂಬಲ ಕೊಡೋದು ಇಲ್ಲಿ ಆಗ್ತಿಲ್ಲ ಅನಿಸುತ್ತಿದೆ.  ಒಂದು ರೀತಿ ಒಗ್ಗಟ್ಟು ಇಲ್ಲದ ಮನೆ ರೀತಿ ಕಾಣುತ್ತಿದೆ. 

  ಇಂಟರ್‌ನೆಟ್‌, ಫೇಸ್‌ ಬುಕ್‌ ಯುಗದಲ್ಲಿ ಜನ ವನ್ಯಜೀವಿ ಜಪ ಮಾಡ್ತಾ ಇದ್ದಾರಲ್ಲ?
  ವನ್ಯಜೀವಿ ಸಂರಕ್ಷಣೆಯನ್ನು ಫೇಸ್‌ಬುಕ್‌, ಟ್ವಿಟರ್‌, ವ್ಯಾಟ್ಸಪ್‌ ಮೂಲಕ ಮಾಡೋಕೆ ಆಗೋಲ್ಲ. ಇಂಟರ್‌ನೆಟ್‌ನಲ್ಲಿ ಅಗಾಧವಾದ ವನ್ಯಜ್ಞಾನ ಇರಬಹುದು. ಆದರೆ ಅನುಭವ, ಫೀಲ್ಡಿಗೆ ಇಳಿದಾಗಲೇ ಆಗುವುದು. ಕಾಡನ್ನು ನೋಡಿ, ತಿಳಿದು, ಅನುಭವಿಸಿ ಅರ್ಥ ಮಾಡಿಕೊಳ್ಳಬೇಕು. ಇದು ಒಂದೇ ದಾರಿ ಇರೋದು. ಇವತ್ತು ಲಕ್ಷಾಂತರ ಜನ ಉತ್ಸಾಹಿಗಳು ಇದ್ದಾರೆ. ಇದಕ್ಕೆ ತಕ್ಕಂತೆ ವನ್ಯಜೀವಿ ಸಂರಕ್ಷಣೆ ಆಗುತ್ತಿಲ್ಲ ಎನಿಸುತ್ತಿದೆ. 

 ಅರಣ್ಯ ವಿಸ್ತರಣೆ ಮಾಡೋಕೆ ಸಾಧ್ಯವಿಲ್ಲವಾ?
 ಈಗಾಗಲೆ  ಮಾಡಿದ್ದೇವೆ. ನಮ್ಮ ಸರ್ಕಾರ, ಅಧಿಕಾರಿಗಳ ನೆರವಿನಿಂದ 23 ಕಾಯ್ದಿಟ್ಟ ಅರಣ್ಯ ಪ್ರದೇಶಗಳನ್ನು ವನ್ಯಜೀವಿಧಾಮಗಳಾಗಿ ಪರಿವರ್ತಿಸಿದ್ದೇವೆ. ಇದರಿಂದ ಪ್ರಾಣಿಗಳ ನೆಲೆ ವಿಸ್ತಾರಗೊಂಡಿರುವದಲ್ಲದೇ, ನೆಮ್ಮದಿಯಾಗಿರುಂತಾಗಿದೆ. ಮುಂಬರುವ ದಿನಗಳಲ್ಲಿ ಈ ಕೆಲಸ ಮುಂದುವರಿಯುವ ಭರವಸೆ ಇದೆ. 

 ಒಂದು ಪಕ್ಷ ಇದೇ ಪರಿಸ್ಥಿತಿ ಮುಂದುವರಿದರೆ ಗತಿ ಏನು?
 ಇತ್ತೀಚೆಗಷ್ಟೇ ದಾವಣಗೆರೆ ಜಗಳೂರಿನ ರಂಗಯ್ಯನ ದುರ್ಗದಲ್ಲಿ ಚಿರತೆಯನ್ನು ಸುಟ್ಟುಹಾಕಿದ್ದಾರೆ. ಇಪ್ಪತ್ತು ವರ್ಷದ ಹಿಂದೆ ಇಂಥ ಪ್ರಸಂಗ ನೋಡಿದ್ದಿರ? ಇಲ್ಲ.  ಆಗ ಜನ ಪಾಪ, ಪ್ರಾಣಿ ಬದುಕಿ ಕೊಳ್ಳಲಿ ಬಿಡ್ರೀ ಅನ್ನೋರು. ಈಗ ಹಾಗಿಲ್ಲ. ಮುಂದೆ ಇದೇ ಪರಿಸ್ಥಿತಿ ಕಾಯ್ದು ಕೊಂಡರೆ ಅಲ್ಲೋಲ ಕಲ್ಲೋಲ ಆಗುತ್ತೆ.  ಜನ ವನ್ಯಜೀವಿ ಸಂರಕ್ಷಣೆ ಅಂದರೆ ಸಾಕು ಹೊಡೆಯೋಕೆ ಶುರುಮಾಡುತ್ತಾರೆ ಅಷ್ಟೇ.  ಇದನ್ನೆಲ್ಲ ನೀಗಿಸಲು ನಾಯಕತ್ವ, ದೂರದೃಷ್ಟಿ ಬೇಕು. 

 ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next