ಹುಡುಗ-ಹುಡುಗಿಯ ನಡುವೆ ಇಲ್ಲೊಂದು ಸ್ಪರ್ಧೆಯಿದೆ. ಸದಾ ನಾ ಮುಂದು ತಾ ಮುಂದು ಎಂಬಂತೆ ಇಬ್ಬರೂ ಸ್ಪರ್ಧೆಯಲ್ಲೇ ಮುಳುಗಿದ್ದಾರೆ. ಒಂದು ರೀತಿಯ ಹಾವು-ಮುಂಗುಸಿ ಕಿತ್ತಾಟ ಇವರದ್ದು. ಆದರೆ, ಅವರ ಜೀವನದ ಹಿನ್ನೆಲೆ ಬೇರೊಂದು ಕಥೆಯನ್ನೇ ಹೇಳುತ್ತದೆ.
ಈ ವಾರ ತೆರೆಕಂಡ “ಸಂತೋಷ ಸಂಗೀತ’ ಸಿನಿಮಾ ಪ್ರೇಮ-ಪ್ರೀತಿಯ ಔತಣ ಬಡಿಸಿದೆ ಎನ್ನಬಹುದು.
ಕಥೆಯಲ್ಲಿ ಹುಡುಗ ವಿನಯ ಸ್ವಭಾವದ, ವಿಚಾರವಂತ. ಹುಡುಗಿ ಕೊಂಚ ಕೋಪಿಷ್ಠೆ, ನಾನೇ ಸರಿ ಎಂಬ ಭಾವ. ನಾಯಕ-ನಾಯಕಿ ಇಲ್ಲಿ ವೈರಿಗಳ್ಳೋ, ಸ್ನೇಹಿತರೋ, ಪ್ರೇಮಿಗಳ್ಳೋ ಎಂಬುದು ಚಿತ್ರದ ಆರಂಭದಲ್ಲಿ ಪ್ರೇಕ್ಷಕರಿಗೆ ಗೋಚರಿಸುವ ಗೊಂದಲ. ಅಸಲಿಗೆ ಇವರ್ಯಾರು, ಇವರ ನಡುವಿನ ಸಂಬಂಧವೇನು ಎಂಬುದನ್ನು ಸಿನಿಮಾ ನೋಡಿ ತಿಳಿದರೆ ಚೆಂದ. ಒಂದೇ ಸಾಲಿನಲ್ಲಿ ಹೇಳಬೇಕಾದರೆ, ಇದು ಕೆಲವು ತಿರುವುಗಳಿರುವ ಸರಳ ಪ್ರೇಮಕಥೆ. ಹೇಳಲು ವಿಶೇಷವೆನೂ ಇಲ್ಲದಿದ್ದರೂ, ಕಥೆಯನ್ನು ಸರಾಗವಾಗಿ ಮುನ್ನಡೆಸಿದ್ದಾರೆ ನಿರ್ದೇಶಕ ಸಿದ್ದು. ನಾಯಕ ನಾಯಕಿಯರ ಮೂರು ಜೀವನದ ಘಟ್ಟವನ್ನು ಇಲ್ಲಿ ಗುಟ್ಟಾಗಿಯೇ ನಿರೂಪಿಸಲಾಗಿದೆ.
ನಾಯಕಿ ರಾಣಿ ವರದ ನಡುವಿನ ಪ್ರೇಮದ ಸನ್ನಿವೇಶಗಳು ತೆರೆಯ ಮೇಲೆ ಅಂದವಾಗಿ ಮೂಡಿಬಂದಿವೆ. ಹಾಸ್ಯ, ಆ್ಯಕ್ಷನ್ ದೃಶ್ಯಗಳು ಕಥೆಗೆ ಪೂರಕವೆನ್ನಬಹುದು. ತಾಂತ್ರಿಕ ದೃಷ್ಟಿಯಿಂದ ಚಿತ್ರ ಚೆನ್ನಾಗಿದೆ. ಉಳಿದಂತೆ ದೊಡ್ಡಣ್ಣ, ಅವಿನಾಶ್, ವಾಣಿ ನಕ್ಷತ್ರ, ಲಯ ಕೋಕಿಲ, ಮಿಮಿಕ್ರಿ ಗೋಪಿ, ಮಡೆನೂರು ಮನು ಚಿತ್ರದಲ್ಲಿ ನಟಿಸಿದ್ದಾರೆ.
-ನಿತೀಶ ಡಂಬಳ