Advertisement

ಸಂಗಬೆಟ್ಟು: ಬಹುಗ್ರಾಮ ಕುಡಿಯುವ ನೀರಿನ ಯೋಜನೆ

11:06 AM Apr 02, 2019 | Team Udayavani |
ಪುಂಜಾಲಕಟ್ಟೆ : ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಾಪಿತ ವಾಗಿದ್ದರೂ, ಈ ಬಾರಿಯ ತಾಪಮಾನ ಏರಿಕೆಗೆ  ನೀರಿನ ಮೂಲವೇ ಬತ್ತಿ ಹೋಗುವ ಅಪಾಯವಿರುವುದರಿಂದ ಈ ಯೋಜನೆ ಅವಲಂಬಿತ ಗ್ರಾಮಗಳು ನೀರಿನ ಬರ ಎದುರಿಸಬೇಕಾದ ಅಪಾಯದಲ್ಲಿವೆ.
ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಂಡಿದ್ದರೂ ಕೂಡ ಯೋಜನೆಯ ರೇಚಕ ಸ್ಥಾವರ (ಜಾಕ್‌ ವೆಲ್‌) ಇರುವ ಭಾಗದಲ್ಲಿ ನದಿಯಲ್ಲಿ ನೀರಿಲ್ಲದೆ ಇರುವುದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯನ್ನು ನಂಬಿರುವ ಇತರ ಗ್ರಾಮ ಪಂಚಾಯತ್‌ಗಳು ನೀರಿನ ಬರ ಎದುರಿಸುತ್ತಿವೆ.
ಕೊಳವೆಬಾವಿಗೆ  ಅವಲಂಬನೆ
ಸಂಗ ಬೆಟ್ಟು ಮತ್ತಿತರ ಗ್ರಾಮ ಪಂಚಾಯತ್‌ಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಸಂಗಬೆಟ್ಟು ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಬಹುಗ್ರಾಮ ಕುಡಿ ಯುವ ನೀರಿನ ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ರುವ ಹಿನ್ನೆಲೆಯಲ್ಲಿ ನದಿ ನೀರನ್ನೇ ನಂಬಿಕೊಂಡಿರುವ ಗ್ರಾಮ ಗಳ ಜನರು ಮತ್ತೆ ಕೊಳವೆ ಬಾವಿಯನ್ನೆ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಜನೆ 15 ಗ್ರಾಮಗಳಿಗೆ ವಿಸ್ತರಣೆ
ಸುಮಾರು 32.90 ಕೋಟಿ ರೂ. ವೆಚ್ಚದಲ್ಲಿ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಾಪನೆಗೊಂಡಿತ್ತು. ಸಂಗಬೆಟ್ಟು, ಕಪ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು, ರಾಯಿ, ಕೊಯಿಲ, ಅರಳ, ಚೆನ್ನೈತ್ತೋಡಿ, ಅಜ್ಜಿಬೆಟ್ಟು, ಪಿಲಿಮೊಗರು, ಪಂಜಿಕಲ್ಲು, ಮೂಡುನಡುಗೋಡು, ಬುಡೋಳಿ, ಅಮಾrಡಿ, ಕುರಿಯಾಳ ಹೀಗೆ 15 ಗ್ರಾಮ ಗಳಿಗೆ ಯೋಜನೆ ಯನ್ನು ವಿಸ್ತರಿಸಲಾಗಿದೆ. ಇದರಿಂದ ಈ ಭಾಗದ ಜನರ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಕಾಣಬೇಕಿತ್ತು.
ಬತ್ತಿದ ಅಂತರ್ಜಲ
ಫಲ್ಗುಣಿ ನದಿ ಯಲ್ಲಿ ನೀರಿನ ಕೊರತೆ ಯಾದುದರಿಂದ ಈ ಯೋಜನೆಯಲ್ಲಿ ನೀರು ಸರಬರಾಜುಗೊಳ್ಳುತ್ತಿಲ್ಲ. ಸಂಗ ಬೆಟ್ಟು ಗ್ರಾಮಪಂಚಾಯತ್‌ ವ್ಯಾಪ್ತಿಯಲ್ಲಿ 9 ಸರಕಾರಿ ಕೊಳವೆಬಾವಿಗಳು, 4 ಸರಕಾರಿ  ಬಾವಿಗಳಿದ್ದು ಎಲ್ಲವೂ ಸುಸ್ಥಿತಿಯಲ್ಲಿವೆ. 4 ಕಡೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ಆ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಆದರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆರೆ ಬಳಿ ಇದ್ದ ಒಂದು ಕೆರೆ ಯಾವತ್ತೋ ಮರೆಯಾಗಿದೆ. ಇತರ ಭಾಗದಲ್ಲಿ ಯಾವುದೇ ಕೆರೆಗಳಿಲ್ಲ. ಹಾಗಾಗಿ ಅಂತರ್ಜಲ ಬತ್ತಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ದೊರಕದ ಹಿನ್ನೆಲೆಯಲ್ಲಿ ಜನತೆ ಸದ್ಯ ಹಿಂದಿನಂತೆ ಕೊಳವೆಬಾವಿ ನೀರನ್ನೇ ಆಶ್ರಯಿಸಬೇಕಾಗಿದೆ. ಹಲವರು ಇತರರ ಖಾಸಗಿ ಬಾವಿ, ಕೊಳವೆಬಾವಿಯನ್ನು ಆಶ್ರಯಿಸಿದ್ದಾರೆ.
