ನವದೆಹಲಿ: ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್‌ರನ್ನು ವಿವಾಹವಾಗಿರುವ ಭಾರತದ ವಿಶ್ವವಿಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಮತ್ತೂಂದು ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ.
ಕಾಶ್ಮೀರ ಘಟನೆಗೆ ಸಾನಿಯಾ ಪ್ರತಿಕ್ರಿಯಿಸಿಲ್ಲ ಎಂದು ಅಲ್ಲಲ್ಲಿ ಧ್ವನಿಗಳು ಹೊರಡುತ್ತಿದ್ದಂತೆ, ಸುದೀರ್ಘ ಟ್ವೀಟ್‌ನಲ್ಲಿ (ಚಿತ್ರರೂಪದಲ್ಲಿ) ಘಟನೆಯನ್ನು ಖಂಡಿಸಿದ್ದಾರೆ. ಅದರ ಬೆನ್ನಲ್ಲೇ ಸಾನಿಯಾ, ಪಾಕಿಸ್ತಾನದ ವಿರುದ್ಧ ಸೊಲ್ಲೆತ್ತಿಲ್ಲ ಎಂಬ ಅಪಸ್ವರ ಕೇಳಿಬಂದಿದೆ.
ಟ್ವೀಟ್‌ನಲ್ಲಿ ಸಾನಿಯಾ ಹೇಳಿದ್ದೇನು?: ಕಾಶ್ಮೀರ ಘಟನೆಗೆ ತಮ್ಮ ಸಂತಾಪವನ್ನು ಸಾನಿಯಾ ತುಸು ದೀರ್ಘವಾಗಿಯೇ ಪ್ರಕಟಿಸಿದ್ದಾರೆ. ಅಲ್ಲದೇ ತಮ್ಮನ್ನು ಅನುಮಾನಿಸುವವರ ವಿರುದ್ಧ ಕಿಡಿಕಾರಿದ್ದಾರೆ. “ತಾರೆಯರು ಘಟನೆಯನ್ನು ಸಾಮಾಜಿಕ ತಾಣದಲ್ಲಿ ಖಂಡಿಸಬೇಕು ಎನ್ನುವವರಿಗಾಗಿ ನಾನು ಈ ಪೋಸ್ಟ್ ಮಾಡಿದ್ದೇನೆ. ನಾವು ಸಾಮಾಜಿಕ ತಾಣದಲ್ಲಿ ದೇಶಭಕ್ತಿಯನ್ನು, ನಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಬಯಸುತ್ತಾರೆ. ಯಾಕೆ? ಕಾರಣ ನಾವು ತಾರೆಯರು. ಕೆಲವು ಪ್ರಕ್ಷುಬ್ಧ ಮನಸುಗಳಿಗೆ ತಮ್ಮ ಸಿಟ್ಟನ್ನು ಎಲ್ಲಿ ತೋರಿಸಬೇಕೆಂದು ಗೊತ್ತಾಗುವುದಿಲ್ಲ. ಆದ್ದರಿಂದ ಸಿಗುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ದ್ವೇಷವನ್ನು ಬಿತ್ತಬೇಕೆ’? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
“ಪುಲ್ವಾಮ ಘಟನೆ ಭಾರತದ ಪಾಲಿಗೆ ಕಪ್ಪುದಿನ. ಇಂತಹ ಘಟನೆ ಭಾರತದಲ್ಲಿ ಮತ್ತೆಂದೂ ನಡೆಯದಿರಲಿ ಎಂದು ನಾನು ಬಯಸುತ್ತೇನೆ. ನೊಂದವರ ಜೊತೆಗೆ ನಾನಿದ್ದೇನೆ. ನಾನು ನನ್ನ ಕರ್ತವ್ಯ ಮಾಡುತ್ತೇನೆ, ನೀವು ನಿಮ್ಮ ಕೆಲಸ ಮಾಡಿ. ದಯವಿಟ್ಟು ದ್ವೇಷ ಬಿತ್ತುವ ಕೆಲಸ ಮಾಡಬೇಡಿ’ ಎಂದು ಸಾನಿಯಾ ಮನವಿ ಮಾಡಿದ್ದಾರೆ. ಈ ಸುದೀರ್ಘ ಪೋಸ್ಟ್‌ನಲ್ಲಿ ಎಲ್ಲೂ ಅವರು ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದಿರುವುದಕ್ಕೆ, ಅದರ ವಿರುದ್ಧ ಕಿಡಿಕಾರದಿರುವುದಕ್ಕೆ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಸಾನಿಯಾ ಸಾಮಾಜಿಕ ತಾಣದಲ್ಲಿ ತೀವ್ರ ಟೀಕೆಗೊಳಗಾಗಿದ್ದರು. ದೇಶದ ಬಗ್ಗೆ ಅವರ ಬದ್ಧತೆಯನ್ನು ಪ್ರಶ್ನಿಸಲಾಗಿತ್ತು. ಕೆಲವು ಕಾಲ ಸಾನಿಯಾ ಸಾಮಾಜಿಕ ತಾಣದಿಂದಲೇ ಹೊರಗುಳಿದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.