ಬೆಂಗಳೂರು: ನಟಿ ಸಂಜನಾ ಗಲ್ರಾನಿ ಇದೀಗ ಕ್ಯಾಬ್ ಚಾಲಕನ ಜತೆ ಕಿರಿಕ್ ಮಾಡಿಕೊಂಡು ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ. ಓಲಾ ಕ್ಯಾಬ್ ಚಾಲಕ ಸುಸೈ ಮಣಿ ಎಂಬವರು ಸಂಜನಾ ಗಲ್ರಾನಿ ವಿರುದ್ಧ ರಾಜರಾಜೇಶ್ವರಿನಗರ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಮೇಲೆ ತನಿಖೆ ಕೈಗೊಂಡಿದ್ದು, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಚಿತ್ರೀಕರಣ ಸ್ಥಳಕ್ಕೆ ಹೋಗಲು ಸಂಜನಾ ಓಲಾ ಕ್ಯಾಬ್ ಬುಕ್ ಮಾಡಿದ್ದರು. ಇಂದಿರಾನಗರದಿಂದ ಕೆಂಗೇರಿಗೆ ಕ್ಯಾಬ್ ಬುಕ್ ಮಾಡಬೇಕಿತ್ತು. ಬದಲಿಗೆ ರಾಜರಾಜೇಶ್ವರಿನಗರಕ್ಕೆ ಬುಕ್ ಮಾಡಿದ್ದರು. ಕ್ಯಾಬ್ ಬಂದ ಬಳಿಕ ತಾನು ಕೆಂಗೇರಿಗೆ ಹೊರಡಬೇಕು ಎಂದು ಸಂಜನಾ ಹೇಳಿದ್ದಾರೆ. ಚಾಲಕ ಲೊಕೇಷನ್ ಬದಲಾಯಿಸಲು ತಿಳಿಸಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದು ಸಂಜನಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಚಾಲಕ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ;- ಲಖೀಂಪುರ ಭೇಟಿಗೆ ಅವಕಾಶ ನಿರಾಕರಣೆ : ರಾಹುಲ್ ಗಾಂಧಿ ಕಿಡಿ
ಟ್ವೀಟ್‌ನಲ್ಲಿ ಸಂಜನಾ ಆಕ್ರೋಶ: ಈ ಘಟನೆಯನ್ನು ನಟಿ ಸಂಜನಾ ಟ್ವೀಟ್ ಮಾಡಿ ಓಲಾ ಕ್ಯಾಬ್ ನಂಬರ್ ಮತ್ತು ಹೆಸರು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಎ.ಸಿ. ಹೆಚ್ಚು ಮಾಡುವಂತೆ ಹೇಳಿದ್ದಕ್ಕೆ ಚಾಲಕ ಉಡಾಫೆ ಉತ್ತರ ನೀಡಿದರು. ಕ್ಯಾಬ್‌ನ ಕಿಟಕಿ ಸಹ ಸರಿಯಾಗಿ ಇರಲಿಲ್ಲ.
ಪೂರ್ಣ ಪ್ರಯಾಣದ ಹಣ ನೀಡಿದರೂ ಇಂತಹ ಕಾರನ್ನು ಏಕೆ ಒದಗಿಸುತ್ತೀರಿ? ಎಂದು ಓಲಾ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ. ಸಂಜನಾ ಹಾಗೂ ಚಾಲಕ ಇಬ್ಬರನ್ನೂ ಠಾಣೆಗೆ ಕರೆಸಿರುವ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿ ಕಳಿಸಿದ್ದರಿಂದ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.