ನನಗೆ ಮೊದಲಿನಿಂದಲೂ ಸಾಕು ಪ್ರಾಣಿಗಳು ಅಂದ್ರೆ ತುಂಬ ಇಷ್ಟ. ಚಿಕ್ಕ ವಯಸ್ಸಿನಿಂದಲೂ ಬೆಕ್ಕು, ನಾಯಿಗಳ ಜೊತೆಗೆ ಆಟವಾಡಿಕೊಂಡು ಬೆಳೆದವಳು ನಾನು. ಈಗ ನಮ್ಮ ಮನೆಯಲ್ಲಿ “ಸಿಂಬ’ ಎನ್ನುವ ಹೆಸರಿನ ಕಾಕರ್ ಸ್ಪಾನಿಯಲ್ ಎಂಬ ಅಮೆರಿಕನ್ ತಳಿಯ ಗಂಡು ನಾಯಿ ಇದೆ. “ಸಿಂಬ’ ಕಳೆದ ವರ್ಷ ನನ್ನ ಬರ್ತ್‌ಡೇ ದಿನದಂದೇ ನಮ್ಮ ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದವನು, ಇವತ್ತು ನಮ್ಮ ಫ್ಯಾಮಿಲಿಯಲ್ಲಿ ಒಬ್ಬನಾಗಿದ್ದಾನೆ. “ಸಿಂಬ’ನನ್ನು ನಮ್ಮ ಮನೆಯಲ್ಲಿ ಒಬ್ಬ ಎಂದೇ ಎಲ್ಲರೂ ಟ್ರೀಟ್ ಮಾಡುತ್ತೇವೆ. “ಸಿಂಬ’ ತನ್ನ ಮನಸ್ಸಿನ ಭಾವನೆಗಳನ್ನು ತನ್ನ ಕಣ್ಣುಗಳಲ್ಲೇ ತಿಳಿಸುತ್ತಾನೆ. ನಮ್ಮ ಭಾವನೆಗಳನ್ನು ಕೂಡ ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡು ನಮಗೆ ಸ್ಪಂದಿಸುತ್ತಾನೆ.
ಅವನ ಜೊತೆ ಮನೆಯಲ್ಲಿ ಯಾರಾದರೂ ಒಬ್ಬರು ಇರಲೇಬೇಕು. ತುಂಬ ಟ್ರೇನ್ ಮಾಡದೆಯೇ ಎಲ್ಲವನ್ನೂ ಕಲಿತುಕೊಂಡಿದ್ದಾನೆ. ಅವನಿಗೆ ಅವನದ್ದೇ ಆದ ಲೈಫ್ಸ್ಟೈಲ್ ಇದೆ. ಮನೆಗೆ ಯಾರೇ ಬಂದರೂ ಅವರನ್ನು ಮೊದಲು “ಸಿಂಬ’ ವೆಲ್‌ಕಮ್ ಮಾಡುತ್ತಾನೆ.
“ಸಿಂಬ’ ನಾನ್‌ವೆಜ್ ಪ್ರಿಯ. ಅವನಿಗೆ ಆಗಾಗ್ಗೆ ಫುಡ್‌ನಲ್ಲಿ ಚಿಕನ್ ಕೊಡಬೇಕು. ದಿನಕ್ಕೆ ಮೂರು ಬಾರಿ ಅವನನ್ನು ಹೊರಗೆ ಕರೆದುಕೊಂಡು ಹೋಗಲೇ ಬೇಕು. ತುಂಬಾ ಶಿಸ್ತುಬದ್ಧವಾಗಿರುವ ಮತ್ತು ಅಷ್ಟೇ ಪ್ರೀತಿ ಕೊಡುವ “ಸಿಂಬ’ನ ಜೊತೆ ದಿನನಿತ್ಯ ಒಂದಷ್ಟು ಸಮಯ ಕಳೆಯದಿದ್ದರೆ, ಮನಸ್ಸಿಗೆ ಸಮಾಧಾನವಿಲ್ಲ. ಎಷ್ಟೇ ಕೆಲಸದ ಒತ್ತಡವಿದ್ದರೂ ಮನೆಗೆ ಬಂದಾಗ ಒಮ್ಮೆ “ಸಿಂಬ’ನನ್ನು ನೋಡಿದಾಗ ಅವನನ್ನು ಹಗ್ ಮಾಡಿದಾಗ ರಿಲ್ಯಾಕ್ಸ್ ಆಗುತ್ತದೆ.
ನನ್ನ ಪ್ರಕಾರ ಯಾವುದೇ ನಾಯಿ ಯನ್ನು ದುಡ್ಡು ಕೊಟ್ಟು ತೆಗೆದುಕೊಳ್ಳಬಾರದು. ಅದು ನಮ್ಮ ಹತ್ತಿರ ಬರಬೇಕು ಅಂತಿದ್ರೆ, ಋಣವಿದ್ದರೆ ಖಂಡಿತಾ ನಮಗೆ ಸಿಕ್ಕೇ ಸಿಗುತ್ತವೆ ಎಂಬುದು ನನ್ನ ನಂಬಿಕೆ. “ಸಿಂಬ’ ಕೂಡ ಹಾಗೆಯೇ ನನಗೆ ಸಿಕ್ಕಿದ. ಚಿಕ್ಕ ವಯಸ್ಸಿನಲ್ಲಿ ನಾವು ಅವುಗಳನ್ನು ಪ್ರೀತಿಯಿಂದ ನೋಡಿಕೊಂಡರೆ, ದೊಡ್ಡದಾದ ಮೇಲೆ ಅವು ನಮ್ಮನ್ನು ನೋಡಿಕೊಳ್ಳುತ್ತವೆ.
ಸಂಗೀತಾ ಶೃಂಗೇರಿ, ನಟಿ