ಹಣಕಾಸು ಯೋಜನೆ  14ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿನ ಅಭಿವೃದ್ಧಿ ಕಾರ್ಯ ಯೋಜನೆಗಳಿಗೆ 3,03,059 ರೂ.ಗಳನ್ನು ಮೀಸಲಿರಿಸಲಾಗಿದೆ.  ಇನ್ನೊಂದು ಕಿರು ಅಣೆಕಟ್ಟು  ಫಲ್ಗುಣಿ ನದಿಗೆ ಕೆಳಭಾಗದಲ್ಲಿ ಇನ್ನೊಂದು ಕಿರು ಅಣೆಕಟ್ಟು ನಿರ್ಮಿಸಿದಲ್ಲಿ ಬೇಸಗೆಯಲ್ಲಿಯೂ ನೀರು ಲಭ್ಯವಾ ಗಬಹುದು ಎಂಬ ಚಿಂತನೆ ಇದೆ.
ಫ‌ಲ್ಗುಣಿಗೆ ಕಿಂಡಿ ಅಣೆಕಟ್ಟು
ಬಂಟ್ವಾಳ-ಮೂಡುಬಿದಿರೆ ತಾಲೂಕುಗಳ ಗಡಿಭಾಗದಲ್ಲಿನ ಪುಚ್ಚೆಮೊಗರು ಸೇತುವೆ ಬಳಿ ಫಲ್ಗುಣಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿಂದ ಮೂಡುಬಿದಿರೆಗೆ ನೀರು ಸರಬರಾಜುಗೊಳ್ಳುತ್ತದೆ. ಕಿಂಡಿ ಅಣೆಕಟ್ಟಿನ ಕೆಳ ಭಾಗದಲ್ಲಿ ಸಂಗಬೆಟ್ಟು ಯೋಜನೆಗೆ ರೇಚಕ ಸ್ಥಾವರ ನಿರ್ಮಿಸಲಾಗಿದೆ. ಮೇಲಿನ ಗುಡ್ಡದಲ್ಲಿ ಶುದ್ಧೀಕರಣ ಘಟಕವಿದೆ. ಯೋಜನೆಯ ಫಲಾನುಭವಿ ಗ್ರಾಮಗಳಲ್ಲಿ ನಿರ್ಮಿಸಲಾದ ಓವರ್‌ಹೆಡ್‌ ಟ್ಯಾಂಕ್‌ ಮೂಲಕ ಇಲ್ಲಿಂದ ನೀರು ಸರಬರಾಜುಗೊಳ್ಳುವ ವ್ಯವಸ್ಥೆ ನಡೆಸಲಾಗಿತ್ತು. ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆರೆಬಳಿ, ಸಿದ್ದಕಟ್ಟೆ, ಮಂಚಕಲ್ಲು, ಕಲ್ಕುರಿ, ಮುಗೇರು ಕಡೆಗಳಲ್ಲಿ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ ಬೇಸಗೆಯಲ್ಲಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಇಳಿಕೆಯಾಗಿ ನೀರಿನ ಕೊರತೆಯಾಗಿದೆ. ಪ್ರಸ್ತುತ ಈ ಭಾಗದಲ್ಲಿ ಹೂಳು ತೆಗೆದು ಹೊಂಡ ಮಾಡಿ ನೀರು ತುಂಬುವಂತೆ ಮಾಡಲಾಗುತ್ತಿದೆ. ಆದರೂ ಹೆಚ್ಚು ದಿನ ನೀರು ಲಭ್ಯವಾಗುವುದಿಲ್ಲ ಎಂಬ ಆತಂಕವಿದ್ದು, ಗ್ರಾಮಸ್ಥರಿಗೆ ನೀರಿನ ಬರದ ಭೀತಿ ಎದುರಾಗಿದೆ.
 ಮುಂದಕ್ಕೆ ನೀರು ಸರಬರಾಜು ಕಷ್ಟ
ಸಂಗಬೆಟ್ಟುವಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮಸ್ಥರಿಗೆ ಇದುವರೆಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ ನದಿಯಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ಮುಂದಕ್ಕೆ ಇಲ್ಲಿಂದ ನೀರಿನ ಸರಬರಾಜು ಅಸಾಧ್ಯವಾಗಬಹುದು. ಕೊಳವೆಬಾವಿ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಕಳೆದ ವರ್ಷ ಇಂತಹ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ.
 - ಸಿಲ್ವಿಯಾ ಫೆರ್ನಾಂಡಿಸ್‌ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಸಂಗಬೆಟ್ಟು
 ರತ್ನದೇವ್‌ಪುಂಜಾಲಕಟ್ಟೆ
Advertisement

Udayavani is now on Telegram. Click here to join our channel and stay updated with the latest news.

Next